ಬೆಳಗಾವಿಯ ವಿಧಾನಮಂಡಲದ ಅಧಿವೇಶನಕ್ಕೆ ದಿನಗಣನೆ ಶುರುವಾಗಿರುವ ಹೊತ್ತಿಗೆ, ವಿರೋಧ ಪಕ್ಷ ಬಿಜೆಪಿಯೊಳಗಿನ ಮುಷ್ಟಿ ಯುದ್ಧವೂ ಬಿರುಸುಗೊಳ್ಳುತ್ತಿದೆ. ಒಂದು ವರ್ಷದಿಂದ ಈಚೆಗೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ‘ಸಂಘಟಿತ’ ಹೋರಾಟ ರೂಪಿಸಿ, ವಿರೋಧ ಪಕ್ಷ ಸಕ್ರಿಯವಾಗಿದೆ ಎಂದು ತೋರಿಸಿಕೊಂಡಿದ್ದ ಕಮಲ ಪಡೆಯ ಕಟ್ಟಾಳುಗಳು ಈಗ ಒಳಜಗಳದಿಂದ ಹೈರಾಣಾಗುವ ಸ್ಥಿತಿ ತಲುಪಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಣ, ‘ಪಕ್ಷ ನಿಷ್ಠ’ರ ಗುಂಪೆಂದು ಹೇಳಿಕೊಳ್ಳುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಬಣ, ಎಲ್ಲವನ್ನೂ ನೋಡುತ್ತಾ ಅವಕಾಶಕ್ಕೆ ಕಾದುಕುಳಿತಂತಿರುವ ತಟಸ್ಥ ಬಣಗಳು, ‘ಕಮಲ’ದ ಒಂದೊಂದೇ ದಳಗಳನ್ನು ಕಿತ್ತು ಬೀದಿಗೆ ಬಿಸಾಡುತ್ತಿವೆ. ಒಂದು ಕಾಲದೊಳಗೆ ತಮ್ಮದು ಶಿಸ್ತಿನ ಪಕ್ಷವೆಂದು ಬೀಗುತ್ತಾ, ಕಾಂಗ್ರೆಸ್–ಜೆಡಿಎಸ್ನ ಜಗಳವನ್ನು ಹಂಗಿಸುತ್ತಿದ್ದ ಬಿಜೆಪಿ ನಾಯಕರು ಈಗ ಬಾಯಿಗೆ ಬೀಗ ಹಾಕಿಕೊಳ್ಳುವ ದುರ್ದಿನಗಳಿಗೆ ತಲುಪಿದ್ದಾರೆ.

