ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

742 ಕಿ.ಮೀ. ರೈಲ್ವೆ ಮಾರ್ಗಕ್ಕೆ ಅಂತಿಮ ಸ್ಥಳ ಸಮೀಕ್ಷೆ: ಸಚಿವ ಅಶ್ವಿನಿ ವೈಷ್ಣವ್

Published 10 ಫೆಬ್ರುವರಿ 2024, 14:22 IST
Last Updated 10 ಫೆಬ್ರುವರಿ 2024, 14:22 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ನಗರ ಪ್ರದೇಶಗಳ ನಡುವೆ ತಡೆರಹಿತ ರೈಲು ಸೇವೆ ಒದಗಿಸುವ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನ ನಗರದ ಸುತ್ತಲೂ 742 ಕಿ.ಮೀ. ಹೊಸ ರೈಲು ಮಾರ್ಗ ನಿರ್ಮಿಸಲು ಅಂತಿಮ ಸ್ಥಳ ಸಮೀಕ್ಷೆಗೆ ಮಂಜೂರಾತಿ ನೀಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. 

ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಲಹರ್ ಸಿಂಗ್‌ ಸಿರೋಯಾ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು. 

ಬೆಂಗಳೂರಿನ ಸುತ್ತಮುತ್ತಲಿನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ದೇಶದ ಅತಿದೊಡ್ಡ ವೃತ್ತರೈಲು ಸಂಪರ್ಕಜಾಲವನ್ನು (ಸರ್ಕ್ಯುಲರ್‌ ರೈಲ್ವೆ) ನಿರ್ಮಿಸುವ ಯೋಜನೆ ಇದಾಗಿದೆ. ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ನಡೆದಿದೆ ಎಂದರು.

ನಿಡವಂದ–ದೊಡ್ಡ ಬಳ್ಳಾಪುರ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಸೋಲೂರು–ನಿಡವಂದ ನಿಲ್ದಾಣಗಳನ್ನು ಸಂಪರ್ಕಿಸುವ ವೃತ್ತರೈಲು ಸಂಪರ್ಕ ಜಾಲ 287 ಕಿ.ಮೀ.ನಷ್ಟು ಇರಲಿದೆ ಎಂದು ಹೇಳಿದರು. 

ಬೆಂಗಳೂರು-ತುಮಕೂರು ನಡುವೆ ಚತುಷ್ಪಥ (70 ಕಿ.ಮೀ); ಚಿಕ್ಕಬಾಣಾವರ - ಹಾಸನ (180 ಕಿ.ಮೀ) ನಡುವೆ ದ್ವಿಪಥ; ಬೆಂಗಳೂರು-ಮೈಸೂರು ನಡುವೆ ಚತುಷ್ಪಥ (135 ಕಿ.ಮೀ); ಬಂಗಾರಪೇಟೆ - ಜೋಲಾರ್‌ಪೇಟೆ (70 ಕಿ.ಮೀ) ನಡುವೆ ಚತುಷ್ಪಥ ರೈಲು ಮಾರ್ಗಕ್ಕೆ ಅಂತಿಮ ಸ್ಥಳ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಲಾಗಿದೆ ಎಂದೂ ಮಾಹಿತಿ ನೀಡಿದರು.

ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಅನುಷ್ಠಾನಗೊಳಿಸುತ್ತಿದೆ. 148 ಕಿ.ಮಿ. ಉದ್ದದ ಈ ಯೋಜನೆಗೆ ಕೇಂದ್ರ ಸಂಪುಟವು 2020ರಲ್ಲಿ ಅನುಮೋದನೆ ನೀಡಿತ್ತು. ಈ ಯೋಜನೆಯು ನಾಲ್ಕು ಕಾರಿಡಾರ್‌ಗಳನ್ನು ಒಳಗೊಂಡಿದೆ ಎಂದರು. 

ಈ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿದೆಯೇ ಎಂಬ ಪ್ರಶ್ನೆಗೆ ಸಚಿವರು, ‘ಇದು ರಾಜ್ಯ ಸರ್ಕಾರದಿಂದ ತ್ವರಿತ ಭೂಸ್ವಾಧೀನ, ಅರಣ್ಯ ಭೂಮಿ ಬಳಕೆಗೆ ಒಪ್ಪಿಗೆ, ಯೋಜನಾ ವೆಚ್ಚ ಹಂಚಿಕೆ ಮತ್ತಿತರ ಅಂಶಗಳನ್ನು ಒಳಗೊಂಡಿರುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT