ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು-ಕನಕಪುರ ರಸ್ತೆ: ಸುರಕ್ಷತಾ ಕ್ರಮ ಸಾಲದು– ಹೈಕೋರ್ಟ್

Published 9 ಆಗಸ್ಟ್ 2023, 15:54 IST
Last Updated 9 ಆಗಸ್ಟ್ 2023, 15:54 IST
ಅಕ್ಷರ ಗಾತ್ರ

ಬೆಂಗಳೂರು: ‘ಕನಕಪುರ-ಬೆಂಗಳೂರು ಮಾರ್ಗದ ರಸ್ತೆಯಲ್ಲಿ ವಾಹನ ಸವಾರರಿಗೆ ಸೂಕ್ತ ರೀತಿಯ ಸುರಕ್ಷತಾ ಕ್ರಮಗಳಿಲ್ಲ‘ ಎಂದ ಹೈಕೋರ್ಟ್, ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್​ಎಚ್​ಎಐ) ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು-ಕನಕಪುರ ರಸ್ತೆ ವಿಸ್ತರಣೆ ಕುರಿತಂತೆ ಎಸ್‌.ಪಿ. ಸಂದೀಪ್ ರಾಜು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕೋರ್ಟ್ ಕಮಿಷನರ್​ ಸಲ್ಲಿಸಿದ ವರದಿಯನ್ನು ಪರಿಗಣಿಸಿದ ನ್ಯಾಯಪೀಠವು, ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುರಕ್ಷತೆ ವಿಷಯದಲ್ಲಿ ಪರಿಣತಿ ಹೊಂದಿದೆ. ಆದರೂ, ಈ ಪ್ರಕರಣದಲ್ಲಿ ಸುರಕ್ಷತೆಯನ್ನು ಕಡೆಗಣಿಸಲಾಗಿದೆ‘ ಎಂದು ಅತೃಪ್ತಿ ವ್ಯಕ್ತಪಡಿಸಿತು. ‘ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ, ಅದರಲ್ಲೂ ಬೈಕ್‌ ಸವಾರರಿಗೆ ಸುರಕ್ಷತೆ ಇಲ್ಲದಂತಾಗಿದೆ. ಆದ್ದರಿಂದ, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪ್ರಮಾಣ ಪತ್ರ ಸಲ್ಲಿಸಬೇಕು‘ ಎಂದು ನಿರ್ದೇಶಿಸಿತು.

ಇದಕ್ಕೂ ಮುನ್ನ ಎನ್​ಎಚ್​ಎಐ ಪರ ವಕೀಲರು, ‘ಬೆಂಗಳೂರು- ಕನಕಪುರ ರಸ್ತೆಯನ್ನು ಎರಡು ಪಥಗಳಿಂದ ನಾಲ್ಕು ಪಥಗಳಿಗೆ ವಿಸ್ತರಿಸಲಾಗುತ್ತಿದೆ. ಈ ಸಂಬಂಧ ಗುತ್ತಿಗೆ ಪಡೆದಿದ್ದ ಕಂಪನಿ ಮಧ್ಯದಲ್ಲಿ ಕಾಮಗಾರಿ ಸ್ಥಗಿತಗೊಳಿಸಿತ್ತು. ಇದೀಗ ಮತ್ತೊಂದು ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಏತನ್ಮಧ್ಯೆ ಮೊದಲು ಗುತ್ತಿಗೆ ಪಡೆದಿದ್ದ ಕಂಪನಿಯು ಮಳವಳ್ಳಿಯ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಪ್ರಸ್ತುತ ತಡೆಯಾಜ್ಞೆ ಇದೆ. ಹೀಗಾಗಿ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ‘ ಎಂದು ವಿವರಿಸಿದರು.

‘ಕೆಲ ಭಾಗಗಳಲ್ಲಿ ರಸ್ತೆ ನಾಲ್ಕು ಪಥಗಳಾಗಿದ್ದು, ಮತ್ತೆ ಕೆಲವು ಭಾಗಗಳಲ್ಲಿ ಎರಡು ಪಥಗಳಿವೆ. ಈ ಭಾಗಗಳಲ್ಲಿ ವಾಹನ ಸವಾರರಿಗೆ ಸುರಕ್ಷತಾ ಕ್ರಮ ಕೈಗೊಂಡಿದ್ದು, ಸಿಮೆಂಟ್​ ಬ್ಯಾರಿಕೇಡ್​ ಹಾಕಲಾಗಿದೆ. ಅವುಗಳಿಗೆ ಬಣ್ಣ ಬಳಿಯಲಾಗಿದೆ‘ ಎಂದು ವಿವರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ‘ಸಿಮೆಂಟ್​ ಬ್ಲಾಕ್​ಗಳನ್ನು ಅಳವಡಿಸುವುದರಿಂದ ಸುರಕ್ಷತೆ ಇರುತ್ತದೆ ಎಂದು ಹೇಳಲು ಆಗುವುದಿಲ್ಲ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಟೋಲ್​ ತಕರಾರು: ವಿಚಾರಣೆ ವೇಳೆ ಮಧ್ಯ ಪ್ರವೇಶಿಸಿದ ವಕೀಲ ಜಿ.ಆರ್​.ಮೋಹನ್​, ‘ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಅವೈಜ್ಞಾನಿಕವಾಗಿ ಟೋಲ್​ ಸಂಗ್ರಹ ಮಾಡಲಾಗುತ್ತಿದೆ‘ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಎಷ್ಟು ಕಿಲೋಮೀಟರ್​ಗೆ ಎಷ್ಟು ಟೋಲ್​ ಸಂಗ್ರಹ ಮಾಡಲಾಗುತ್ತಿದೆ ಎಂಬ ಬಗ್ಗೆ ಪ್ರಮಾಣ ಪತ್ರದ ಮೂಲಕ ವಿವರಣೆ ಸಲ್ಲಿಸಿದಲ್ಲಿ ವಿಚಾರಣೆ ನಡೆಸಲಾಗುವುದು‘ ಎಂದು ತಿಳಿಸಿತು. ‘ಕನಕಪುರ-ಬೆಂಗಳೂರು ಮಾರ್ಗದ ರಸ್ತೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಮುಂದಿನ ಎರಡು ವಾರಗಳಲ್ಲಿ ತಿಳಿಸಿ‘ ಎಂದು ಎನ್‌ಎಚ್ಎಐ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT