ಬೆಂಗಳೂರು: ಅಂತೂ ಕೊನೆಗೂ ತಮ್ಮದು ಹಿಟ್ಲರ್ ಸರ್ಕಾರ ಎಂಬುದನ್ನು ಕಾಂಗ್ರೆಸ್ ಸರ್ಕಾರ ನಿರೂಪಿಸಿದೆ ಎಂದು ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಚ್.ಎಸ್. ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆಂಬ ಆರೋಪದಡಿ ತಮ್ಮನ್ನು ಬಂಧಿಸಿದ್ದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸರಣಿ ವಿರುದ್ಧ ಟ್ವೀಟ್ ಮಾಡಿರುವ ಅವರು, ‘ಸರ್ಕಾರದ ವಿರುದ್ಧ, ಮುಖ್ಯಮಂತ್ರಿಗಳ ಧೋರಣೆಯ ವಿರುದ್ದ ಮಾತನಾಡಿದರೆ ಮಹಿಳೆಯರು ಎಂಬುದನ್ನು ನೋಡದೆ ಮನೆಗಳ ಮೇಲೆ ಏಕಾಏಕಿ ದಾಳಿ ಮಾಡಿಸಿ ಬಂಧಿಸಲು ಅದೇಶಿಸುವ ಲಜ್ಜೆಗೆಟ್ಟ ಸರ್ಕಾರವಿದು’ ಎಂದು ಟೀಕಿಸಿದ್ದಾರೆ.
‘ಸಾಮಾನ್ಯ ಕಾರ್ಯಕರ್ತೆಯ ಬೆನ್ನೆಲುಬಾಗಿ ನಿಂತು ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿಸಿದ ರಾಜ್ಯ ಬಿಜೆಪಿ ನಾಯಕರು, ತುಮಕೂರು ಬಿಜೆಪಿ ಮುಖಂಡರು, ಪದಾಧಿಕಾರಿಗಳು, ರಾಜ್ಯ ಕಾನೂನು ಮತ್ತು ಸಾಮಾಜಿಕ ಮಾಧ್ಯಮ ಪ್ರಕೋಷ್ಠಕ್ಕೆ, ಹಾಗೂ ಸಾಮಾಜಿಕ ಜಾಲತಾಣದಲ್ಲಿ ನನ್ನ ಪರನಿಂತ ನನ್ನೆಲ್ಲಾ ಸಹೋದರ ಸಹೋದರಿಯರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ... ಮುಖ್ಯಮಂತ್ರಿ ಕುಟುಂಬ ಅವಹೇಳನ: ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ, ಬಿಡುಗಡೆ
ಅಂತೂ ಕೊನೆಗೂ ತಮ್ಮದು ಹಿಟ್ಲರ್ ಸರ್ಕಾರ ಅಂತ ನಿರೂಪಿಸಿತು ಕಾಂಗ್ರೆಸ್ ಸರ್ಕಾರ.
— ಶಕುಂತಲ🪷Shakunthala (@ShakunthalaHS) July 30, 2023
ಸರ್ಕಾರದ ವಿರುದ್ಧ, ಮುಖ್ಯಮಂತ್ರಿಗಳ ಧೋರಣೆಯ ವಿರುದ್ದ ಮಾತನಾಡಿದರೆ ಮಹಿಳೆಯರು ಎಂಬುದ ನೋಡದೆ ಮನೆಗಳ ಮೇಲೆ ಏಕಾಏಕಿ ದಾಳಿ ಮಾಡಿಸಿ ಬಂಧಿಸಲು ಅದೇಶಿಸುವ ಲಜ್ಜೆಗೆಟ್ಟ ಸರ್ಕಾರವಿದು..@INCIndia
ಸಾಮಾನ್ಯ ಕಾರ್ಯಕರ್ತೆಯ ಬೆನ್ನೆಲುಬಾಗಿ ನಿಂತು ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿಸಿದ ರಾಜ್ಯ ಬಿಜೆಪಿ ನಾಯಕರು & ತುಮಕೂರು ಬಿಜೆಪಿ ಮುಖಂಡರು,ಪದಾಧಿಕಾರಿಗಳು,ರಾಜ್ಯ ಕಾನೂನು ಮತ್ತು ಸಾಮಾಜಿಕ ಮಾಧ್ಯಮ ಪ್ರಕೋಷ್ಠಕ್ಕೆ,ಹಾಗೂ ಸಾಮಾಜಿಕ ಜಾಲತಾಣದಲ್ಲಿ ನನ್ನ ಪರನಿಂತ ನನ್ನೆಲ್ಲಾ ಸಹೋದರ ಸಹೋದರಿಯರಿಗೂ ಹಾಗೂ ಮಾಧ್ಯಮ ಮಿತ್ರರಿಗೂ ಕೂಡ ಧನ್ಯವಾದಗಳು.
— ಶಕುಂತಲ🪷Shakunthala (@ShakunthalaHS) July 30, 2023
ಏನಿದು ವಿವಾದ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆಂಬ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಇತ್ತೀಚೆಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದು, ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು.
‘ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ತುಮಕೂರಿನ ಶಕುಂತಲಾ, ಅವಹೇಳನಕಾರಿಯಾಗಿ ಮತ್ತೊಂದು ಪೋಸ್ಟ್ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಹನುಮಂತರಾಯ ದೂರು ನೀಡಿದ್ದರು. ಮಹಿಳೆಯ ಗೌರವಕ್ಕೆ ಧಕ್ಕೆ ತಂದ (ಐಪಿಸಿ 509) ಆರೋಪದಡಿ ಶಕುಂತಲಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿದ್ದವು.
‘ಪ್ರಕರಣ ದಾಖಲಾಗುತ್ತಿದ್ದಂತೆ ಶಕುಂತಲಾ ಅವರಿಗೆ ನೋಟಿಸ್ ನೀಡಲಾಗಿತ್ತು. ನಂತರ, ಅವರನ್ನು ವಶಕ್ಕೆ ಪಡೆದು ಬಂಧಿಸಲಾಯಿತು. ಇದೊಂದು ಜಾಮೀನು ಸಹಿತ ಪ್ರಕರಣವಾಗಿದ್ದರಿಂದ, ಠಾಣೆ ಜಾಮೀನು ಮೇಲೆ ಶಕುಂತಲಾ ಅವರನ್ನು ಶುಕ್ರವಾರವೇ ಬಿಡುಗಡೆ ಮಾಡಲಾಗಿದೆ. ಅವರು ತಪ್ಪೊಪ್ಪಿಗೆ ಬರೆದುಕೊಟ್ಟಿದ್ದಾರೆ’ ಎಂದು ತಿಳಿದುಬಂದಿದೆ.
ಮುಸ್ಲಿಂ ಯುವತಿಯರು ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೊ ಮಾಡಿದ್ದು ಕಾಂಗ್ರೆಸ್‌ನವರ ಪ್ರಕಾರ ಮಕ್ಕಳಾಟವಂತೆ. ಸಿದ್ದರಾಮಯ್ಯ ಅವರ ಸೊಸೆ ಅಥವಾ ಹೆಂಡತಿಯ ವಿಡಿಯೊವನ್ನು ಇದೇ ರೀತಿ ಮಾಡಿದರೆ, ಅದನ್ನು ಮಕ್ಕಳಾಟ ಅಂತ ಒಪ್ಪಿಕೊಳ್ಳತ್ತೀರಾ?’ ಎಂದು ಶಕುಂತಲಾ ಪೋಸ್ಟ್ ಪ್ರಕಟಿಸಿದ್ದರು. ಇದಾದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧ ಚರ್ಚೆ ಆರಂಭವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.