ಡಿಸೆಂಬರ್ ಅಂತ್ಯದೊಳಗೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸುವ ಏಕೈಕ ಕಾರ್ಯಸೂಚಿ ಮುಂದಿಟ್ಟುಕೊಂಡಿರುವ ಯತ್ನಾಳ ಬಣ, ಪಕ್ಷದ ಪದಾಧಿಕಾರಿಗಳನ್ನು ಹೊರಗಿಟ್ಟು ವಕ್ಫ್ ಹೋರಾಟವನ್ನು ಮುನ್ನಡೆಸುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಒಂದೇ ಕಾರಣಕ್ಕೆ ವಿಜಯೇಂದ್ರ ಅವರನ್ನು ತಾತ್ಕಾಲಿಕವಾಗಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಆದರೆ, ಲಿಂಗಾಯತರ ಮತಗಳು ನಿರ್ಣಾಯಕವಾಗಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಂದ ಸಾಧ್ಯವಾಗಲಿಲ್ಲ. ಧಾರವಾಡದಲ್ಲಿ ನಡೆದ ಹಿಂದೂ ಯುವತಿಯ ಕೊಲೆಯಿಂದಾಗಿ ಮೂರು ಕ್ಷೇತ್ರಗಳು ಪಕ್ಷಕ್ಕೆ ಹೆಚ್ಚುವರಿಯಾಗಿ ಲಭಿಸಿದವು. ತುಮಕೂರು, ಬೆಂಗಳೂರಿನಲ್ಲಿ ಗೆಲ್ಲಲು ಯಡಿಯೂರಪ್ಪ ಪ್ರಭಾವಳಿಯ ಪಾತ್ರವೇ ಇರಲಿಲ್ಲ. ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿಕೂಟ ಮೂರರಲ್ಲೂ ಸೋತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಪ್ರಭಾವ ಕ್ಷೀಣಿಸಿರುವುದು ವರಿಷ್ಠರಿಗೆ ಅರ್ಥವಾಗಿದ್ದು, ವಿಜಯೇಂದ್ರ ಅವರನ್ನು ಇಳಿಸಲು ವರಿಷ್ಠರು ತಯಾರಿ ನಡೆಸಿದ್ದಾರೆ. ಇದೇ ಕಾರಣಕ್ಕೆ, ವಕ್ಫ್ ಹೋರಾಟಕ್ಕೆ ಬೆಂಬಲ ನೀಡಿದ್ದು, ಶೋಭಾ ಕರಂದ್ಲಾಜೆಯವರನ್ನು ವಿಜಯಪುರದ ಧರಣಿಗೆ ಕಳುಹಿಸಿದ್ದರು. ವರಿಷ್ಠರು ತಮ್ಮ ಜತೆಗಿದ್ದಾರೆ ಎಂಬ ವಿಶ್ವಾಸದಲ್ಲಿದೆ ಯತ್ನಾಳ ಬಣ.

ವಿಜಯೇಂದ್ರ ಅವರು ಹಿರಿಯರಿಗೆ ಗೌರವ ನೀಡುತ್ತಿಲ್ಲ. ಬಿಜೆಪಿ ಹಾಗೂ ಪರಿವಾರ ನಿಷ್ಠರಿಗಿಂತ, ಹಿಂದೆ ಯಡಿಯೂರಪ್ಪ ಕಟ್ಟಿದ್ದ ಕೆಜೆಪಿಯಲ್ಲಿ ಸಕ್ರಿಯರಾದವರಿಗೆ ಆದ್ಯತೆ ನೀಡಿದ್ದಾರೆ ಎಂಬುದು ಈ ಬಣದವರ ವಾದ. ತಾವೆಲ್ಲ ಪಕ್ಷ ನಿಷ್ಠರು ಎಂದು ಈ ಬಣ ಹೇಳಿಕೊಳ್ಳುತ್ತದೆಯಾದರೂ ಅರವಿಂದ ಲಿಂಬಾವಳಿ, ಪ್ರತಾಪ ಸಿಂಹರಂತಹ ಕೆಲವರನ್ನು ಬಿಟ್ಟರೆ ನಾಯಕತ್ವ ವಹಿಸಿಕೊಂಡ ಬಹುತೇಕರು, ಹೊರಗೆ ಹೋಗಿ ವಾಪಸ್ ಬಂದವರು ಅಥವಾ ಹೊರಗಿನಿಂದ ಬಂದವರೇ ಆಗಿದ್ದಾರೆ.

ಬಿ.ಎಲ್. ಸಂತೋಷ್ ಸೂತ್ರ:

ವಿಜಯೇಂದ್ರ ಅಧ್ಯಕ್ಷರಾದಾಗಿನಿಂದಲೂ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರ, ಹೊಂದಾಣಿಕೆ ರಾಜಕಾರಣದ ಬಗ್ಗೆ ಕಿಡಿ ಕಾರುತ್ತಿರುವ ಬಸನಗೌಡ ಪಾಟೀಲ ಯತ್ನಾಳರ ವಿರುದ್ಧ ವರಿಷ್ಠರು ಶಿಸ್ತುಕ್ರಮ ತೆಗೆದುಕೊಳ್ಳುವುದು ಹೋಗಲಿ, ನೋಟಿಸ್ ಕೂಡ ನೀಡಿಲ್ಲ. ಇವೆಲ್ಲ ಗಮನಿಸಿದರೆ, ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಇರುವ ಕೆಲವರು ಅವರ ಹಿಂದಿರುವುದು ಸ್ಪಷ್ಟ.

‘ಯತ್ನಾಳ ಬಣದ ಜತೆಗೆ ಗುರುತಿಸಿಕೊಂಡ ಬಹುತೇಕರು, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ನಿಕಟವರ್ತಿಗಳಾಗಿದ್ದಾರೆ. ವಿಜಯೇಂದ್ರ ಹೀಗೆ ಮುಂದುವರಿಯಲು ಬಿಟ್ಟರೆ, ಮತ್ತೆ ಯಾವತ್ತೂ ಕರ್ನಾಟಕದ ಕಡೆ ಮುಖ ಹಾಕಲಾಗದು ಎಂಬ ಭಾವನೆ ಅವರಲ್ಲಿದೆ. ಹೀಗಾಗಿ, ವಿಜಯೇಂದ್ರ ಇಳಿಸಲು ಸಂತೋಷ್ ಚಿತಾವಣೆ ಮಾಡಿದ್ದಾರೆ. ಹೀಗಾಗಿ, ಯಡಿಯೂರಪ್ಪ ತಮ್ಮ ಹಿತೈಷಿಗಳನ್ನು ಮುಂದೆ ಬಿಟ್ಟು ಯತ್ನಾಳ ಬಣಕ್ಕೆ ತಿರುಗೇಟು ನೀಡಲು ಸೂಚಿಸಿದ್ದಾರೆ’ ಎಂಬುದು ವಿಜಯೇಂದ್ರ ಬಣದ ವಾದ.

ವಿಜಯೇಂದ್ರ ಹಠಾವೋ ಹೋರಾಟಕ್ಕೆ ಜತೆಗೂಡಿರುವ ಯತ್ನಾಳ ಹಾಗೂ ರಮೇಶ ಜಾರಕಿಹೊಳಿ ಮಧ್ಯೆ ಸಂಘರ್ಷವಿತ್ತು. ಅವರಿಬ್ಬರನ್ನು ಒಂದೆಡೆ ಸೇರಿಸಿದ್ದು, ಜಿ.ಎಂ. ಸಿದ್ದೇಶ್ವರ, ಬಿ.ಪಿ. ಹರೀಶ್ ಮೊದಲಾದವರನ್ನು ಈ ಬಣಕ್ಕೆ ಕರೆತಂದಿದ್ದು ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್. ಆರ್. ಸಂತೋಷ್. ಯಡಿಯೂರಪ್ಪ ಸರ್ಕಾರ ತರಲು ಪ್ರಮುಖ ಪಾತ್ರ ವಹಿಸಿದ್ದ ಸಂತೋಷ್ ಅವರನ್ನು, ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ವಿಜಯೇಂದ್ರ ಹೊರಹಾಕಿದ್ದರು. ಈಗ ಇಬ್ಬರು ಸಂತೋಷ್ ಸೇರಿ, ವಿಜಯೇಂದ್ರ ಇಳಿಸುವ ತಯಾರಿ ನಡೆಸಿದ್ದಾರೆ. ಇದು ಗೊತ್ತಾಗಿಯೇ, ಒಂದು ಕೈ ನೋಡಿಯೇ ಬಿಡುವ ಹಟವನ್ನು ಯಡಿಯೂರಪ್ಪ ತೊಟ್ಟಿದ್ದಾರೆ.

ಹೀಗೆ, ಬಿಜೆಪಿಯ ಬಣ ಜಗಳ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪಕ್ಷ ವಿಭಜನೆಯ ಕಡೆಗೆ ಕೊಂಡೊಯ್ದರೂ ಅಚ್ಚರಿಯಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.