ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಲಿಂಗಾ ರೆಡ್ಡಿಗೆ ಸ್ಥಾನಮಾನ, ಹೈಕಮಾಂಡ್‌ ಜತೆ ಚರ್ಚೆ: ಡಿ.ಕೆ. ಶಿವಕುಮಾರ್‌

ಕೆಪಿಸಿಸಿ ಅಧ್ಯಕ್ಷ ಹೇಳಿಕೆ
Last Updated 18 ಸೆಪ್ಟೆಂಬರ್ 2020, 16:15 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಕುರಿತು ಹೈಕಮಾಂಡ್‌ ಜತೆ ಚರ್ಚಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇತ್ತೀಚೆಗೆ ಎಐಸಿಸಿ ಪುನರ್‌ರಚನೆ ಸಮಯದಲ್ಲಿ ಎಚ್‌.ಕೆ. ಪಾಟೀಲ, ದಿನೇಶ್‌ ಗುಂಡೂರಾವ್‌ ಮತ್ತು ಕೃಷ್ಣ ಬೈರೇಗೌಡ ಅವರಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ. ಏಳು ಬಾರಿ ಶಾಸಕರಾಗಿರುವ ಮತ್ತು ನಾಲ್ಕು ಬಾರಿ ಸಚಿವರಾಗಿದ್ದ ತಮ್ಮನ್ನು ಪ‍ಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ರಾಮಲಿಂಗಾ ರೆಡ್ಡಿ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಹರಿದಾಡುತ್ತಿವೆ.

ಈ ಬೆಳವಣಿಗೆ ಬಗ್ಗೆ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್‌, ‘ರಾಮಲಿಂಗಾ ರೆಡ್ಡಿ ಅವರು ಪಕ್ಷದಲ್ಲಿ ನನ್ನಷ್ಟೇ ಹಿರಿಯರು. ಅವರಿಗೆ ಪ್ರಮುಖ ಸ್ಥಾನಮಾನ ಪಡೆಯುವ ಎಲ್ಲ ಅರ್ಹತೆಗಳೂ ಇವೆ. ಅವರಿಗೆ ಸ್ಥಾನಮಾನ ಕಲ್ಪಿಸುವ ಕುರಿತು ಪಕ್ಷದ ವರಿಷ್ಠರ ಜತೆ ಮಾತನಾಡುವೆ. ರೆಡ್ಡಿ ಅವರು ಅಸಮಾಧಾನಗೊಂಡಿರುವುದು ನಿಜವೇ ಆಗಿದ್ದಲ್ಲಿ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆ.ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಹಿರಿಯ ನಾಯಕರನ್ನು ಪರಿಗಣಿಸಬೇಕಿತ್ತು’ ಎಂದು ಅವರು ಹೇಳಿದರು.

ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಇದರಿಂದ ಮುನಿಸಿಕೊಂಡಿದ್ದ ಅವರು, ಪಕ್ಷದ ಚಟುವಟಿಕೆಗಳಿಂದ ಕೆಲಕಾಲ ದೂರ ಉಳಿದಿದ್ದರು. ಮೈತ್ರಿ ಸರ್ಕಾರದ ಪತನಕ್ಕೂ ಮುನ್ನ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟಾಗ ಅವರು ಕೂಡ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷದ ನಾಯಕರ ಮನವೊಲಿಕೆಗೆ ಮಣಿದು ರಾಜೀನಾಮೆ ಹಿಂಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT