ಬೆಂಗಳೂರು: ಎಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿ 2015ರಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿಗಣತಿ) ವರದಿಯನ್ನು ಸರ್ಕಾರ ಸ್ವೀಕರಿಸಬೇಕೇ, ಬೇಡವೇ ಎನ್ನುವ ವಿಷಯವಾಗಿ ಮತ್ತೆ ತುರುಸಿನ ಚರ್ಚೆ ಶುರುವಾಗಿದೆ. ಬಿಹಾರ ಸರ್ಕಾರವು ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದರಿಂದ ಈ ಚರ್ಚೆ ಇನ್ನಷ್ಟು ಕಾವು ಪಡೆದುಕೊಂಡಿದೆ.
ವರದಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಿಂದುಳಿದ, ಅತಿ ಹಿಂದುಳಿದ ಜಾತಿ ಒಕ್ಕೂಟಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿವೆ. ಯಾವುದೇ ಕಾರಣಕ್ಕೂ ವರದಿ ಬಿಡುಗಡೆ ಮಾಡದಂತೆ ರಾಜಕೀಯ ಪ‍್ರಾತಿನಿಧ್ಯದಲ್ಲಿ ಹೆಚ್ಚು ಪಾಲು ಪಡೆದಿರುವ ಪ್ರಬಲ ಜಾತಿಯ ಸಂಘಟನೆಗಳು ಒತ್ತಡ ಹಾಕುತ್ತಿವೆ. ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ವರದಿ ಸ್ವೀಕರಿಸುವುದಾಗಿ ಹೇಳಿದ್ದ ಸಿದ್ದರಾಮಯ್ಯ, ಅಧಿಕಾರ ಹಿಡಿದ ಬಳಿಕ ವರದಿ ಸ್ವೀಕರಿಸಲು ಸಿದ್ಧವಿರುವುದಾಗಿ ಘೋಷಿಸಿದ್ದರು. ತಮ್ಮ ಅವಧಿ (ನ. 26) ಮುಗಿಯುವುದರೊಳಗೆ ವರದಿ ಸಲ್ಲಿಸಲು ಆಯೋಗದ ಹಾಲಿ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಮುಂದಾಗಿದ್ದಾರೆ. ಸರ್ಕಾರವು ಕಾಂತರಾಜ ವರದಿಯನ್ನು ಯಥಾಸ್ಥಿತಿಯಲ್ಲಿ ಸ್ವೀಕರಿಸಲಿದೆಯೇ? ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗ ಪರಿಷ್ಕರಿಸಿದ ವರದಿಯನ್ನು ಸ್ವೀಕರಿಸಲಿದೆಯೇ ಎಂಬ ಜಿಜ್ಞಾಸೆ ಮೂಡಿದೆ.
ರಾಜ್ಯದಲ್ಲಿ ವಿವಿಧ ಸಮುದಾಯದವರ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ, ಸರ್ಕಾರದ ಸೌಲಭ್ಯಗಳು ಎಷ್ಟರಮಟ್ಟಿಗೆ ತಲುಪಿವೆ, ಉದ್ಯೋಗದ ಸ್ಥಿತಿ ಏನು ಎಂಬ ಬಗ್ಗೆ ಅಧ್ಯಯನ ನಡೆಸಲು ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ (2013–2018) ಸಮೀಕ್ಷೆ ನಡೆಸಲಾಗಿತ್ತು. ವರದಿ ತಯಾರಿಸಲು ₹158.47 ಕೋಟಿ ವೆಚ್ಚವಾಗಿದೆ. ವರದಿ ಸಿದ್ಧಗೊಳ್ಳುವ ವೇಳೆಗೆ ವಿಧಾನಸಭೆ ಚುನಾವಣೆ ಎದುರಾಗಿತ್ತು. ನಂತರ ಅಧಿಕಾರಕ್ಕೆ ಬಂದ ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರ ವರದಿ ಸ್ವೀಕರಿಸಲು ಮುಂದಾಗಿರಲಿಲ್ಲ.
ಸಮೀಕ್ಷೆಯಲ್ಲಿ ಸಂಗ್ರಹಿಸಿದ್ದ ಜಾತಿಗಣತಿ ದತ್ತಾಂಶಗಳನ್ನು ಒಳಗೊಂಡ ವರದಿಗೆ ಹಿಂದಿನ ಆಯೋಗದ ಎಲ್ಲ ಸದಸ್ಯರು ಮತ್ತು ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಹಾಕಿದ್ದಾರೆ. ಆದರೆ, ವರದಿಯ ಮತ್ತೊಂದು ಭಾಗವಾಗಿದ್ದ ಪ್ರವರ್ಗಗಳ ಮರು ವಗೀಕರಣದ ವರದಿಗೆ ಎಲ್ಲ ಸದಸ್ಯರು ಸಹಿ ಹಾಕಿದ್ದರೂ, ‘ಅಧಿಕೃತ ಮುದ್ರೆ’ (ಅಂದಿನ ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ) ಬಿದ್ದಿಲ್ಲ ಎನ್ನುವುದು ನಂತರ ಬಹಿರಂಗವಾಗಿತ್ತು. ಹೀಗಾಗಿ, ಕಾಂತರಾಜ ವರದಿಯನ್ನು ಯಥಾಸ್ಥಿತಿಯಲ್ಲಿ ಹಾಲಿ ಆಯೋಗ ಸಲ್ಲಿಸಲು ಈ ತಾಂತ್ರಿಕ ಸಮಸ್ಯೆ ಇದೆ.
ಹೀಗಾಗಿ, ಹಿಂದಿನ ಆಯೋಗ ನಡೆಸಿದ್ದ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡು ವರದಿ ಸಿದ್ಧಪಡಿಸುವಂತೆ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗಕ್ಕೆ ಸರ್ಕಾರ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಹೀಗಾಗಿ, ಐವರು ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಈಗಾಗಲೇ ಸಭೆಗಳನ್ನು ನಡೆಸಿದೆ. ಪ್ರವರ್ಗಗಳ ಮರು ವರ್ಗೀಕರಣ, ವರದಿಯಲ್ಲಿ ಇರಬೇಕಾದ ಶಿಫಾರಸುಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಹಾಲಿ ಆಯೋಗ ಮತ್ತು ತಜ್ಞರು ಬುಧವಾರ (ಅ.4) ಮತ್ತೆ ಸಭೆ ನಡೆಸಲಿದ್ದಾರೆ.
ಈ ಮಧ್ಯೆ, ಕಾಂತರಾಜ ಮತ್ತು ಅವರ ಅವಧಿಯ ಆಯೋಗದ ಕೆಲವು ಸದಸ್ಯರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅವಧಿಯಲ್ಲಿ ಸಿದ್ಧಪಡಿಸಿದ್ದ ಸಮೀಕ್ಷಾ ವರದಿಯ ಪರಿಷ್ಕರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ವಿರೋಧದ ವಾದವೇನು?
l ಜಾತಿ ಕಾರಣಕ್ಕೆ ಪ್ರಬಲ ಜಾತಿಗಳಿಗೆ ಸಿಕ್ಕಿರುವ ಹೆಚ್ಚಿನ ಪ್ರಾತಿನಿಧ್ಯ ಕೈತಪ್ಪುತ್ತದೆ ಎಂಬ ಭಾವನೆ
l ವರದಿ ಸ್ವೀಕರಿಸಿದರೆ ಬಹಿರಂಗಪಡಿಸುವಂತೆ ರಾಜಕೀಯ ಪಕ್ಷಗಳು, ಜಾತಿ ಸಂಘಟನೆಗಳಿಂದ ಒತ್ತಡ ಸಾಧ್ಯತೆ
l ಇಲ್ಲಿಯವರೆಗೆ ಮೀಸಲಾತಿ ವಂಚಿತವಾದ ಸಮುದಾಯಗಳಿಗೆ ಹೆಚ್ಚಿನ ಪಾಲು ಕೊಡಬೇಕಾಗುತ್ತದೆ ಎಂಬ ಆತಂಕ
ಪರ ವಾದವೇನು?
l ಹಿಂದುಳಿದಿರುವಿಕೆ ಆಧಾರದ ಮೇಲೆ ಪ್ರತಿ ಜಾತಿಗೆ ಸರ್ಕಾರಿ ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಲಭ್ಯವಾಗಲಿದೆ
l ವೈಜ್ಞಾನಿಕವಾಗಿ ‘ಪ್ರವರ್ಗ’ಗಳ ಮರು ವರ್ಗೀಕರಣ ಸಾಧ್ಯ
l ಸೌಲಭ್ಯ ವಂಚಿತ ಸಮುದಾಯಗಳಿಗೆ ಅನುಕೂಲ ಕಲ್ಪಿಸಬಹುದು. ಸಾಮಾಜಿಕ, ಶೈಕ್ಷಣಿಕ ಅಳತೆಗೋಲಿನಲ್ಲಿ ಮೀಸಲಾತಿ ನೀಡಬಹುದು
‘ಜಾತಿ ಗಣತಿ ವರದಿ ಇನ್ನೂ ನೀಡಿಲ್ಲ’
‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಜಾತಿ ಗಣತಿ ವರದಿಯನ್ನು ಇನ್ನೂ ನಮಗೆ ನೀಡಿಲ್ಲ. ವರದಿ ಕೇಳಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
‘ಜಾತಿ ಗಣತಿ ಹಾಗೂ ಸಾಮಾಜಿಕ ಆರ್ಥಿಕ ಸರ್ವೆಗೆ ನಾನೇ ಆದೇಶಿಸಿದ್ದೆ. ವರದಿ ಪೂರ್ಣಗೊಳ್ಳುವ ಮುನ್ನ ನಮ್ಮ ಅವಧಿ ಮುಗಿಯಿತು. ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ವರದಿ ತೆಗೆದುಕೊಳ್ಳಲಿಲ್ಲ. ಹಾಗಾಗಿ, ಅದು ಹಾಗೇ ಬಿದ್ದಿದೆ’ ಎಂದರು.
‘ವರದಿ ನೀಡುವುದು ಆಯೋಗದ ಈಗಿನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಕೆಲಸ. ಅವರು ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ನೇಮಿಸಿದ ಅಧ್ಯಕ್ಷರಾಗಿದ್ದಾರೆ. ಇದೊಂದು ತೊಡಕಾಗಿದೆ’ ಎಂದರು.
‘ನವೆಂಬರ್ ಅಂತ್ಯದೊಳಗೆ ಸಲ್ಲಿಕೆ’
‘ಸಮೀಕ್ಷೆಯ ವರದಿಯನ್ನು ನವೆಂಬರ್ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸುತ್ತೇವೆ. ನಮ್ಮ ಅವಧಿಯೂ ನವೆಂಬರ್‌ಗೆ ಮುಗಿಯಲಿದೆ. ವರದಿ ಬಿಡುಗಡೆಗೆ ಪ್ರಬಲ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿರುವುದು ಗೊತ್ತಿಲ್ಲ’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಹಾರದಲ್ಲಿ ಕೇವಲ ಜಾತಿ ಜನಗಣತಿ ಮಾಡಲಾಗಿದೆ. ಸರ್ಕಾರದಿಂದ ಸೌಲಭ್ಯ ಕಲ್ಪಿಸುವ ಸಲುವಾಗಿ ನಮ್ಮ ವರದಿಯಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗಿದೆ. ವರದಿ ಕೊಡುವಂತೆ ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ. ಸರ್ಕಾರವೂ ಒತ್ತಡ ಹಾಕಿಲ್ಲ. ಸಮೀಕ್ಷೆ ಕೆಲಸಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಹೀಗಿರುವಾಗ ಸರ್ಕಾರಕ್ಕೆ ವರದಿ ಸಲ್ಲಿಸದೇ ಇದ್ದರೆ ಹೇಗೆ? ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸಮೀಕ್ಷೆ ನಡೆದಿತ್ತು. ಆದರೆ, ಕೆಲವು ಕಾರಣಗಳಿಗಾಗಿ ಸಲ್ಲಿಕೆ ಆಗಿರಲಿಲ್ಲ. ಈಗ ಮತ್ತೆ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ದೇಶದಲ್ಲೇ ಮೊದಲು ಸಮೀಕ್ಷೆ ನಡೆದಿದ್ದು ಕರ್ನಾಟಕದಲ್ಲಿ’ ಎಂದರು.
l 2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.30 ಕೋಟಿ
l 6 ಕೋಟಿ ಜನರನ್ನು ಸಮೀಕ್ಷೆ ಒಳಗೊಂಡಿದೆ
l ಗ್ರಾಮೀಣ ಭಾಗದಲ್ಲಿ ಶೇ 99, ಬೆಂಗಳೂರಿನಲ್ಲಿ ಶೇ 84ರಷ್ಟು ಸಮೀಕ್ಷೆ ನಡೆದಿದೆ
l ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿವೆ
l ಸರ್ಕಾರ ಗುರುತಿಸಿರುವ 816 ಇತರ ಹಿಂದುಳಿದ ಜಾತಿ ಮತ್ತು ಉಪಜಾತಿಗಳು ಸೇರಿ ಒಟ್ಟು 1,351 ಜಾತಿಗಳ ಕುರಿತು 55 ಮಾನದಂಡ ಆಧರಿಸಿ ಸಮೀಕ್ಷೆ ನಡೆದಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.