ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ಸೂಚ್ಯಂಕದಲ್ಲಿ ಹೆಚ್ಚಳ: ಬಡತನ ನಾಡಿಗೆ ಸವಾಲು

Last Updated 8 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಎಚ್‌ಡಿಐ) ಏರಿಕೆಯಾಗಿದೆ. ಆದರೆ, ಬಡತನ ಮತ್ತು ಅಪೌಷ್ಟಿಕತೆಯ ಸಮಸ್ಯೆಗಳೂ ಸವಾಲಾಗಿ ಬೆಳೆಯುತ್ತಿವೆ ಎಂಬುದನ್ನು ‘ಕರ್ನಾಟಕ ಮಾನವ ಅಭಿವೃದ್ಧಿ ವರದಿ–2022’ ಹೇಳಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿಯೂ ಸೇರಿದಂತೆ ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳು ಬಹು ಆಯಾಮದ ಬಡತನ ಸೂಚ್ಯಂಕದ (ಎಂಪಿಐ) ವಿಷಯದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿವೆ. ಕೆಲವು ಜಿಲ್ಲೆಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿ ಸಾಧಿಸಿದ್ದರೂ, ಬಡತನ ಸೂಚ್ಯಂಕದಲ್ಲಿ ಪ್ರಗತಿ ಸಾಧಿಸಿಲ್ಲ ಎಂಬ ಅಂಶ ವರದಿಯಲ್ಲಿದೆ.

‘1990 ರಿಂದ 2019ರ ಅವಧಿಯಲ್ಲಿ ಶೇಕಡ 1.9ರ ಬೆಳವಣಿಗೆಯೊಂದಿಗೆ ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕ 0.429ರಿಂದ 0.645ಕ್ಕೆ ಏರಿಕೆಯಾಗಿದೆ. ಕಳೆದ ಎರಡು ದಶಕಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾನವ ಅಭಿವೃದ್ಧಿ ಸೂಚ್ಯಂಕ ಗಣನೀಯವಾಗಿ ಏರಿಕೆಯಾಗಿದೆ. ಪ್ರಸ್ತುತ ದೇಶದ ಮಾನವ ಅಭಿವೃದ್ಧಿ ಸೂಚ್ಯಂಕದ ಸರಾಸರಿ ಶೇ 45.9ರಷ್ಟಿದ್ದು, ಕರ್ನಾಟಕದ ಸರಾಸರಿ ಅದಕ್ಕಿಂತ ಹೆಚ್ಚಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಾಗಲಕೋಟೆ, ಬಳ್ಳಾರಿ, ರಾಮನಗರ, ಮಂಡ್ಯ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳು ಎಚ್‌ಡಿಐ ಗಣನೀಯವಾಗಿ ಏರಿಕೆಯಾಗಿರುವ ಜಿಲ್ಲೆಗಳ ಪಟ್ಟಿಯಲ್ಲಿವೆ. ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲೂ ಎಚ್‌ಡಿಐ ವೃದ್ಧಿಯಾಗಿದೆ. ಚಾಮರಾಜನಗರ ಜಿಲ್ಲೆಯ ಎಚ್‌ಡಿಐ 0.576ರಿಂದ 0.601ಕ್ಕೆ ಏರಿಕೆಯಾಗಿದೆ. 2005ರಲ್ಲಿ 25ನೇ ಸ್ಥಾನದಲ್ಲಿದ್ದ ಈ ಜಿಲ್ಲೆ 2021ರಲ್ಲಿ 21ನೇ ಸ್ಥಾನಕ್ಕೇರಿದೆ. ಬಡತನ ಮತ್ತು ಅಪೌಷ್ಟಿಕತೆಯೂ ವೃದ್ಧಿಸುತ್ತಿವೆ ಎಂದು ವರದಿ ಹೇಳಿದೆ.

ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಬೀದರ್‌, ಗದಗ ಜಿಲ್ಲೆಗಳು ಹಾಗೂ ಇತರ 102 ತಾಲ್ಲೂಕುಗಳಲ್ಲಿ ಅಪೌಷ್ಟಿಕತೆ ಅತ್ಯಧಿಕ ಪ್ರಮಾಣದಲ್ಲಿದೆ. ಈ ಸಮಸ್ಯೆಯ ಪರಿಹಾರಕ್ಕೆ ಸಂಘಟಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬ ಸಲಹೆ ವರದಿಯಲ್ಲಿದೆ.

ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಬಡತನ ಬೃಹತ್‌ ಸಮಸ್ಯೆಯಾಗಿ ಬೆಳೆಯುತ್ತಿದೆ. ಈ ಜಿಲ್ಲೆಗಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಜೀವನದ ಗುಣಮಟ್ಟ ವೃದ್ಧಿಗೆ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಡತನ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

ಧಾರವಾಡ, ಚಿಕ್ಕಬಳ್ಳಾಪುರ, ಬೀದರ್‌, ಹಾಸನ, ಹಾವೇರಿ, ಶಿವಮೊಗ್ಗ, ತುಮಕೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಾಣಂತಿಯರ ಮರಣದ ದರ ಅತ್ಯಧಿಕವಾಗಿದೆ. ಈ ಜಿಲ್ಲೆಗಳ ಶೇ 45.7ರಷ್ಟು ಗರ್ಭಿಣಿಯರು ಹಾಗೂ 15ರಿಂದ 49 ವರ್ಷ ವಯಸ್ಸಿನ ಮಹಿಳೆಯರು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಇದಕ್ಕೆ ಕಾರಣ ಎಂಬ ಉಲ್ಲೇಖ ವರದಿಯಲ್ಲಿದೆ.

ಬಡತನ ನಿವಾರಣೆಗೆ ಶಿಫಾರಸು
ಬಹು ಆಯಾಮದ ಬಡತನ ಸೂಚ್ಯಂಕದಲ್ಲಿ ಪ್ರಗತಿ ಸಾಧಿಸುವುದಕ್ಕಾಗಿ ಯಾದಗಿರಿ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಶೇ 20ರಷ್ಟು ಮಂದಿಯನ್ನು ಬಡತನದಿಂದ ಮೇಲೆತ್ತಬೇಕು. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದಕ್ಕಾಗಿ ವಸತಿ ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶದ ಕ್ರಮಗಳನ್ನು ಕೈಗೊಳ್ಳಬೇಕು.

ಅಪೌಷ್ಟಿಕತೆಗೆ ಮದ್ದೇನು?
ಅಂಗನವಾಡಿಗಳಿಗೆ ಬರುತ್ತಿರುವ ಮಕ್ಕಳಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಹೀಮೋಗ್ಲೋಬಿನ್‌ ಪ್ರಮಾಣ ಹೆಚ್ಚಿಸಲು 90 ದಿನಗಳವರೆಗೆ ವಿಶೇಷ ಪೌಷ್ಟಿಕ ಆಹಾರ ವಿತರಿಸಬೇಕು. ಮಕ್ಕಳಲ್ಲಿನ ರಕ್ತಹೀನತೆಯನ್ನು ನಿರ್ಮೂಲನೆ ಮಾಡಲು ಐದು ವರ್ಷಗಳಲ್ಲಿ ₹ 85 ಕೋಟಿ ವೆಚ್ಚ ಮಾಡಬೇಕು.

ಜೀವಿತಾವಧಿಯಲ್ಲಿ ಏರಿಕೆ
ರಾಜ್ಯದಲ್ಲಿ ಮನುಷ್ಯರ ಸರಾಸರಿ ಜೀವಿತಾವಧಿ 69.5 ವರ್ಷಗಳಿಗೆ ಏರಿಕೆಯಾಗಿದೆ. 2020ರಲ್ಲಿ ಪ್ರತಿ ಲಕ್ಷ ಹೆರಿಗೆಗಳಿಗೆ 83ರಷ್ಟಿದ್ದ ತಾಯಂದಿರ ಮರಣದ ಪ್ರಮಾಣ, ಈಗ 69ಕ್ಕೆ ಇಳಿಕೆಯಾಗಿದೆ ಎಂದು ಮಾನವ ಅಭಿವೃದ್ಧಿ ವರದಿ ಹೇಳಿದೆ.

ಮಂಗಳೂರು ತಾಲ್ಲೂಕು ಪ್ರಥಮ: ಇದೇ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಬಹುಆಯಾಮದ ಬಡತನ ಸೂಚ್ಯಂಕಗಳನ್ನು ಅಂದಾಜು ಮಾಡಲಾಗಿದೆ. ಮಂಗಳೂರು ತಾಲ್ಲೂಕು ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದು, ಬೆಂಗಳೂರು ದಕ್ಷಿಣ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ.

ಬಡತನ ಹೆಚ್ಚಿರುವ ಜಿಲ್ಲೆಗಳು

* ಯಾದಗಿರಿ

* ಕಲಬುರಗಿ

* ಬಳ್ಳಾರಿ

* ರಾಯಚೂರು

* ಕೊಪ್ಪಳ

* ಹಾವೇರಿ

* ಬೀದರ್‌

* ಬಾಗಲಕೋಟೆ

* ಗದಗ

* ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT