ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ಕಾಯ್ದೆಯನ್ನು ಕೈಬಿಡುವ ಉದ್ದೇಶದ ಹೊಸ ಮಸೂದೆಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಮಸೂದೆ ಮಂಡಿಸಿದರು.
ಇದರಿಂದಾಗಿ ಈ ಹಿಂದೆ ಇದ್ದ ವ್ಯವಸ್ಥೆಯೇ ಮತ್ತೆ ಅನುಷ್ಠಾನಕ್ಕೆ ಬರಲಿದೆ. ಅದರ ಪ್ರಕಾರ, ಮಾರುಕಟ್ಟೆ ಪ್ರಾಂಗಣ, ಮಾರುಕಟ್ಟೆ ಉಪಪ್ರಾಂಗಣ, ಉಪ ಮಾರುಕಟ್ಟೆ ಪ್ರಾಂಗಣ, ಖಾಸಗಿ ಮಾರುಕಟ್ಟೆ ಪ್ರಾಂಗಣ ಅಥವಾ ಸಂದರ್ಭಾನುಸಾರ ರೈತ–ಗ್ರಾಹಕ ಮಾರುಕಟ್ಟೆ ಪ್ರಾಂಗಣವನ್ನು ಬಿಟ್ಟು, ಬೇರೆ ಕಡೆ ಅಂದರೆ ರೈತ ಹೊಲ, ಮನೆಗಳ ಆವರಣದಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮಾಡುವಂತಿಲ್ಲ.
ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸ್ಥಳ ಉಪಯೋಗಿಸಲು ಪರವಾನಗಿ ಪಡೆಯಬೇಕು. ಅಲ್ಲದೆ, ವ್ಯಾಪಾರ, ದಲ್ಲಾಳಿ, ಸಂಸ್ಕರಣಗಾರ, ದಾಸ್ತಾನುಗಾರ ಪರವಾನಗಿ ಪಡೆಯುವುದು ಕಡ್ಡಾಯ. ಇದರ ಉಲ್ಲಂಘನೆಯಾದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಅಪರಾಧ ಸಾಬೀತಾದರೆ ದಂಡ ಮತ್ತು ಆರು ತಿಂಗಳವರೆಗೆ ಕಾರಾಗೃಹವಾಸಕ್ಕೆ ಒಳಬೇಕಾಗುತ್ತದೆ.
ಕಾಮಗಾರಿ ಮೊತ್ತ ಮಿತಿ ಏರಿಕೆ: ಎಸ್‌ಸಿ ಮತ್ತು ಎಸ್‌ಟಿ ಗುತ್ತಿಗೆದಾರರು ನಿರ್ಮಾಣ ಕಾಮಗಾರಿಗಳ ಮೊತ್ತದ ಮಿತಿಯನ್ನು ₹50 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ)ಮಸೂದೆ 2023 ಅನ್ನು ಮಂಡಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಸೂದೆ ಮಂಡಿಸಿದರು.
ಅನರ್ಹತಾ ನಿವಾರಣಾ ಮಸೂದೆ: ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಿಗಾಗಿ ಕಚೇರಿಯನ್ನು ಸೃಜಿಸುವ ಉದ್ದೇಶದಿಂದ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ಅಧಿನಿಯಮ 1956 ಅನ್ನು ತಿದ್ದುಪಡಿ ಮಾಡಲು ಮಸೂದೆಯನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ ಮಂಡಿಸಿದರು.
ರಸ್ತೆ ಸುರಕ್ಷತಾ ಪ್ರಾಧಿಕಾರ: ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನು ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಧಿನಿಯಮದ ವ್ಯಾಪ್ತಿಗೆ ತರಲು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ಮಸೂದೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.