ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 177 ಹೆಕ್ಟೇರ್‌ ಕಾಡಿಗೆ ಆಪತ್ತು

ಗೋವಾಕ್ಕೆ ವಿದ್ಯುತ್‌ ಮಾರ್ಗ l ಇಂದು ಕೇಂದ್ರ ಉನ್ನತಾಧಿಕಾರ ಸಮಿತಿ ಸಭೆ
Last Updated 13 ಏಪ್ರಿಲ್ 2023, 0:15 IST
ಅಕ್ಷರ ಗಾತ್ರ

ನವದೆಹಲಿ: ಗೋವಾ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಒದಗಿಸಲು ಕರ್ನಾ ಟಕದ ಪಶ್ಚಿಮ ಘಟ್ಟಗಳ ಮೂಲಕ ವಿದ್ಯುತ್ ಮಾರ್ಗ ನಿರ್ಮಿಸುವ ಯೋಜನೆಗೆ 177 ಹೆಕ್ಟೇರ್ ಅರಣ್ಯ ಬಳಕೆ ಕುರಿತು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸಭೆ ಇದೇ 13ರಂದು ನವದೆಹಲಿಯಲ್ಲಿ ನಡೆಯಲಿದೆ.

ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾಕ್ಕೆ ವಿದ್ಯುತ್ ಮಾರ್ಗ ನಿರ್ಮಿಸಲು ಮುಂದಾಗಿರುವ ‘ಗೋವಾ ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’ ಸಂಸ್ಥೆಯು ಅರಣ್ಯ ಪ್ರದೇಶವನ್ನು ಅರಣ್ಯೇತರ ಬಳಕೆಗೆ ಅವಕಾಶ ನೀಡುವಂತೆ ಕೋರಿದೆ. ಧಾರವಾಡ ಜಿಲ್ಲೆಯಲ್ಲಿ 4.70 ಹೆಕ್ಟೇರ್, ಬೆಳಗಾವಿ ಜಿಲ್ಲೆಯಲ್ಲಿ 101 ಹೆಕ್ಟೇರ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 70 ಹೆಕ್ಟೇರ್ ಅರಣ್ಯ ಪ್ರದೇಶಗಳ ಪರಿವರ್ತನೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆ ಜಾರಿಯಾದರೆ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ 177 ಹೆಕ್ಟೇರ್‌ ದಟ್ಟ ಕಾಡು ನಾಶವಾಗಲಿದೆ.

ಉದ್ದೇಶಿತ ವಿದ್ಯುತ್ ಮಾರ್ಗವು ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ದಾಂಡೇಲಿ ಆನೆ ಧಾಮ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಭೀಮಗಡ ಅಭಯಾರಣ್ಯದ ಪರಿಸರ ಸೂಕ್ಷ್ಮವಲಯ, ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯ ಹಾಗೂ ದಾಂಡೇಲಿ ಅಭಯಾರಣ್ಯಗಳ ಮೂಲಕ ಹಾದುಹೋಗಲಿದೆ.

ಗೋವಾ ರಾಜ್ಯಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಉದ್ದೇಶಿಸಿರುವ 400 ಕೆ.ವಿ ಸಾಮರ್ಥ್ಯದ ವಿದ್ಯುತ್‌ ಪ್ರಸರಣ ಮಾರ್ಗಕ್ಕೆ ಅನುಮತಿ ನೀಡುವಂತೆ ಸಂಸ್ಥೆಯು ಕರ್ನಾಟಕದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್‌) ಅವರಿಗೆ 2019ರಲ್ಲಿ ಪತ್ರ ಬರೆದಿತ್ತು. ಅಂದಾಜು ₹265.57 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಈ ಮಾರ್ಗದಲ್ಲಿ ಈಗಾಗಲೇ ವಿದ್ಯುತ್‌ ಪ್ರಸರಣ ಮಾರ್ಗವಿದೆ. ಇದರ ಹೊರತಾಗಿ ಹೆಚ್ಚುವರಿ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಈ ಯೋಜನೆಯ ಸಾಧಕ ಬಾಧಕಗಳ ಕುರಿತು ವರದಿ ಸಲ್ಲಿಸುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಸಿಸಿಎಫ್‌) ಅರಣ್ಯ ಇಲಾಖೆ ಸೂಚನೆ ನೀಡಿತ್ತು.

2020ರ ಫೆಬ್ರುವರಿಯಲ್ಲಿ ಕೆನರಾ ವೃತ್ತದ ಸಿಸಿಎಫ್‌ ಸ್ಥಳ ಪರಿಶೀಲನೆ ನಡೆಸಿ, ‘ಪಶ್ಚಿಮ ಘಟ್ಟದ ದಟ್ಟ ಅರಣ್ಯದಲ್ಲಿ ಈ ಯೋಜನೆ ಹಾದು ಹೋಗಲಿದೆ. ಈ ಯೋಜನೆಯಿಂದ ಹುಲಿ ಆವಾಸಸ್ಥಾನದ ಮೇಲೂ ಪರಿಣಾಮ ಬೀರಲಿದೆ. ಈ ಪ್ರಸ್ತಾವವನ್ನು ತಿರಸ್ಕರಿಸಬೇಕು’ ಎಂದು ಶಿಫಾರಸು ಮಾಡಿದ್ದರು. ಈ ಯೋಜನೆಯ ಪ್ರಸ್ತಾವವನ್ನು ತಿರಸ್ಕರಿಸುವುದು ಉತ್ತಮ ಎಂದೂ ಪಿಸಿಸಿಎಫ್ ಅವರೂ 2021ರಲ್ಲಿ ವರದಿ ಸಲ್ಲಿಸಿದ್ದರು.

