ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್‌ ಫಂಡ್‌ ಬಲವರ್ಧನೆಗೆ ‘ಗ್ಯಾರಂಟಿ’ ಬಳಕೆ: ಸಾರ್ವಜನಿಕರ ನೇರ ನೋಂದಣಿಗೆ ಆ್ಯಪ್

Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ಯಾರಂಟಿ’ ಯೋಜನೆಗಳಿಂದ ಮಹಿಳೆಯರ ಕೈಸೇರುತ್ತಿರುವ ಹಣವನ್ನು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಚಿಟ್‌ ಫಂಡ್‌ ವಹಿವಾಟಿನತ್ತ ಸೆಳೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಚಿಟ್‌ ಫಂಡ್‌ನಲ್ಲಿ ಗ್ರಾಹಕರ ನೇರ ನೋಂದಣಿಗೆ ಅವಕಾಶವಿರುವ ‘ಆ್ಯಪ್‌’ ಸಿದ್ಧಪಡಿಸುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ‘ಗ್ಯಾರಂಟಿ’ ಯೋಜನೆಗಳ ಸುತ್ತ ಆರ್ಥಿಕತೆಯೊಂದನ್ನು ಕಟ್ಟಲು ಹೆಜ್ಜೆ ಇಟ್ಟಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹ 4,000 ದಿಂದ ₹ 5,000 ದವರೆಗೂ ಆರ್ಥಿಕ ನೆರವು ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 93 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ತಲಾ ₹ 2,000 ಪಾವತಿಸಲಾಗುತ್ತಿದೆ. ಶಕ್ತಿ ಯೋಜನೆಯಲ್ಲೂ ಉಚಿತ ಬಸ್‌ ಪ್ರಯಾಣದ ಮೂಲಕ ಮಹಿಳೆಯರಿಗೆ ಉಳಿತಾಯವಾಗುತ್ತಿದೆ. ಮಹಿಳೆಯರು ಈ ಮೊತ್ತವನ್ನು ಚಿಟ್‌ ಫಂಡ್‌ನಲ್ಲಿ ತೊಡಗಿಸುವಂತೆ ಉತ್ತೇಜಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ.

ರಾಜ್ಯ ಸರ್ಕಾರದ ಸ್ವಾಮ್ಯದ ಎಂಎಸ್‌ಐಎಲ್‌ನ ಚಿಟ್‌ ಫಂಡ್‌ನಲ್ಲಿ 22,000 ಗ್ರಾಹಕರಿದ್ದು, ವಹಿವಾಟು ₹305 ಕೋಟಿ ಮಾತ್ರ ಇದೆ. ನೆರೆಯ ಕೇರಳ ರಾಜ್ಯ ಸರ್ಕಾರದ ಚಿಟ್‌ ಫಂಡ್‌ ವಹಿವಾಟು ₹27,000 ಕೋಟಿಯಷ್ಟಿದೆ. ಈಗ ಗ್ಯಾರಂಟಿ ಹಣದ ಬೆಂಬಲದಿಂದ ಎಂಎಸ್‌ಐಎಲ್‌ ಚಿಟ್‌ ಫಂಡ್‌ ವಹಿವಾಟನ್ನು ಹೆಚ್ಚಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ.

‘ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಕೈ ಸೇರುತ್ತಿರುವ ಹಣವನ್ನು ಸೆಳೆದು ತನ್ನ ಚಿಟ್‌ ಫಂಡ್‌ ವಹಿವಾಟನ್ನು ಹೆಚ್ಚಿಸಿಕೊಳ್ಳಲು ಎಂಎಸ್‌ಐಎಲ್‌ ಒಪ್ಪಿದೆ’ ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಪರಿಣಾಮವನ್ನು ಅರಿಯಲು ಅತೀಕ್‌ ಅವರು ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಮಹಿಳೆಯರ ಕೈ ಸೇರುತ್ತಿರುವ ಹಣವನ್ನು ಉಳಿತಾಯ ಯೋಜನೆಗಳತ್ತ ಆಕರ್ಷಿಸುವ ಕುರಿತೂ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ವಿಸ್ತರಣೆಗೆ ಅವಕಾಶವಿದೆ: ‘ರಾಜ್ಯದಲ್ಲಿ ಎಂಎಸ್‌ಐಎಲ್‌ ಚಿಟ್‌ ಫಂಡ್‌ ವಹಿವಾಟನ್ನು ₹ 10,000 ಕೋಟಿಗಳವರೆಗೆ ವಿಸ್ತರಿಸಲು ಅವಕಾಶವಿದೆ. ಈಗ ನಮ್ಮ ಚಿಟ್‌ ಫಂಡ್‌ ವಹಿವಾಟು ನಗರಗಳಿಗೆ ಸೀಮಿತವಾಗಿದೆ. ನಾವು ಗ್ರಾಮೀಣ ಪ್ರದೇಶಗಳನ್ನು ಇನ್ನೂ ತಲುಪಿಲ್ಲ’ ಎಂದು ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದಲ್ಲಿ ಬಹುತೇಕ ಪ್ರತಿ ಕುಟುಂಬಕ್ಕೂ ಗ್ಯಾರಂಟಿ ಯೋಜನೆಗಳಿಂದ ಹಣ ತಲುಪುತ್ತಿದೆ. ಈಗ ಉಳಿತಾಯಕ್ಕೆ ಹೆಚ್ಚು ಅವಕಾಶಗಳಿವೆ. ಎಂಎಸ್‌ಐಎಲ್‌ ಚಿಟ್‌ ಫಂಡ್‌ನಲ್ಲಿ ಗುಂಪುಗಳಿಗೆ ತಕ್ಕಂತೆ ಶೇಕಡ 13 ರಿಂದ 15ರವರೆಗೂ ಲಾಭ ದೊರಕುತ್ತದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಹೂಡಿಕೆಯ ಮೊತ್ತಕ್ಕೂ ಖಾತರಿ ಇರುತ್ತದೆ ಎಂದರು.

‘ಗೃಹಲಕ್ಷ್ಮಿ ಯೋಜನೆಯಿಂದ ದೊರಕುತ್ತಿರುವ ಹಣವನ್ನು ಮಹಿಳೆಯರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ತುರ್ತು ಬಳಕೆಯ ಉದ್ದೇಶಗಳಿಗಾಗಿ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಬೇಕು. ತಕ್ಷಣವೇ ಉಳಿತಾಯದ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು’ ಎನ್ನುತ್ತಾರೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌.

‘ಬರಲಿದೆ ಮೊಬೈಲ್‌ ಆ್ಯಪ್‌’

‘ಚಿಟ್‌ ಫಂಡ್‌ ವಹಿವಾಟಿಗಾಗಿ ಮೊಬೈಲ್‌ ಆ್ಯಪ್‌ ಒಂದನ್ನು ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಗ್ರಾಹಕರ ನೋಂದಣಿ ಮಾತ್ರವಲ್ಲ, ಚಿಟ್‌ ಫಂಡ್‌ ವಹಿವಾಟಿನ ಎಲ್ಲ ವಿವರಗಳನ್ನೂ ಗ್ರಾಹಕರು ಆ್ಯಪ್‌ ಮೂಲಕವೇ ಪಡೆಯಲು ಅವಕಾಶ ಕಲ್ಪಿಸಲಾಗುವುದು’ ಎಂದು ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಕುಮಾರ್‌ ತಿಳಿಸಿದರು.

‘ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಮಾದರಿಯಲ್ಲಿ ‘ಉಳಿತಾಯ ಸಖಿ’ಯರನ್ನು ನೇಮಿಸಲಾಗುವುದು. ಅವರು ಮಾಡುವ ನೋಂದಣಿಗೆ ಪ್ರತಿಯಾಗಿ ಪ್ರೋತ್ಸಾಹಧನ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT