ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಪಾಲು; ಕರ್ನಾಟಕದ ಸೊಲ್ಲು

16 ನೇ ಹಣಕಾಸು ಆಯೋಗದ ಮೇಲೆ ಒತ್ತಡ ಹೇರುವ ಯತ್ನ
Published 3 ಜನವರಿ 2024, 0:30 IST
Last Updated 3 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಪಾಲು ನೀಡುತ್ತಿದ್ದರೂ ರಾಜ್ಯಕ್ಕೆ ಸಿಗುತ್ತಿರುವ ತೆರಿಗೆ ಪಾಲಿನ ಮೊತ್ತ ವರ್ಷದಿಂದ ವರ್ಷಕ್ಕೆ ಇಳಿಕೆ ಮಾಡುತ್ತಿರುವುದರ ವಿರುದ್ಧ ಸೊಲ್ಲೆತ್ತಲು ಕರ್ನಾಟಕ ಅಣಿಯಾಗಿದೆ.

2025–26ರಿಂದ ತನ್ನ ಚಟುವಟಿಕೆ ಆರಂಭಿಸಲಿರುವ 16ನೇ ಹಣಕಾಸು ಆಯೋಗದ ಮುಂದೆ ತಮ್ಮ ನ್ಯಾಯದ ಪಾಲನ್ನು ಕೇಳುವ ಸಲುವಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳನ್ನು ಒಗ್ಗೂಡಿಸುವತ್ತ ಸರ್ಕಾರ ಹೆಜ್ಜೆ ಇಟ್ಟಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಅನ್ಯಾಯ’ಕ್ಕೆ ಒಳಗಾದ ರಾಜ್ಯಗಳ ನ್ಯಾಯಯುತ ಹಕ್ಕನ್ನು ಮುಂದಾಗಿದ್ದಾರೆ. ಹಣಕಾಸು ಆಯೋಗದ ಮುಂದೆ ಮಂಡಿಸಬೇಕಾದ ವಾದದ ನೆಲೆ ರೂಪಿಸಲು ‘ವಿಶೇಷ ಕೋಶ’ವನ್ನು ರಚಿಸಲು ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ. 

15 ನೇ ಹಣಕಾಸು ಆಯೋಗ ರಚನೆಯಾಗುವವರೆಗೆ ರಾಜ್ಯಕ್ಕೆ ಸಮಾಧಾನ ಪ್ರಮಾಣದ ಪಾಲು ಸಿಗುತ್ತಿತ್ತು. ಬಳಿಕ ತೆರಿಗೆ ಪಾಲು, ಕೇಂದ್ರದ ಅನುದಾನ, ಸಹಾಯಧನ ಕುಸಿಯುತ್ತಲೇ ಹೋಯಿತು. ‘15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಂದು ಪ್ರಮುಖ ಮತ್ತು ಗಂಭೀರ ಸವಾಲು ಎದುರಾಯಿತು. ಕೇಂದ್ರ ತೆರಿಗೆಗಳ ಪಾಲು ಕಡಿಮೆಯಾಯಿತು. 14ನೇ ಹಣಕಾಸು ಆಯೋಗದ ಅವಧಿಯಲ್ಲಿ ತೆರಿಗೆಯಲ್ಲಿ ಭಾಗಿಸಬಹುದಾದ ಗುಣಕವು ಶೇ 1.98ರಷ್ಟಿದ್ದರೆ, 2021–26ರ ಅವಧಿಯ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ 1.5ಕ್ಕೆ ಇಳಿಕೆಯಾಯಿತು. ಎರಡು ಆಯೋಗದ ಶಿಫಾರಸುಗಳ ನಡುವೆ ಕರ್ನಾಟಕವು ಕೇಂದ್ರದ ತೆರಿಗೆ ವರ್ಗಾವಣೆಯ ಪಾಲಿನಲ್ಲಿ ಶೇ 24.5ರಷ್ಟು ಕುಸಿತ ಕಂಡಿತು’ ಎಂದು 2023ರ ಮಾರ್ಚ್‌ನಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ. 

