ಬೆಂಗಳೂರು: ಕರ್ನಾಟಕ ರಾಜ್ಯ ದೇಶದ ವೈಮಾನಿಕ ಕ್ಷೇತ್ರದ ಬೃಹತ್ ಕೇಂದ್ರವಾಗಿ ಹೊರ ಹೊಮ್ಮುವುದರಲ್ಲಿ ಸಂದೇಹವೇ ಇಲ್ಲ. ಅಲ್ಲದೇ, ಭಾರತದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ವಿನ್ಯಾಸಗೊಂಡು ಬೋಯಿಂಗ್ ವಿಮಾನಗಳು ತಯಾರಾಗುವ ದಿನಗಳೂ ದೂರವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೇವನಹಳ್ಳಿಯಲ್ಲಿ ಬೋಯಿಂಗ್‌ನ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ‘ಇಲ್ಲಿನ ಬೋಯಿಂಗ್ ಕ್ಯಾಂಪಸ್‌ನ ಸೌಲಭ್ಯವನ್ನು ನೋಡಿದರೆ ಕರ್ನಾಟಕ ವೈಮಾನಿಕ ಕ್ಷೇತ್ರದ ಬೃಹತ್ ಶಕ್ತಿಯಾಗಿ ಉಗಮವಾಗುತ್ತಿರುವ ಸ್ಪಷ್ಟ ಸೂಚನೆ ಕಾಣಿಸುತ್ತಿದೆ’ ಎಂದರು.
ಭಾರತದ ವಿಮಾನ ಕಂಪನಿಗಳಿಂದ ಹೊಸ ವಿಮಾನಗಳಿಗೆ ಬೇಡಿಕೆ ಆದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಹೀಗಾಗಿ ಜಾಗತಿಕ ವೈಮಾನಿಕ ಮಾರುಕಟ್ಟೆಗೆ ಭಾರತ ಹೊಸ ಚೈತನ್ಯ ತುಂಬಲಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಮಹಿಳೆಯರು ನಾಗರಿಕ ಮತ್ತು ಯುದ್ಧ ವಿಮಾನಗಳ ಕ್ಷೇತ್ರವನ್ನು ಮುನ್ನಡೆಸಲಿದ್ದು, ಹೆಚ್ಚಿನ ಸಂಖ್ಯೆಯ ಪೈಲಟ್‌ಗಳು ಮಹಿಳೆಯರೇ ಆಗಲಿದ್ದಾರೆ. ಈಗ ದೇಶದ ಒಟ್ಟು ಪೈಲಟ್‌ಗಳಲ್ಲಿ ಶೇ 15ರಷ್ಟು ಮಹಿಳೆಯರಿದ್ದಾರೆ. ಜಾಗತಿಕ ಸರಾಸರಿ ನೋಡಿದರೆ ಭಾರತದಲ್ಲಿ ಮೂರು ಪಟ್ಟು ಹೆಚ್ಚು ಮಹಿಳಾ ಪೈಲಟ್‌ಗಳಿದ್ದಾರೆ. ಮಹಿಳೆಯರ ನೇತೃತ್ವದಲ್ಲಿ ಅಭಿವೃದ್ಧಿ ಸಾಧಿಸುವ ಸಮಯ ಬಂದಿದೆ ಎಂದು ಮೋದಿ ಹೇಳಿದರು.
ದೇಶಿ ವೈಮಾನಿಕ ಮಾರುಕಟ್ಟೆ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಮಾರುಕಟ್ಟೆ. ಕಳೆದ ಒಂದು ದಶಕದಲ್ಲಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ದುಪ್ಪಟ್ಟಾಗಿದೆ. ದೇಶದಲ್ಲಿ 2014ರಲ್ಲಿ 70 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಗ 150 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗಿರುವುದು ಮಾತ್ರವಲ್ಲ, ಅವುಗಳ ಕಾರ್ಯಕ್ಷಮತೆಯೂ ಹೆಚ್ಚಾಗಿದೆ ಎಂದೂ ವಿವರಿಸಿದರು.
ಬೆಂಗಳೂರು ಆಕಾಂಕ್ಷೆ, ಆವಿಷ್ಕಾರ ಮತ್ತು ಸಾಧನೆಯ ಜತೆಗೆ ನಿಕಟ ಸಂಬಂಧ ಹೊಂದಿರುವ ನಗರವಾಗಿದ್ದು, ಜಾಗತಿಕ ಬೇಡಿಕೆಗೆ ಅನುಗುಣವಾಗಿ ಭಾರತದ ತಂತ್ರಜ್ಞಾನ ಸಾಮರ್ಥ್ಯವನ್ನು ಪೂರೈಸುವ ನಗರವೂ ಆಗಿದೆ. ಬೋಯಿಂಗ್‌ನ ಹೊಸ ತಂತ್ರಜ್ಞಾನ ಕ್ಯಾಂಪಸ್ ಈ ನಂಬಿಕೆಯನ್ನು ಬಲಪಡಿಸಲಿದೆ. ಈ ಕ್ಯಾಂಪಸ್, ಅಮೆರಿಕದಲ್ಲಿರುವುದು ಬಿಟ್ಟರೆ ಅತಿ ದೊಡ್ಡ ಕ್ಯಾಂಪಸ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾಗತಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರಗಳ ಭಾರತದ ಬದ್ಧತೆಗೆ ಇಲ್ಲಿನ ಬೋಯಿಂಗ್ ಕೇಂದ್ರವೇ ನಿದರ್ಶನ. ಇದರಿಂದಾಗಿ ‘ಮೇಕ್ ಇನ್ ಇಂಡಿಯಾ– ಮೇಕ್ ಫಾರ್ ವರ್ಲ್ಡ್’ ಎನ್ನುವ ನಮ್ಮ ಸಂಕಲ್ಪವನ್ನು ಬಲಪಡಿಸಿದೆ. ಕೆಂಪುಕೋಟೆಯ ಮೇಲಿನಿಂದ ಭಾಷಣ ಮಾಡುವ ಸಂದರ್ಭದಲ್ಲಿ ‘ಯಹೀ ಸಮಯ್ ಹೈ ಸಹೀ ಸಮಯ್ ಹೈ’ ಎಂದು ಹೇಳಿದ್ದೆ. ಬೋಯಿಂಗ್ ಮತ್ತು ಇತರ ಅಂತರರಾಷ್ಟ್ರೀಯ ಕಂಪನಿಗಳೂ ಭಾರತದ ತ್ವರಿತಗತಿಯ ಅಭಿವೃದ್ಧಿಯ ಜತೆಗೆ ಬೆಳವಣಿಗೆ ಹೊಂದಬಹುದು ಎಂದು ಸಲಹೆ ನೀಡಿದರು.
ಈ ಹಂತದಲ್ಲಿ ಸಭಿಕರು ‘ಮೋದಿ..ಮೋದಿ’ ಎಂದು ಘೋಷಣೆ ಕೂಗಿದಾಗ ಮೋದಿ ಅವರು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ, ‘ಇವೆಲ್ಲ ಇರುತ್ತದೆ’ ಎಂದು ನಕ್ಕು ನುಡಿದರು.
ಕಳೆದ 9 ವರ್ಷಗಳಲ್ಲಿ 25 ಕೋಟಿ ಭಾರತೀಯರನ್ನು ಬಡತನದಿಂದ ಹೊರತಂದಿದ್ದೇವೆ. ಈ ಕೋಟ್ಯಂತರ ಸಮುದಾಯ ನವಮಧ್ಯಮ ವರ್ಗವಾಗಿ ರೂಪುಗೊಂಡಿದೆ. ದೇಶದ ಎಲ್ಲ ಆದಾಯಗಳ ಗುಂಪಿನಲ್ಲೂ ಮೇಲ್ಮುಖ ಚಲನಶೀಲತೆಯ ತುಡಿತವಿದೆ. ದೇಶದ ಪ್ರವಾಸೋದ್ಯಮದಲ್ಲೂ ಸಾಕಷ್ಟು ಸಾಮರ್ಥ್ಯವಿದ್ದು, ಅದನ್ನೂ ದೊಡ್ಡ ಮಟ್ಟದಲ್ಲಿ ಬೆಳೆಸಲು ಶ್ರಮಿಸಲಾಗುವುದು ಎಂದು ಮೋದಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಇದ್ದರು.
ಬೋಯಿಂಗ್ ಕ್ಯಾಂಪಸ್ ವೈಶಿಷ್ಟ್ಯವೇನು?
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಏರೋಸ್ಪೇಸ್ ಪಾರ್ಕ್‌ನಲ್ಲಿ ಬೋಯಿಂಗ್‌ನ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ನಿರ್ಮಾಣಗೊಂಡಿದೆ.
* ಈ ಕೇಂದ್ರವು ಜಾಗತಿಕ ಮಟ್ಟದ ವೈಮಾನಿಕ ಎಂಜಿನಿಯರಿಂಗ್ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿ ಮತ್ತು ಅತಿ ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸಲಿದೆ. ಭವಿಷ್ಯದ ಏವಿಯಾನಿಕ್ಸ್ ತಂತ್ರಜ್ಞಾನದ ಅಭಿವೃದ್ಧಿ ಉತ್ಪಾದನೆ ಹಾಗೂ ಜೋಡಣೆ ಕಾರ್ಯವೂ ಇಲ್ಲಿ ನಡೆಯಲಿದೆ.
* ಬೋಯಿಂಗ್ ಇಂಡಿಯಾ ಕ್ಯಾಂಪಸ್ 43 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಇದಕ್ಕಾಗಿ ಬೋಯಿಂಗ್ ಕಂಪನಿ ₹1600 ಕೋಟಿ ಬಂಡವಾಳ ಹೂಡಿದೆ. ಅಮೆರಿಕ ಬಿಟ್ಟರೆ ಬೋಯಿಂಗ್‌ನ ಎರಡನೇ ಅತಿ ದೊಡ್ಡ ಕೇಂದ್ರ ಇದಾಗಿದೆ.
* ಈ ಕೇಂದ್ರದ ಮೂಲಕ ಬೋಯಿಂಗ್ ವರ್ಷಕ್ಕೆ ₹10000 ಕೋಟಿ ವಹಿವಾಟಿನ ಗುರಿ ಹೊಂದಿದೆ.
* ಇಲ್ಲಿ ಮುಂದಿನ ತಲೆಮಾರಿನ ವೈಮಾನಿಕ ಮತ್ತು ರಕ್ಷಣಾ ಉದ್ಯಮಕ್ಕೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲಾಗುವುದು. ನವೋದ್ಯಮಗಳು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಜತೆ ಸಹಭಾಗಿಯತ್ವಕ್ಕೂ ಅವಕಾಶವಿದೆ.
ಮಹಿಳಾ ಪೈಲಟ್ ತರಬೇತಿಗೆ ‘ಸುಕನ್ಯಾ’
ಮಹಿಳೆಯರಿಗೆ ಪೈಲಟ್ ಸೇರಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರೀತಿಯ ತರಬೇತಿ ನೀಡುವ ‘ಬೋಯಿಂಗ್ ಸುಕನ್ಯಾ’ ಕಾರ್ಯಕ್ರಮಕ್ಕೂ ಪ್ರಧಾನಿ ಮೋದಿ ಇದೇ ವೇಳೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೋಯಿಂಗ್ ಕಂಪನಿಯ ಸಿಒಒ ಸ್ಟೆಫೇನ್ ಪೋಪ್ ‘ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯ ಮೇರೆಗೆ ಬೋಯಿಂಗ್ ಸುಕನ್ಯಾ ಕಾರ್ಯಕ್ರಮವನ್ನೂ ಆರಂಭಿಸಿದ್ದೇವೆ. ಮಹಿಳೆಯರಿಗೆ ಪೈಲಟ್ ಸೇರಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ರೀತಿಯ ತರಬೇತಿಗಳನ್ನೂ ನೀಡುತ್ತೇವೆ’ ಎಂದರು. ‘ದೇಶದ 150 ಶಾಲೆಗಳಲ್ಲಿ ವಿಜ್ಞಾನ ತಂತ್ರಜ್ಞಾನ ಎಂಜಿನಿಯರಿಂಗ್ ಮತ್ತು ಗಣಿತದ ಪ್ರಯೋಗಾಲಯಗಳನ್ನು(ಎಸ್‌ಟಿಇಎಂ) ಆರಂಭಿಸಲಿದ್ದೇವೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ವೈಮಾನಿಕ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ’ ಎಂದು ಸ್ಟೆಫೇನ್ ಪೋಪ್ ಹೇಳಿದರು.
ಸ್ಥಳೀಯ ಪ್ರತಿಭಾವಂತರಿಗೆ ಅವಕಾಶ: ಸಿ.ಎಂ ವಿಶ್ವಾಸ
ಕರ್ನಾಟಕ ರಾಜ್ಯವು ದೇಶದ ವೈಮಾನಿಕ ವಲಯದಲ್ಲಿ ಪ್ರಾಬಲ್ಯ ಸಾಧಿಸಿದ್ದು ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ರಫ್ತಿನಲ್ಲಿ ಶೇ 65ರಷ್ಟು ಪಾಲನ್ನು ಹೊಂದಿದೆ. ಬೋಯಿಂಗ್‌ನ ಹೊಸ ಉಪಕ್ರಮದಿಂದ ಸ್ಥಳೀಯ ಪ್ರತಿಭಾವಂತರಿಗೆ ಜಾಗತಿಕ ಮಟ್ಟದ ಯೋಜನೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಎಲ್ಲರ ಒಳಗೊಳ್ಳುವಿಕೆ ಮತ್ತು ಎಲ್ಲರಿಗೂ ತಂತ್ರಜ್ಞಾನದ ಲಾಭ ದೊರಕುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ’ ಎಂದರು. ‘ಮಹಿಳೆಯರಿಗೆ ಆದ್ಯತೆ ನೀಡುವ ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಸಂತೋಷ ನೀಡಿದೆ. ಇದು ಬೋಯಿಂಗ್ ಸಂಸ್ಥೆಗೆ ಮಾತ್ರವಲ್ಲ ನಮ್ಮ ನಾಡಿಗೂ ಹೆಮ್ಮೆಯ ವಿಷಯವಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು. ಬೋಯಿಂಗ್ ಸಂಸ್ಥೆಯು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಈ ಪ್ರದೇಶವನ್ನು ಆಯ್ಕೆ ಮಾಡಿರುವುದು ಸಂತಸದ ವಿಷಯ. ಈ ಪ್ರದೇಶವು ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಲು ಮುನ್ನುಡಿ ಬರೆದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.