ಈ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಗೋವಾ ಫೌಂಡೇಷನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಕುರಿತು ವರದಿ ನೀಡುವಂತೆ ಸಿಇಸಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ‘ಈ ಮಾರ್ಗದಲ್ಲಿ ಈಗಾಗಲೇ 220 ಕೆ.ವಿ.ಮಾರ್ಗ ಇದೆ. ಹೊಸ ಮಾರ್ಗ ನಿರ್ಮಾಣಕ್ಕೆ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಅದರ ಬದಲು ಈಗಿರುವ ಮಾರ್ಗ ಬಳಸುವುದು ಉತ್ತಮ’ ಎಂದು ಸಿಇಸಿ ಶಿಫಾರಸು ಮಾಡಿತ್ತು. ಈ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ ಒಪ್ಪಿತ್ತು.

‘ಅರಣ್ಯ ಭೂಮಿ ಪರಿವರ್ತನೆಗೆ ಸರ್ಕಾರ ಅವಕಾಶ ನೀಡಿದರೆ 60 ಸಾವಿರಕ್ಕೂ ಹೆಚ್ಚು ಮರಗಳ ಹನನವಾಗಲಿದೆ. ಅರಣ್ಯ ನಾಶವಾಗುವ ಕಾರಣಕ್ಕೆ ಗೋವಾ ರಾಜ್ಯದಲ್ಲೇ ಈ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ಪರಿಶೀಲನೆ ಹಂತದಲ್ಲಿರುವ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಬೇಕು’ ಎಂದು ಶಾಸಕಿ ಸೌಮ್ಯಾ ರೆಡ್ಡಿ ಅವರು ಕರ್ನಾಟಕ ಸರ್ಕಾರಕ್ಕೆ ಈ ಹಿಂದೆ ಪತ್ರ ಬರೆದಿದ್ದರು.

‘ಉದ್ದೇಶಿತ ವಿದ್ಯುತ್‌ ಮಾರ್ಗ ಹಾದುಹೋಗುವ ಪ್ರದೇಶಗಳು ಹುಲಿ, ಚಿರತೆ, ಆನೆ, ಕೆನ್ನಾಯಿ, ಕಾಳಿಂಗ ಸರ್ಪ, ಮಂಗಟ್ಟೆ ಹಕ್ಕಿ (ಹಾರ್ನ್‌ಬಿಲ್) ಮುಂತಾದ ಅಳಿವಿನಂಚಿನಲ್ಲಿರುವ ಕಾಡುಪ್ರಾಣಿಗಳ ಆಶ್ರಯ ತಾಣಗಳಾಗಿವೆ. ಈ ಯೋಜನೆ ಜಾರಿಯಾದರೆ ಈ ಕಾಡುಪ್ರಾಣಿಗಳು ಆಪತ್ತು ಎದುರಿಸಲಿವೆ. ಮಾನವ– ವನ್ಯಜೀವಿ ಸಂಘರ್ಷವೂ ಹೆಚ್ಚಲಿದೆ’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.

‘ಹಲವಾರು ನದಿ, ಹಳ್ಳ-ಕೊಳ್ಳಗಳ ಮೂಲವನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಡುಗಳು ರಾಷ್ಟ್ರೀಯ ಹೆದ್ದಾರಿ 4ಎ, ರೈಲು ಮಾರ್ಗ, ಅಳ್ನಾವರ್- ರಾಮನಗರ ರಾಜ್ಯ ಹೆದ್ದಾರಿ ಸೇರಿದಂತೆ ಹಲವಾರು ಯೋಜನೆಗಳಿಂದಾಗಿ ಈಗಾಗಲೇ ಹಾನಿಗೊಳಗಾಗಿವೆ. ಇಲ್ಲಿ ಹೊಸ ವಿದ್ಯುತ್ ಮಾರ್ಗಕ್ಕೆ ಅನುಮತಿ ನೀಡಿದಲ್ಲಿ ಅಳಿದುಳಿದ ಕಾಡುಗಳ ಮೇಲೂ ಗಂಭೀರ ಪರಿಣಾಮ ಉಂಟಾಗಲಿದೆ’ ಎಂದು ಎಚ್ಚರಿಸಿದರು.

‘ಗೋವಾ–ಕರ್ನಾಟಕ ಭಾಗದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು 2022ರ ಹುಲಿ ಗಣತಿ ವರದಿಯಲ್ಲಿ ತಿಳಿಸಲಾಗಿದೆ. ಇಂತಹ ಸನ್ನಿವೇಶದಲ್ಲಿ ಯೋಜನೆ ಜಾರಿಗೊಳಿಸುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT