ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ದಾಳಿಯಲ್ಲಿ ಸಿಕ್ಕಿರುವುದು ಬಿಜೆಪಿಯ ಹಣ: ಡಿಸಿಎಂ ಡಿ.ಕೆ. ಶಿವಕುಮಾರ್‌

Published 17 ಅಕ್ಟೋಬರ್ 2023, 10:49 IST
Last Updated 17 ಅಕ್ಟೋಬರ್ 2023, 10:49 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಪತ್ತೆಯಾಗಿರುವ ಹಣ ಬಿಜೆಪಿಗೆ ಸೇರಿದ್ದು. ಆ ಹಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವ ಸಂಬಂಧವೂ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಐ.ಟಿ ಅಧಿಕಾರಿಗಳು ಕೆಲವು ಡೈರಿ, ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಆ ದಾಖಲೆಗಳು ಬಹಿರಂಗವಾದರೆ ಎಲ್ಲವೂ ಗೊತ್ತಾಗುತ್ತದೆ. ಅವರು ಮೊದಲು ದಾಖಲೆ ಬಹಿರಂಗಪಡಿಸಲಿ, ಬಳಿಕ ನನ್ನಲ್ಲಿ ಇರುವ ಮಾಹಿತಿಯನ್ನು ಹೇಳುವೆ’ ಎಂದರು.

ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸಿರುವುದು ಬಿಜೆಪಿ. ಆ ಪಕ್ಷವೇ ಭ್ರಷ್ಟಾಚಾರದ ಹಿಮಾಲಯ ಪರ್ವತ ಇದ್ದಂತೆ. ಅದಕ್ಕಾಗಿಯೇ ಜನರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರ ಬಳಿ ಹಣ ಪತ್ತೆಯಾಗಿದೆ. ಅದು ಬಿಜೆಪಿಗೆ ಸೇರಿದ ಹಣ ಎಂದು ಹೇಳಿದರು.

‘ಕಾಂಗ್ರೆಸ್ ಹೈಕಮಾಂಡ್ ನಡುಗುತ್ತಿದೆ’ ಎಂಬ ಆರ್. ಅಶೋಕ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್‌, ‘ನಡುಗುತ್ತಿರುವುದು ಕಾಂಗ್ರೆಸ್ ಹೈಕಮಾಂಡ್ ಅಲ್ಲ, ಬಿಜೆಪಿ ಹೈಕಮಾಂಡ್. ಈ ಭ್ರಷ್ಟಾಚಾರಕ್ಕೆಲ್ಲ ಅಡಿಪಾಯವೇ ಆರ್.ಅಶೋಕ, ನಕಲಿ ಸ್ವಾಮಿ, ಲೂಟಿ ರವಿ, ನವರಂಗಿ ನಾರಾಯಣ, ಬ್ಲಾಕ್ ಮೇಲರ್‌ಗಳು. ಈ ಅಕ್ರಮಗಳ ಹಿಂದೆ ಇವರ ಹೆಸರಿದೆ. ಅವರು ಯಾರಿಂದ ತನಿಖೆ ಮಾಡಿಸುತ್ತಾರೋ ಮಾಡಿಸಲಿ. ಈ ವಿಚಾರವಾಗಿ ತನಿಖೆ ಆಗಲಿ. ಅದನ್ನೇ ನಾವು, ನಮ್ಮ ನಾಯಕರು ಹೇಳುತ್ತಿದ್ದೇವೆ. ಅವರ ಕಾಲದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರವೇ ಇದಕ್ಕೆ ಅಡಿಪಾಯ’ ಎಂದರು.

‘ಆದಾಯ ತೆರಿಗೆ ಅಧಿಕಾರಿಗಳು ತಮ್ಮ ದಾಳಿ ಮುಗಿಸಿ ಅಧಿಕೃತ ಹೇಳಿಕೆ ಪ್ರಕಟಿಸಲಿ ಎಂದು ನಾವು ಇಷ್ಟು ದಿನ ಮಾತನಾಡಿರಲಿಲ್ಲ. ನಿನ್ನೆ ಐಟಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಐಟಿ, ಇ.ಡಿ ಎಲ್ಲಾ ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಈಗ ಎಲ್ಲಾ ದಾಖಲೆಗಳು ಅವರ ಬಳಿಯೇ ಇವೆ. ಅವುಗಳನ್ನು ಬಿಚ್ಚಿಡಲಿ’ ಎಂದು ಸವಾಲು ಹಾಕಿದರು.

‘ಕಲೆಕ್ಷನ್‌ ಮಾಸ್ಟರ್‌ ಕಾಂಗ್ರೆಸ್‌’ ಎಂಬ ಪೋಸ್ಟರ್‌ ಅನ್ನು ಬಿಜೆಪಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಬಗ್ಗೆ ಕೇಳಿದಾಗ, ‘ಬಿಜೆಪಿಯ ಭ್ರಷ್ಟಾಚಾರ ಹಿಮಾಲಯ ಪರ್ವತದಷ್ಟಿದೆ. ಮುಖ್ಯಮಂತ್ರಿ ಹುದ್ದೆಗೆ ₹ 2,500 ಕೋಟಿ ಸಂಗ್ರಹ ಮಾಡಲಾಗಿತ್ತು. ಮುಖ್ಯಮಂತ್ರಿ ಕಚೇರಿಯಲ್ಲೇ ಎಷ್ಟು ಭ್ರಷ್ಟಾಚಾರ ನಡೆದಿತ್ತು ಎಂದು ಬಿಜೆಪಿಯ ಶಾಸಕರು, ಮಾಜಿ ಮಂತ್ರಿಗಳೇ ಹೇಳಿದ್ದಾರೆ. ಈಗ ಮಾತಾಡುತ್ತಿರುವವರು ಅದನ್ನು ಒಮ್ಮೆ ನೋಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT