ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರನ್ನು ಅವಾಚ್ಯವಾಗಿ ನಿಂದಿಸಿದ ಸಚಿವರ ಮೇಲೆ ಕೇಸ್ ದಾಖಲಿಸಬೇಕು: ಕಾರಜೋಳ

Published 20 ಆಗಸ್ಟ್ 2024, 9:14 IST
Last Updated 20 ಆಗಸ್ಟ್ 2024, 9:14 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಪ್ರತಿಭಟನೆ ವೇಳೆ ರಾಜ್ಯಪಾಲರ ವಿರುದ್ಧ ಅವಾಚ್ಯವಾಗಿ ನಿಂದಿಸಿದ, ಅವರ ಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಮತ್ತು ಬೆಂಕಿ ಹಾಕಿ ಸುಟ್ಟ ಹಿನ್ನೆಲೆಯಲ್ಲಿ ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ, ಸಚಿವರಾದ ಕೃಷ್ಣಬೈರೇಗೌಡ, ಜಮೀರ್ ಅಹಮದ್, ದಿನೇಶ್ ಗುಂಡೂರಾವ್‌ ವಿರುದ್ಧ ಪೊಲೀಸರು ಸ್ವಯಂಪ್ರೇರಿತರಾಗಿ ಜಾತಿ ನಿಂದನೆ ಕೇಸು ದಾಖಲಿಸಬೇಕು ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.

ಒಂದು ವೇಳೆ ಪೊಲೀಸರು ಸ್ವಯಂಪ್ರೇರಿತರಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸದಿದ್ದರೆ ರಾಷ್ಟ್ರಪತಿಯವರಿಗೆ ದೂರು ನೀಡಲಾಗುವುದು. ಆದ್ದರಿಂದ ಇವೆಲ್ಲರ ಮೇಲೂ ತಕ್ಷಣ ಎಫ್ಐಆರ್‌ ದಾಖಲಿಸಬೇಕು ಎಂದು ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯಪಾಲ ಹುದ್ದೆ ಸಾಂವಿಧಾನಿಕ ಹುದ್ದೆ. ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು. ಅವರ ವಿರುದ್ಧ ಏಕ ವಚನ ಪ್ರಯೋಗ ಮಾಡಿದ್ದೂ ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಪರಿಶಿಷ್ಟರು ಎಂಬ ಕಾರಣಕ್ಕೇ ಕಾಂಗ್ರೆಸ್‌ನವರು ಈ ರೀತಿ ವರ್ತಿಸಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಓಡಿಸಿದಂತೆ ರಾಜಭವನದಿಂದ ಗೆಹಲೋತ್ ಅವರನ್ನು ಓಡಿಸುವುದಾಗಿ ಹೇಳಿದ್ದಾರೆ. ಇಷ್ಟೆಲ್ಲ ಪೊಲೀಸರ ಮುಂದೆ ನಡೆದರೂ ಪೊಲೀಸರು ಮೌನ ವಹಿಸಿದ್ದಾರೆ. ತಕ್ಷಣವೇ ಅವರನ್ನೆಲ್ಲ ಬಂಧಿಸಬೇಕಿತ್ತು ಎಂದು ನಾರಾಯಣ ಸ್ವಾಮಿ ಹೇಳಿದರು.

ಐವನ್‌ ಡಿಸೋಜ ಅವರ ಮೇಲೆ ಗೂಂಡಾ ಕಾಯ್ದೆ ಹಾಕಿ ಬಂಧಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟರೆ ನೀವೇ ಹೊಣೆ ಎಂದು ಸಚಿವ ಜಮೀರ್ ಅಹಮದ್ ಖಾನ್‌ ಬೆದರಿಕೆ ಹಾಕಿದ್ದಾರೆ. ರಾಜ್ಯಪಾಲರೇನು ಈ ರಾಜ್ಯದ ಮುಖ್ಯಮಂತ್ರಿನಾ? ಗೃಹ ಸಚಿವರಾ? ಇಡೀ ರಾಜ್ಯದಲ್ಲಿ ಗಲಭೆ ಹಬ್ಬಿಸಲು ಕಾಂಗ್ರೆಸ್ ತಯಾರಿ ಮಾಡಿಕೊಂಡಂತಿದೆ ಎಂದು ಅವರು ಕಿಡಿಕಾರಿದರು.

ಐವನ್‌ ಡಿಸೋಜ ‘ದೇಶ ದ್ರೋಹಿ’: ಸಂಸದ ಗೋವಿಂದ ಕಾರಜೋಳ ಮಾತನಾಡಿ, ಐವನ್‌ ಡಿಸೋಜ ಅವರು ಬಾಂಗ್ಲಾದೇಶದ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಓಡಿಸುವುದಾಗಿ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸೇರಿ ಅಲ್ಲಿನ ಪ್ರಧಾನಿಯನ್ನು ಓಡಿಸಿದರು. ಇಲ್ಲಿ ಐವನ್‌ ಡಿಸೋಜಗೆ ಪಾಕಿಸ್ತಾನದ ಭಯೋತ್ಪಾದಕರ ನಂಟು ಇದೆಯೇ? ಉಗ್ರರ ಜೊತೆಗಿನ ನಂಟು ಮತ್ತು ರಾಜ್ಯದ ವಿರುದ್ಧ ದಂಗೆ ಎಬ್ಬಿಸುವುದು ದೇಶ ದ್ರೋಹಿ ಕೃತ್ಯ ಆಗುತ್ತದೆ. ಆದ್ದರಿಂದ, ಡಿಸೋಜ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟಿ ವಿಧಾನಪರಿಷತ್‌ ಸದಸ್ಯತ್ವದಿಂದ ಕಿತ್ತುಹಾಕಬೇಕು ಎಂದು ಒತ್ತಾಯಿಸಿದರು.

ಹಿಂದೆ ಹಂಸರಾಜ್ ಭಾರದ್ವಜ್ ಅವರು ಯಡಿಯೂರಪ್ಪ ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದಾಗ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಆದರೆ ಅವರ ಕೆಟ್ಟ ಪದಗಳನ್ನು ಪ್ರಯೋಗ ಮಾಡಲಿಲ್ಲ, ಅವರ ಚಿತ್ರಗಳಿಗೆ ಚಪ್ಪಲಿಯಲ್ಲಿ ಹೊಡೆಯಲಿಲ್ಲ, ಬೆಂಕಿ ಹಚ್ಚಲಿಲ್ಲ. ಕಾಂಗ್ರೆಸ್‌ನವರು ಈಗ ಇವೆಲ್ಲ ಮಾಡುತ್ತಿದೆ. ಇವರ ಸಂಸ್ಕೃತಿ ಏನು ಎಂಬುದು ಜನರಿಗೆ ತಿಳಿದಿದೆ. ಅಂಬೇಡ್ಕರ್ ಅವರನ್ನು ತುಳಿದು ಹಾಕಿದ ಕಾಂಗ್ರೆಸ್‌ ಈಗ ರಾಜ್ಯಪಾಲ ದಲಿತ ಎಂಬ ಕಾರಣಕ್ಕೆ ದೌರ್ಜನ್ಯ ಎಸಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT