ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಸ್. ಯಡಿಯೂರಪ್ಪ ಎದುರು ಮಂಡಿಯೂರಿತೇ ಬಿಜೆಪಿ ಹೈಕಮಾಂಡ್: ಕಾಂಗ್ರೆಸ್ ಪ್ರಶ್ನೆ

Last Updated 3 ಆಗಸ್ಟ್ 2021, 9:16 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ ಎಂಬ ವರದಿಗಳ ಬಗ್ಗೆ ಕಾಂಗ್ರೆಸ್ ಕಿಡಿ ಕಾರಿದೆ.

#ಫ್ಯಾಮಿಲಿಜನತಾಪಾರ್ಟಿ ಹ್ಯಾಷ್‌ಟ್ಯಾಗ್‌ನೊಂದಿಗೆ ಬಿಜೆಪಿ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ಆಡಳಿತ ಪಕ್ಷವು ನೈತಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸಿದೆ.

‘ಬಿಜೆಪಿಗೆ ವಂಶ ರಾಜಕಾರಣ ಬೆಳೆಸುವುದರಲ್ಲಿ ಬಹಳ ಆಸಕ್ತಿ! ಮುಖ್ಯಮಂತ್ರಿಯಾಗಿದ್ದವರ ಪುತ್ರನನ್ನು ರಾಜ್ಯದಲ್ಲಿ ಮೊದಲ ಬಾರಿ ಸಿಎಂ ಮಾಡಿದ ಹೆಗ್ಗಳಿಕೆಯೊಂದಿಗೆ ಈಗ ಚುನಾಯಿತ ಪ್ರತಿನಿಧಿಯೇ ಅಲ್ಲದ ವಿಜಯೇಂದ್ರ ಅವರನ್ನು ಸಚಿವರನ್ನಾಗಿಸಲು ಮುಂದಾಗಿದೆ. ಯಡಿಯೂರಪ್ಪ ಅವರ ಮುಂದೆ ದೆಹಲಿ ಹೈಕಮಾಂಡ್ ಮಂಡಿಯೂರಿ ಶರಣಾಗಿದೆಯೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಹಿಂಬಾಗಿಲಲ್ಲಿ ಆಡಳಿತ ನಡೆಸುತ್ತಿದ್ದ 'ಸೂಪರ್ ಸಿಎಂ' ವಿಜಯೇಂದ್ರ ಅವರನ್ನು ಮುಂಬಾಗಿಲ ಮೂಲಕ ಕರೆತರಲು #ಫ್ಯಾಮಿಲಿಜನತಾಪಾರ್ಟಿ ಸಜ್ಜಾಗಿದೆ! ವರ್ಗಾವಣೆ ದಂಧೆ, ಆಪರೇಷನ್ ಕಮಲ, ಸೇವಾ ತೆರಿಗೆ ಲೂಟಿ, ಭ್ರಷ್ಟಾಚಾರಗಳ ರೂವಾರಿ ಎಂದು ತಮ್ಮದೇ ಪಕ್ಷದವರಿಂದ ಹೇಳಿಸಿಕೊಂಡಿರುವ ವಿಜಯೇಂದ್ರ ಅವರನ್ನು ಸಂಪುಟ ಸೇರುತ್ತಿರುವುದು ಬಿಜೆಪಿಯ ನೈತಿಕ ದಿವಾಳಿತನಕ್ಕೆ ಸಾಕ್ಷಿ’ ಎಂದು ಕಾಂಗ್ರೆಸ್ ಹೇಳಿದೆ.

‘ರಾಜ್ಯದಲ್ಲಿನ ಹಲವು ಸಮಸ್ಯೆಗಳ ಬಗ್ಗೆ ರಾಜ್ಯದ 25 ಸಂಸದರಲ್ಲಿ ಒಬ್ಬರೂ ಸಂಸತ್ತಿನಲ್ಲಿ ಧ್ವನಿ ಎತ್ತದೆ ಬೆಕ್ಕಿಗೆ ಹೆದರಿ ಅಡಗಿದ ಇಲಿಯಂತೆ ಕುಳಿತಿದ್ದಾರೆ! ನೆರೆಯಿಂದ ಅರ್ಧ ಕರ್ನಾಟಕ ಮುಳುಗಿದೆ, ಪರಿಹಾರದ ಬಗ್ಗೆ ಪ್ರಶ್ನೆ ಎತ್ತಲಿಲ್ಲ. ಲಸಿಕೆ ಕೊರತೆ ಇದೆ, ಗಮನ ಸೆಳೆಯಲಿಲ್ಲ. ಜಿಎಸ್‌ಟಿ ಬಾಕಿ ಇದೆ, ಬೇಡಿಕೆ ಇಡಲಿಲ್ಲ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

‘ಪ್ರಧಾನಿಯವರ ಹಲವು ಸಲಹೆಗಾರರು ರಾಜೀನಾಮೆ ನೀಡಿ ಹೋಗುತ್ತಿದ್ದಾರೆ. ಅಮರಜಿತ್ ಸಿನ್ಹಾ ಅವರು ಕಾರಣ ನೀಡದೆಯೇ ರಾಜೀನಾಮೆ ಕೊಡುವ ಮೂಲಕ ಕಿರು ಅವಧಿಯಲ್ಲಿ ಇಬ್ಬರು ಸಲಹೆಗಾರರು ರಾಜೀನಾಮೆ ಕೊಟ್ಟಂತಾಗಿದೆ. ರಾಡರ್ ತಜ್ಞ ನರೇಂದ್ರ ಮೋದಿ ಅವರು ದೇಶ ಮುಳುಗಿಸುತ್ತಿರುವಾಗ ಬಚಾವಾಗಲು ಒಬ್ಬೊರಾಗಿಯೇ ದೋಣಿಯಿಂದ ಹೊರಗೆ ಜಿಗಿಯುತ್ತಿರುವಂತಿದೆ!’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT