ಬೆಂಗಳೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವತಂತ್ರವಾಗಿ ಕೆಲಸ ಮಾಡಲು ಗಾಂಧಿ ಕುಟುಂಬ ಅವಕಾಶ ನೀಡುತ್ತಿಲ್ಲ’ ಎಂಬ ರಾಜ್ಯಸಭೆಯ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್‌ನ ಕಾಂಗ್ರೆಸ್ ಮಾಜಿ ಸದಸ್ಯರಾದ ಮೋಹನ್ ಕುಮಾರ್ ಕೊಂಡಜ್ಜಿ ಮತ್ತು ಪಿ.ಆರ್. ರಮೇಶ್, ‘ಇದು ಅವರು ಕಂಡುಹಿಡಿದ ಕಥೆ’ ಎಂದು ಟೀಕಿಸಿದ್ದಾರೆ.
‘ಎಸ್. ನಿಜಲಿಂಗಪ್ಪ ಅವರು ಗಾಂಧಿ ಕುಟುಂಬದ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಿದ್ದರು. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಗಾಂಧಿ ಕುಟುಂಬವು ಅವರನ್ನು ಹತ್ತಿಕ್ಕಲು ಪ್ರಯತ್ನಿಸಿತ್ತು’ ಎಂಬ ಲಹರ್ ಸಿಂಗ್ ಹೇಳಿಕೆ ವಾಸ್ತವಕ್ಕೆ ದೂರವಾದುದು. ಲಹರ್ ಸಿಂಗ್ ಅವರು ಮೊದಲು ತಮ್ಮ ಪಕ್ಷದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಇದೆಯೇ ಎಂದು ಸ್ಪಷ್ಟಪಡಿಸಲಿ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ’ ಎಂದು ದೂರಿದ್ದಾರೆ.
‘ಕಾಂಗ್ರೆಸ್ ಪಕ್ಷದ ಬೆಂಬಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಅಂದಿನ ಕೇಂದ್ರದ ಸಮ್ಮಿಶ್ರ ಸರ್ಕಾರ ಪತನಗೊಂಡಿತ್ತು. ಆದರೆ, ಈಗಿನ ಬಿಜೆಪಿಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರದ್ದೇ ಸರ್ವಾಧಿಕಾರ. ಎಲ್.ಕೆ. ಅಡ್ವಾಣಿ ಮೂಲೆಗುಂಪು ಆಗಿರುವುದೇ ಅದಕ್ಕೆ ನಿದರ್ಶನ’ ಎಂದೂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.