ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟದ 34 ಸ್ಥಾನ ಭರ್ತಿ: ಪೂರ್ಣ ಸರ್ಕಾರ ಸಾಕಾರ

* ಹಿರಿಯರ ಜತೆ ಕಿರಿಯರಿಗೂ ಹೊಣೆ
Published 27 ಮೇ 2023, 23:35 IST
Last Updated 27 ಮೇ 2023, 23:35 IST
ಅಕ್ಷರ ಗಾತ್ರ

ಬೆಂಗಳೂರು: 135 ಸದಸ್ಯ ಬಲದೊಂದಿಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಶನಿವಾರ ನಡೆದಿದೆ. ಸಚಿವ ಸಂಪುಟದ ಸಂಖ್ಯಾಬಲದ ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಪೂರ್ಣ ಸರ್ಕಾರ ಸಾಕಾರಗೊಂಡಂತಾಗಿದೆ.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಮತ್ತು ಎಂಟು ಶಾಸಕರು ಮೇ 20ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 24 ಸಚಿವರ ಸೇರ್ಪಡೆಯಿಂದ ಸಚಿವ ಸಂಪುಟ (ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಒಟ್ಟು 34) ಭರ್ತಿಯಾಗಿದೆ. ಹಿರಿಯರ ಜತೆಗೆ 50ರ ವಯೋಮಾನದ ಆಸುಪಾಸಿನವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಈ ಸಂಪುಟದ ಮತ್ತೊಂದು ವಿಶೇಷ. 

ರಾಜಭವನದ ಗಾಜಿನ ಮನೆಯಲ್ಲಿ ಬೆಳಿಗ್ಗೆ 11.45ಕ್ಕೆ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಮೊದಲಿಗೆ ಎಚ್.ಕೆ. ಪಾಟೀಲ, ಕೃಷ್ಣ ಬೈರೇಗೌಡ, ಎನ್‌. ಚಲುವರಾಯಸ್ವಾಮಿ, ಕೆ. ವೆಂಕಟೇಶ್‌ ಮತ್ತು ಡಾ.ಎಚ್‌.ಸಿ. ಮಹದೇವಪ್ಪ ಅವರನ್ನು ಒಂದು ಗುಂಪಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆಹ್ವಾನಿಸಿದರು. ಆಗ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಗುಂಪಿನಲ್ಲಿ ಪ್ರಮಾಣವಚನ ಸ್ವೀಕರಿಸುವುದು ಬೇಡವೆಂದು ತಡೆದರು. ಹೀಗಾಗಿ, ಎದುರಿಗೆ ಹಾಕಿದ್ದ ಐದು ಧ್ವನಿವರ್ಧಕಗಳಲ್ಲಿ ನಾಲ್ಕನ್ನು ತೆರವುಗೊಳಿಸಿ, ಒಬ್ಬೊಬ್ಬರನ್ನಾಗಿ ಪ್ರಮಾಣವಚನಕ್ಕೆ ಆಹ್ವಾನಿಸಲಾಯಿತು.

ಪ್ರಮಾಣವಚನ ಸ್ವೀಕರಿಸಿದವರು: ಎಚ್.ಕೆ. ಪಾಟೀಲ, ಕೃಷ್ಣ ಬೈರೇಗೌಡ, ಎನ್‌. ಚಲುವರಾಯಸ್ವಾಮಿ, ಕೆ. ವೆಂಕಟೇಶ್‌, ಎಚ್‌.ಸಿ. ಮಹದೇವಪ್ಪ, ಈಶ್ವರ ಖಂಡ್ರೆ, ಕೆ.ಎನ್‌. ರಾಜಣ್ಣ, ದಿನೇಶ್‌ ಗುಂಡೂರಾವ್‌, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ, ಆರ್‌.ಬಿ. ತಿಮ್ಮಾಪುರ, ಎಸ್‌.ಎಸ್‌. ಮಲ್ಲಿಕಾರ್ಜುನ, ಶಿವರಾಜ್‌ ತಂಗಡಗಿ, ಡಾ. ಶರಣಪ್ರಕಾಶ್‌ ಪಾಟೀಲ, ಮಂಕಾಳ ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್‌, ರಹೀಂ ಖಾನ್‌, ಡಿ. ಸುಧಾಕರ್, ಸಂತೋಷ್‌ ಲಾಡ್‌, ಎನ್‌.ಎಸ್‌. ಬೋಸರಾಜು, ಭೈರತಿ ಸುರೇಶ್‌, ಮಧು ಬಂಗಾರಪ್ಪ, ಡಾ.ಎಂ.ಸಿ. ಸುಧಾಕರ್, ಬಿ. ನಾಗೇಂದ್ರ.

ಈ ಪೈಕಿ, ರಹೀಂ ಖಾನ್‌ ಅವರು ಇಂಗ್ಲಿಷ್‌ನಲ್ಲಿ ಉಳಿದವರು ಕನ್ನಡದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಯಲಬುರ್ಗಾ ಕ್ಷೇತ್ರದ ಬಸವರಾಜ ರಾಯರಡ್ಡಿ, ಹಾವೇರಿಯ ರುದ್ರಪ್ಪ ಲಮಾಣಿ, ಶಿರಾ ಶಾಸಕ ಟಿ.ಬಿ. ಜಯಚಂದ್ರ, ಹಳಿಯಾಳ ಕ್ಷೇತ್ರದ ಆರ್‌.ವಿ. ದೇಶಪಾಂಡೆ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರಿಗೆ ಸಂಪುಟ ಸೇರುವ ಅವಕಾಶ ಸಿಕ್ಕಿಲ್ಲ. ಆದರೆ, ವಿಧಾನ ಪರಿಷತ್‌ ಸದಸ್ಯರೂ ಅಲ್ಲದ ಎಸ್.ಎಸ್‌. ಬೋಸರಾಜು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ನೂತನ ಸಚಿವರಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು.‌ ಸಚಿವರಾಗಿ ಸಂಪುಟ ಸೇರಿದ ಶಾಸಕರ ಕುಟುಂಬ ಸದಸ್ಯರೂ ಈ ವೇಳೆ ಇದ್ದರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರ ಅಭಿಮಾನಿಗಳು, ಬೆಂಬಲಿಗರು ಜೈಕಾರ ಹಾಕಿ, ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT