ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Rajyotsava 2022: ನಾಡೆಲ್ಲ ಕೋಟಿ ಕಂಠದ ‘ಡಿಂಡಿಮ’

ಕಡಲಾಳಕ್ಕೆ ಕಲರವ ಮುಟ್ಟಿಸಿದ ದೋಣಿಗಳು, ಆಗಸದಲ್ಲೂ ಝೇಂಕರಿಸಿದ ಕನ್ನಡ
Published : 28 ಅಕ್ಟೋಬರ್ 2022, 21:15 IST
ಫಾಲೋ ಮಾಡಿ
Comments

ಬೆಂಗಳೂರು: ಕಡಲ ಮಡಿಲಿನಿಂದ ಹಿಡಿದು ಆಕಾಶದೆತ್ತರಕ್ಕೂ ವಿಶ್ವ ವಿನೂತನವಾಗಿ ಹರಡಿದ ಕನ್ನಡದ ಕಲರವ, ಸರ್ವರ ಹೃದಯ ಸಂಸ್ಕಾರಿಯಾಗಿ ಕನ್ನಡ ಡಿಂಡಿಮವ ಬಾರಿಸಿತು.

ಕನ್ನಡ ರಾಜ್ಯೋತ್ಸವದ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮದಿಂದಾಗಿ ನಾಡಿನುದ್ದಕ್ಕೂ ಎಲ್ಲೆಲ್ಲೂ ಕನ್ನಡ ಗೀತೆಗಳದ್ದೆ ಝೇಂಕಾರ. ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಾವಿರ ಸಾವಿರ ಸಂಖ್ಯೆಯಲ್ಲಿ ಕನ್ನಡದ ದನಿಗಳು ಜೊತೆಯಾಗಿ ಹಾಡಿದವು. ಇದಕ್ಕೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್, ಕಂದಾಯ ಸಚಿವಆರ್.ಅಶೋಕ ಹಾಗೂ ಹಲವು ಶಾಸಕರುಧ್ವನಿಗೂಡಿಸಿದರು.‌

ನೇತ್ರಾವತಿ ಮತ್ತು ಫಲ್ಗುಣಿ ನದಿಗಳು ಅರಬ್ಬಿ ಸಮುದ್ರ ಸೇರುವ ಸಂಗಮದಲ್ಲಿ ಅಲೆಗಳ ಅಬ್ಬರಕ್ಕೆ ಕನ್ನಡದ ಹಾಡುಗಳ ಅಬ್ಬರವೂ ಜೊತೆಯಾಯಿತು. ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಹೊರಟ 50 ದೋಣಿಗಳು ತೋಟ ಬೆಂಗ್ರೆ ಅಳಿವೆ ಬಾಗಿಲುವರೆಗೆ
ಸಾಗಿ ಕನ್ನಡದ ಹಾಡುಗಳನ್ನು ಕಡಲಾಳಕ್ಕೂ ತಲುಪಿಸಿದವು.

ಕರ್ನಾಟಕ ನಂ. 1 ಮಾಡ್ತೇವೆ: ಬೊಮ್ಮಾಯಿ

‘ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬ ವ್ಯಕ್ತಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುತ್ತೇವೆ. ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ನೀಡುವ ಮೂಲಕ ಕರ್ನಾಟಕವನ್ನು ಭಾರತದಲ್ಲೇ ನಂಬರ್‌ 1 ರಾಜ್ಯವನ್ನಾಗಿ ಮಾಡುವ ಛಲವನ್ನು ತೊಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಇನ್ನಷ್ಟು ಶಕ್ತಿಶಾಲಿಯಾಗಿ ಹೊರ ಹೊಮ್ಮಲು ಎಲ್ಲ ಕನ್ನಡಿಗರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ‘ಕೋಟಿ ಕಂಠ ಗಾಯನಎಲ್ಲ ಕನ್ನಡಿಗರನ್ನೂ ಒಂದುಗೂಡಿಸುವ ಶ್ರೇಷ್ಠ ಕಾರ್ಯಕ್ರಮ. ಇದರಿಂದ ಕನ್ನಡಿಗರಲ್ಲಿ ಒಗ್ಗಟ್ಟು ಮೂಡುವುದಕ್ಕೆ ಸಹಾಯಕವಾಗಲಿದೆ. ಕರ್ನಾಟಕ ಅತ್ಯುನ್ನತ ಸ್ಥಾನಕ್ಕೆ ಏರಬೇಕು ಎಂಬ ಹಿರಿಯರ ಕನಸು ನನಸಾಗುವ ಸಂಕ್ರಮಣ ಕಾಲದಲ್ಲಿದ್ದೇವೆ. ಈ ಬಾರಿ ಕೋಟಿ ಕಂಠ ಗಾಯನ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ’ ಎಂದು ಬೊಮ್ಮಾಯಿ ಹೇಳಿದರು.

ಆಗಸದಲ್ಲೂ ಕನ್ನಡ ಕಲರವ

ವಿಮಾನದಲ್ಲೂ ಪ್ರಯಾಣಿಕರು ಕನ್ನಡ ