ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಕನ್ನಡ ಭವನ:  ರಾಜ್ಯ ಸರ್ಕಾರದಿಂದ ₹ 3 ಕೋಟಿ ನೆರವು– ಬೊಮ್ಮಾಯಿ

ಮಹಾರಾಷ್ಟ್ರ ನೆಲದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ
Last Updated 10 ಅಕ್ಟೋಬರ್ 2022, 10:38 IST
ಅಕ್ಷರ ಗಾತ್ರ

ಕನ್ನೇರಿ (ಕೊಲ್ಹಾಪುರ ಜಿಲ್ಲೆ): 'ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ನೇರಿಯ ಸಿದ್ದಗಿರಿ ಮಠದ ಆವರಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ₹ 3 ಕೋಟಿ ನೆರವು ನೀಡುವುದಾಗಿ' ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನೇರಿ ಮಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಸಮಾವೇಶ ಉದ್ಘಾಟಿಸಿ, ಕನ್ನಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, 'ಈಗಾಗಲೇ ₹ 1 ಕೋಟಿ ನೀಡಿದ್ದು, ದೀಪಾವಳಿ ಹಬ್ಬಕ್ಕೆ ಮತ್ತೆ ₹ 2 ಕೋಟಿ ನೀಡಲಾಗುವುದು' ಎಂದರು.

'ಕನ್ನೇರಿ ಮಠವು ದೇಶದ ಆದರ್ಶ ಮಠವಾಗಿದೆ. ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಕರ್ನಾಟಕದಲ್ಲಿಯೂ ದೊಡ್ಡ ಮಠ ತೆರೆಯಬೇಕು. ಅವರ ಆದರ್ಶ ಕೆಲಸಗಳು ನಮಗೂ ಬೇಕು. ಮಠಕ್ಕೆ ಬೇಕಾಗುವ ಜಾಗ ಹಾಗೂ ಅಗತ್ಯ ನೆರವನ್ನು ನೀಡಲಾಗುವುದು' ಎಂದೂ ವಾಗ್ದಾನ ಮಾಡಿದರು.

ಭಕ್ತಿ ಚಳವಳಿಯ ಏಕಮಾತ್ರ ದೇಶ ನಮ್ಮದು:

'ಜಗತ್ತಿನ ಬಹಳಷ್ಟು ದೇಶಗಳು ವಿವಿಧ ಚಳವಳಿಗಳಿಗೆ ಸಾಕ್ಷಿಯಾಗಿವೆ. ಆದರೆ ಭಕ್ತಿ ಚಳವಳಿ ನಡೆದಿದ್ದು ಭಾರತದಲ್ಲಿ ಮಾತ್ರ. ಈಗಿನ ಮಠಗಳು ಆ ಚಳವಳಿಯನ್ನು ಮುಂದುವರಿಸಿಕೊಂಡು ಬಂದಿವೆ. ಇದೇ ನಮ್ಮ ಹಿರಿಮೆ' ಎಂದರು.

'ನಾಗರಿಕತೆ ಹಾಗೂ ಸಂಸ್ಕೃತಿಯ ವ್ಯತ್ಯಾಸವೇ ಬಹಳ ಜನರಿಗೆ ಗೊತ್ತಾಗಿಲ್ಲ. ನಾಗರೀಕತೆಯನ್ನೇ ನಾವು ಸಂಸ್ಕೃತಿ ಎಂದುಕೊಂಡಿದ್ದಾರೆ. ನಾವ ಹೇಗೆ ಬೆಳೆದುಬಂದೆವು ಎನ್ನವುದು ನಮ್ಮ ಸಂಸ್ಕೃತಿ, ಹೇಗೆ ಬದುಕುತ್ತಿದ್ದೇವೆ ಎನ್ನುವುದು ನಮ್ಮ ನಾಗರಿಕತೆ. ಬೀಸುವ ಕಲ್ಲು ನಮ್ಮ ಸಂಸ್ಕೃತಿಯಾದರೆ ಮಿಕ್ಸರ್ ಗ್ರ್ಯಾಂಡರ್ ನಮ್ಮ ನಾಗರಿಕತೆ' ಎಂದೂ ಸಿ.ಎಂ ವಿಶ್ಲೇಷಿಸಿದರು.

'ಉತ್ಕೃಷ್ಟವಾದ, ಕರಾರುರಹಿತವಾದ ಪ್ರೀತಿಯೇ ಭಕ್ತಿ. ಇಂಥ ಭಕ್ತಿ ಈ ಸಂತ ಸಮಾವೇಶದಲ್ಲಿ ಕಂಡಿದ್ದೇನೆ' ಎಂದರು.

'ಹುಟ್ಟುವ ಮುನ್ನವೇ ತಾಯಿ ಸಂಬಂಧ ಬೆಸೆದುಕೊಳ್ಳುತ್ತದೆ. ಹುಟ್ಟಿದ ಮೇಲೆ ಗೋತಾಯಿ, ಸತ್ತ ಮೇಲೆ ಭೂತಾಯಿ ಸಂಬಂಧ ಬೆಳೆಯುತ್ತವೆ. ಉಳಿದೆಲ್ಲವೂ ನಂತರದ ಸಂಬಂಧಗಳು' ಎಂದರು.

ಲಕ್ಷ ಗೋವುಗಳ ರಕ್ಷಣೆ:

ಕರ್ನಾಟಕದಲ್ಲಿ ಗೋ ರಕ್ಷಣೆಗಾಗಿ ಪುಣ್ಯಕೋಟಿ ಯೋಜನೆ ಆರಂಭಿಸಿದ ಮೇಲೆ ಒಂದು ಲಕ್ಷ ಗೋವುಗಳನ್ನು ರಕ್ಷಣೆ ಮಾಡಿದ್ದೇವೆ. ₹ 100 ಕೋಟಿ ಪ್ರತಿ ತಿಂಗಳು ಸಂಗ್ರಹವಾಗುತ್ತಿದೆ. ಜನರ ದುಡ್ಡಿನಿಂದ ಗೋವುಗಳ ರಕ್ಷಣೆ ಮಾಡುತ್ತಿದ್ದೇವೆ' ಎಂದು ಮುಖ್ಯಮಂತ್ರಿ ತಿಳಿಸಿದರು.

'ಆರ್ಥಿಕತೆ ಎಂದರೆ ಬರೀ ದುಡ್ಡಲ್ಲ; ದುಡಿಮೆ. ದುಡ್ಡೇ ದೊಡ್ಡಪ್ಪ ಎಂಬುದು ಗಾದೆ. ಆದರೆ ಈಗ ದುಡಿಮೆಯೇ ದೊಡ್ಡಪ್ಪ ಎನ್ನುವುದು ಸತ್ಯ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT