ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಯೋಜನೆ ಜಾರಿಯಾದ ದಿನ ಬಸ್‌ಗೆ ನಮಸ್ಕರಿಸಿದ್ದ ಸಂಗವ್ವರನ್ನು ಭೇಟಿಯಾದ ಸಿಎಂ

Published 4 ಸೆಪ್ಟೆಂಬರ್ 2023, 9:18 IST
Last Updated 4 ಸೆಪ್ಟೆಂಬರ್ 2023, 9:18 IST
ಅಕ್ಷರ ಗಾತ್ರ

ಬೆಂಗಳೂರು: ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್‌ನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್‌ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಅವರನ್ನು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ನನ್ನಲ್ಲಿ ಅಚ್ಚರಿ ಮತ್ತು ಖುಷಿಯ ಜೊತೆಗೆ ಸಾರ್ಥಕ ಭಾವ ಮೂಡಿಸಿತು’ ಎಂದು ತಿಳಿಸಿದ್ದಾರೆ.

‘ಮಹಿಳೆಯರ ಸಬಲೀಕರಣಕ್ಕೆ ನಾವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಮೊದಲ ದಿನವೇ ಸಂಗವ್ವ ಅವರಿಂದ ದೊರೆತ ಪ್ರತಿಕ್ರಿಯೆ ಕಂಡು ನಮ್ಮ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು. ಈ ದಿನ ಇಂಥದ್ದೊಂದು ಭೇಟಿಯ ಅವಕಾಶ ಕಲ್ಪಿಸಿದ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ‘ಗ್ಯಾರಂಟಿ’ಗಳಲ್ಲಿ ಒಂದಾದ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವ ‘ಶಕ್ತಿ’ ಯೋಜನೆಗೆ ಜೂನ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು.

ಶಕ್ತಿ ಯೋಜನೆ ಜಾರಿ ಕುರಿತು ‘ಪ್ರಜಾವಾಣಿ’ ಛಾಯಾಗ್ರಾಹಕ ಬಿ.ಎಂ.ಕೇದಾರನಾಥ ಅವರು ತೆಗೆದ ಚಿತ್ರವನ್ನು ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಓದಿ... ಶಕ್ತಿ ಯೋಜನೆ ಜಾರಿಗೊಳಿಸಿದ ಸಂತೃಪ್ತಿ, ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು: ಸಿಎಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT