ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಮಳೆ: ತುಂಬಿದ ಕೆರೆ–ಕಟ್ಟೆ

Published 21 ಮೇ 2024, 16:10 IST
Last Updated 21 ಮೇ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಮಂಗಳವಾರವೂ ಮುಂದುವರಿದಿದೆ. ಕೆಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆಗಿದೆ.

ತುಮಕೂರು ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಹಲವು ಕಡೆ ಉತ್ತಮ ಮಳೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೋವಿನಕೆರೆ, ತುರುವೇಕೆರೆ, ಮಧುಗಿರಿ, ಹುಳಿಯಾರು ಭಾಗಗಳ ಕೆಲವು ಕಡೆಗಳಲ್ಲಿ ಹಳ್ಳ,ಕೊಳ್ಳಗಳು ತುಂಬಿ ಹರಿದವು.

ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಶುರುವಾಗಿದೆ. ಹೀಗಾಗಿ ಮಂಗಳೂರು ನಗರಕ್ಕೆ ಎದುರಾಗಿದ್ದ ಕುಡಿಯುವ ನೀರಿನ ಕೊರತೆಯ ಆತಂಕ ನಿವಾರಣೆಯಾದಂತಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆರೆ–ಕಟ್ಟೆಗಳು ತುಂಬಿ ಹರಿಯುತ್ತಿವೆ. ತರೀಕೆರೆ, ಕಡೂರು ಅಜ್ಜಂಪುರ ತಾಲ್ಲೂಕಿನಲ್ಲಿ ಹಲವು ಕೆರೆಗಳು ತುಂಬಿವೆ. ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯೂ ಮಳೆ ಅಬ್ಬರಿಸಿದೆ. ತರೀಕೆರೆ ತಾಲ್ಲೂಕಿನ ಉಡೇವಾ ಗ್ರಾಮದ ಊರ ಮುಂದಿನ ಕೆರೆ ತುಂಬಿದ್ದು, ಗ್ರಾಮಸ್ಥರು ಬಾಗಿನ ಅರ್ಪಿಸಿದರು. 

ಕಡೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದ ಕೆರೆ ಒಂದೇ ದಿನದ ಮಳೆಗೆ ತುಂಬಿದ್ದು, ಕೆರೆ ಏರಿ ಒಡೆದು ನೀರು ಪೋಲಾಗುತ್ತಿದೆ. ಇನ್ನೊಂದೆಡೆ ಬರಿದಾಗಿದ್ದ ಸೀಗೆಹಡ್ಲು ಗ್ರಾಮದ ಕೆರೆ ಸೋಮವಾರ ರಾತ್ರಿ ಸುರಿದ ಮಳೆಗೆ ತುಂಬಿಕೊಂಡಿದೆ. 

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಕಾನಹೊಸಹಳ್ಳಿ ಹೋಬಳಿ ಯಂಬಳಿ-ಆಲೂರು ಮಧ್ಯದ ರಸ್ತೆ ಮಳೆ ನೀರಿನಿಂದ ಕೊಚ್ಚಿ ಹೋಗಿದೆ. ಕೂಡ್ಲಿಗಿ ಹೊರವಲಯದಲ್ಲಿನ ಉಜ್ಜಯಿನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದು, ಸಂಚಾರಕ್ಕೆ ಅಡಚಣೆಯಾಗಿದೆ.

 ಮೈಸೂರು ಭಾಗದ ಮೈಸೂರು, ಕೊಡಗು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಗುಡುಗು–ಸಿಡಿಲಿನಿಂದ ಕೂಡಿದ ಬಿರುಸಿನ ಮಳೆಯಾಗಿದೆ.

 ಮಧ್ಯ ಕರ್ನಾಟಕದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ವೇದಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆ ಸುರಿದಿದ್ದು, ವಾಣಿ ವಿಲಾಸ ಸಾಗರ ಜಲಾಶಯಕ್ಕೆ 5,680 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮಳೆ ಸುರಿದಿದೆ.

ಸಿಡಿಲು ಬಡಿದು ಸಾವು:  ಚಿತ್ರದುರ್ಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮೊಳಕಾಲ್ಮುರು ತಾಲ್ಲೂಕಿನ ಮೇಲಿನಕಣಿವೆ ಗ್ರಾಮದ ರೈತ ನಿಂಗರಾಜ್‌ (25) ಮಂಗಳವಾರ ಮಧ್ಯಾಹ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಗ್ರಾಮದ ಕೆರೆಯ ಸಮೀಪ ಇದ್ದಿಲು ತಯಾರಿಸುವ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಲಕ್ಷ್ಮಿ (58) ಸಿಡಿಲು ಬಡಿದು ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.

ಪುತ್ತೂರು ವರದಿ(ದಕ್ಷಿಣ ಕನ್ನಡ): ಮನೆಯ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಕೂಲಿ ಕಾರ್ಮಿಕರೊಬ್ಬರು ಸೋಮವಾರ ಸಂಜೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಪಲ್ಲತ್ತಾರು ಎಂಬಲ್ಲಿ ಮೃತಪಟ್ಟಿದ್ದಾರೆ. ಒಳಮೊಗ್ರು ಗ್ರಾಮದ ಕಲ್ಲಡ್ಕ ಪಲ್ಲತ್ತಾರು ನಿವಾಸಿ ಪಿ.ಬಾಬು (55) ಮೃತಪಟ್ಟವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT