ಬೆಂಗಳೂರು: ರಾಜ್ಯದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾನುವಾರ ಮಳೆ ಮುಂದುವರಿದಿದ್ದು, ಕೊಡಗು ಜಿಲ್ಲೆಯಲ್ಲಿ ತಗ್ಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕುಮಟಾ, ಹೊನ್ನಾವರ ಭಾಗದಲ್ಲಿ ನಿರಂತರ ಮಳೆ ಆಗುತ್ತಿದೆ. ಕಾರವಾರ, ಭಟ್ಕಳ, ಯಲ್ಲಾಪುರ, ಶಿರಸಿ, ದಾಂಡೇಲಿ ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ.
(ಮಡಿಕೇರಿ ವರದಿ): ಕೊಡಗು ಜಿಲ್ಲೆಯಲ್ಲಿ ಭಾನುವಾರ ಮಳೆ ಸಂಪೂರ್ಣ ತಗ್ಗಿದೆ. ಮಡಿಕೇರಿಯಲ್ಲಿ ಆಗಾಗ ಮಳೆಯಾಗಿದೆ. ಬಿರುಗಾಳಿಯಿಂದಾಗಿ ವಿವಿಧೆಡೆ 12 ವಿದ್ಯುತ್ ಕಂಬಗಳು ಹಾಗೂ 5 ಮರಗಳು ಧರೆಗುರುಳಿವೆ. ಮಳೆ ಕಡಿಮೆಯಾದ್ದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.
(ಮಂಗಳೂರು ವರದಿ):ಬಂಟ್ವಾಳ ತಾಲ್ಲೂಕಿನ ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿ ಶನಿವಾರ ರಾತ್ರಿ ಮಳೆ ಬರುತ್ತಿದ್ದ ವೇಳೆ, ಕಾಲು ಸಂಕ ದಾಟುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ಪರಿಯಾಲ್ತಡ್ಕದ ಕೇಶವ ನಾಯ್ಕ (51) ಮೃತಪಟ್ಟಿದ್ದಾರೆ. ಭಾನುವಾರ ಅವರ ಮೃತದೇಹ ಪತ್ತೆಯಾಗಿದೆ.
ಸುಳ್ಯ ತಾಲ್ಲೂಕಿನ ಆಲೆಟ್ಟಿ ಗ್ರಾಮದ ಹೊನ್ನೇಡಿಯಲ್ಲಿ ಕಾಲುಸಂಕ ದಾಟುವಾಗ ಹಳ್ಳಕ್ಕೆ ಬಿದ್ದು ಗುರುವಾರ ಸಂಜೆ ನೀರಿನಲ್ಲಿ ಕೊಚ್ಚಿಹೋಗಿದ್ದ ನಾರಾಯಣ ಗೌಡ ಅವರ ಮೃತದೇಹ ಭಾನುವಾರ ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಭಾನುವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಗಳಲ್ಲಿ ಸುಳ್ಯ ತಾಲ್ಲೂಕಿನ ಅಜ್ಜಾವರದಲ್ಲಿ ರಾಜ್ಯದಲ್ಲೇ ಗರಿಷ್ಠ (12.55 ಸೆಂ.ಮೀ.) ಮಳೆಯಾಗಿದೆ.
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕಣಂಜಾರು, ಬೈಂದೂರು ತಾಲ್ಲೂಕಿನ ಕಂಬದಕೋಣೆ, ಯಳಜಿತ್, ಪಡುವರಿ, ಕಾಪು ತಾಲ್ಲೂಕಿನ ತೆಂಕ, ಎಲ್ಲೂರು, ನಡ್ಸಾಲು, ಕುಂದಾಪುರ ತಾಲ್ಲೂಕಿನ ಹೊಸಾಡು, ಕೊಡ್ತಡಿ, ಉಡುಪಿ ತಾಲ್ಲೂಕಿನ ಅಲೆವೂರಿನಲ್ಲಿ ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.