ಬೆಂಗಳೂರು: ‘ಕಾಮಗಾರಿಗಳನ್ನು ಪೂರೈಸಿ ಮೂರ್ನಾಲ್ಕು ವರ್ಷಗಳಾದರೂ ತನಿಖೆ, ವರದಿ ಎಂದು ಬಿಲ್ ಪಾವತಿಯನ್ನು ಹೊಸ ಸರ್ಕಾರ ಮುಂದೂಡುತ್ತಿರುವುದರಿಂದ ಗುತ್ತಿಗೆದಾರರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ’ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಾಕಿ ಬಿಲ್ ಮೊತ್ತವನ್ನು ಆ.31ರೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಹೋರಾಟ ನಿರ್ಧರಿಸಲಾಗುತ್ತದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುತ್ತದೆ’ ಎಂದು ತಿಳಿಸಿದರು.
‘ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬಿಬಿಎಂಪಿಗಳಲ್ಲಿ ನಡೆಸಿರುವ ಕಾಮಗಾರಿಗಳಿಗೆ ಸುಮಾರು ₹25 ಸಾವಿರ ಕೋಟಿ ಬಿಲ್ ಪಾವತಿ ಬಾಕಿ ಉಳಿದಿದೆ. ಬ್ಯಾಂಕ್‌ನಲ್ಲಿ ಸಾಲ ಮಾಡಿ, ಚಿನ್ನ, ನಿವೇಶನಗಳನ್ನು ಅಡವಿಟ್ಟು ಹಣವನ್ನು ಗುತ್ತಿಗೆದಾರರು ತಂದಿದ್ದಾರೆ. ಹಣ ಬಿಡುಗಡೆಯಾಗುವುದು ಎರಡು ಮೂರು ತಿಂಗಳು ತಡವಾದರೂ ಬಡ್ಡಿ ಹೆಚ್ಚಾಗುತ್ತಲೇ ಹೋಗುತ್ತದೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿಗೆ ತಲುಪಲಿದ್ದಾರೆ’ ಎಂದರು.
‘ನೀರಾವರಿ (ಜಲಸಂಪನ್ಮೂಲ) ಇಲಾಖೆಯಲ್ಲಿ ಸುಮಾರು ₹16 ಸಾವಿರ ಕೋಟಿ ಬಾಕಿ ಉಳಿದಿದೆ. ಲಭ್ಯ ಅನುದಾನಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕಾರ್ಯಾದೇಶ ನೀಡಲಾಗಿದೆ ಎನ್ನುತ್ತಾರೆ. ಇಲಾಖೆಗಳಲ್ಲಿ ಅನುದಾನ ಲಭ್ಯವಿದ್ದರಷ್ಟೇ ಕಾಮಗಾರಿಗಳಿಗೆ ಟೆಂಡರ್ ಕರೆಯಬೇಕು ಎಂದು ನಾವು ಹಿಂದಿನಿಂದಲೂ ಹೇಳುತ್ತಿದ್ದೇವೆ. ಸರ್ಕಾರ ನಿರಂತರ, ಅದನ್ನು ನಡೆಸುವವರು ಬದಲಾಗುತ್ತಾರೆ. ಹಿಂದಿನ ಸರ್ಕಾರದ ಮೇಲೆ ದೂರಿ, ಸಬೂಬು ಹೇಳುವುದು ಸರಿಯಲ್ಲ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರ ಭ್ರಷ್ಟಾಚಾರದ ತನಿಖೆಯೂ ಆಗಬೇಕು’ ಎಂದರು.
ಯಾರೂ ಪ್ರಾಮಾಣಿಕರಲ್ಲ:
‘ಕಾಮಗಾರಿಗಳು ಸುಗಮವಾಗಿ ನಡೆದು, ಬಿಲ್ ಪಾವತಿಗೆ ಒಂದು ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿಕೊಳ್ಳಲಾಗಿದೆ. ಇದರಿಂದ ಭ್ರಷ್ಟಾಚಾರ, ಕಮಿಷನ್ ಕಡಿಮೆಯಾಗುತ್ತದೆ. ಯಾರೂ ಪ್ರಾಮಾಣಿಕರಲ್ಲ, ಸತ್ಯ ಹರಿಶ್ಚಂದ್ರರಲ್ಲ. ಶೇ 7ರಷ್ಟಿರುವ ಕಮಿಷನ್‌ನಲ್ಲಿ ಸ್ವಲ್ಪ ಕಡಿಮೆಯಾಗಬಹುದು ಎಂಬ ಆಶಾಭಾವನೆ ಇದೆ’ ಎಂದರು.
ಪಟ್ಟಿ ಕೊಡಿ: ‘ಕಾಮಗಾರಿ ಮಾಡಿಲ್ಲ, ಬಿಲ್ ಮಾಡಿದ್ದಾರೆ. ಡಬಲ್ ಬಿಲ್ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂತಹ ಕಾಮಗಾರಿ ಮಾಡಿರುವವರು ಯಾರು? ನಿರ್ವಹಣೆ ಮಾಡಿದ ಅಧಿಕಾರಿಗಳು ಯಾರು ಯಾರು? ಎಂಬ ಪಟ್ಟಿಯನ್ನು ನೀಡಲಿ’ ಎಂದು ಕೆಂಪಣ್ಣ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.