14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಶೇ 4.71ರಷ್ಟು ಪಾಲು ನೀಡಲಾಗಿತ್ತು. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಅದನ್ನು ಶೇ 3.64 ಕ್ಕೆ ಇಳಿಕೆಯಾಯಿತು. ಇದರಿಂದ ಮೂರು ವರ್ಷಗಳಲ್ಲಿ ಕರ್ನಾಟಕಕ್ಕೆ ₹26,140 ಕೋಟಿ ಕೊರತೆ ಆಗಿದೆ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರತಿಪಾದಿಸುತ್ತಿದೆ. 

2019–23ರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು, ಕೇಂದ್ರದಿಂದ ಸಿಗುತ್ತಿರುವ ಅನುದಾನ ಕುಸಿತವಾಗುತ್ತಾ ಬಂದಿರುವುದನ್ನು ಉಲ್ಲೇಖಿಸಿದ್ದರು. ಮುಖ್ಯಮಂತ್ರಿಯಾದ ಬಳಿಕ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.

ರಾಜ್ಯವಾರು ಸಂಗ್ರಹವಾಗುವ ತೆರಿಗೆ ಪಾಲಿನ ಹಂಚಿಕೆ ಮಾಡುವ ವಿಧಾನವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದಲಾಯಿಸಿದ್ದೇ ಇದಕ್ಕೆ ಕಾರಣ. ಹೆಚ್ಚು ತೆರಿಗೆ ಸಂಗ್ರಹವಾಗುವ ರಾಜ್ಯಕ್ಕೆ ಹೆಚ್ಚಿನ ಪಾಲನ್ನು ನೀಡುವ ಬದಲಿಗೆ ಜನಸಂಖ್ಯೆ, ಹಿಂದುಳಿದಿರುವಿಕೆ ಮತ್ತಿತರ ಮಾನದಂಡ ಆಧರಿಸಿ ತೆರಿಗೆ ಪಾಲು ಹಂಚಿಕೆ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತು. ಒಟ್ಟು ಜಿಡಿಪಿಯ ಮೂರನೇ ಒಂದರಷ್ಟು ಹಾಗೂ ತೆರಿಗೆಯ ಶೇ 30ರಷ್ಟು ಮೊತ್ತ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಸಂಗ್ರಹವಾಗುತ್ತಿದೆ. ಪಾಲು ನೀಡುವಾಗ, ಉತ್ತರ ಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳಿಗೆ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ. ಈ ತಾರತಮ್ಯದ ವಿರುದ್ಧ ಧ್ವನಿ ಎತ್ತಲು ಸರ್ಕಾರ ಮುಂದಾಗಿದೆ. ದಕ್ಷಿಣದ ರಾಜ್ಯಗಳ ಜತೆಗೆ, ಇದೇ ರೀತಿಯ ಅನ್ಯಾಯಕ್ಕೆ ಒಳಗಾಗಿರುವ ಉತ್ತರದ ರಾಜ್ಯಗಳನ್ನೂ ಸೇರಿಸಿಕೊಳ್ಳುವ ಆಲೋಚನೆ ಸರ್ಕಾರದ ಮುಂದಿದೆ ಎಂದು ತಿಳಿದುಬಂದಿದೆ. 

ನೀತಿ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರವಿಂದ್‌ ಪನಗಡಿಯಾ ಅವರು 16ನೇ ಹಣಕಾಸು ಆಯೋಗದ ಅಧ್ಯಕ್ಷರು. 2026ರ ಏಪ್ರಿಲ್‌ 1ರಿಂದ ಇದು ಕಾರ್ಯಾರಂಭ ಮಾಡಲಿದ್ದು, ಇದರ ಅವಧಿ ಐದು ವರ್ಷಗಳು.

ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡುವುದನ್ನು ಬದಲಿಸಬೇಕು. ಇದರ ಬದಲಿಗೆ,  ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಅಭಿವೃದ್ಧಿ ಹೊಂದದ ರಾಜ್ಯಗಳಿಂದ ಭಾರಿ ಪ್ರಮಾಣದಲ್ಲಿ ವಲಸಿಗರು ಬರುತ್ತಿರುವುದರಿಂದ ಇಂತಹ ‘ಗಮ್ಯ ರಾಜ್ಯ’ಗಳನ್ನು ಪುರಸ್ಕರಿಸಿ ಹೆಚ್ಚಿನ ಪಾಲು ನೀಡಬೇಕು ಎಂಬ ವಾದನ್ನು ಕರ್ನಾಟಕ ಮಂಡಿಸಲಿದೆ ಎಂದೂ ಮೂಲಗಳು ಹೇಳಿವೆ.

ವಿಶೇಷ ಕೋಶದಲ್ಲಿ ಯಾರು?

ಸರ್ಕಾರ ರಚಿಸಲಿರುವ ವಿಶೇಷ ಕೋಶದಲ್ಲಿ 14 ನೇ ಹಣಕಾಸು ಆಯೋಗದ ಸದಸ್ಯ ಎಂ.ಗೋವಿಂದ ರಾವ್‌, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌.ಶ್ರೀನಿವಾಸ ಮೂರ್ತಿ ಮತ್ತು ನಿಯಾಸ್‌ನ ನರೇಂದ್ರ ಪಾಣಿ ಅವರು ಇರುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ಹೇಳಿವೆ.

‘ಇತರ ರಾಜ್ಯಗಳ ಸಹಕಾರ ಪಡೆಯುತ್ತೇವೆ’

‘ತೆರಿಗೆ ಪಾಲಿನ ಹಂಚಿಕೆಯಲ್ಲಿ ನಷ್ಟ ಅನುಭವಿಸುತ್ತಿರುವ ರಾಜ್ಯಗಳನ್ನು ಒಟ್ಟಿಗೆ ಸೇರಿಸಿ, ಒಗ್ಗಟ್ಟಿನಿಂದ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ನಷ್ಟಕ್ಕೊಳಗಾದ ರಾಜ್ಯಗಳ ಸಹಕಾರವನ್ನು ಕೇಳುತ್ತೇವೆ. ಮುಖ್ಯವಾಗಿ ಮಹಾರಾಷ್ಟ್ರ, ಕೇರಳ, ತಮಿಳುನಾಡು ಅಲ್ಲದೇ, ಪಶ್ಚಿಮ ಬಂಗಾಳದ ನೇರವನ್ನೂ ಕೇಳುತ್ತೇವೆ. ಈ ರಾಜ್ಯಗಳೂ ತೆರಿಗೆ ಹಂಚಿಕೆಯಿಂದ ನಷ್ಟ ಅನುಭವಿಸಿವೆ’ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘16 ನೇ ಹಣಕಾಸು ಆಯೋಗ ಕರ್ನಾಟಕದ ಪಾಲಿಗೆ ಮಹತ್ವದ್ದು. ನಾವು ನಮ್ಮ ರಾಜ್ಯದ ಹಿತಾಸಕ್ತಿ
ಯನ್ನು ಕಾಪಾಡಿಕೊಳ್ಳಬೇಕು. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದದ ರಾಜ್ಯಗಳ ಮಧ್ಯೆ ಸಾಕಷ್ಟು (ತೆರಿಗೆ ಪಾಲಿನ ಹಂಚಿಕೆ) ತಾರತಮ್ಯ ಇದೆ. ಹಣಕಾಸು ಆಯೋಗದ ಮುಂದೆ ನಮ್ಮ ವಿಚಾರವನ್ನು ಪ್ರಬಲವಾಗಿ ಪ್ರತಿಪಾದಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಯವನ್ನು ಆರಂಭಿಸಲಿದ್ದೇವೆ’ ಎಂದು ರಾಯರಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT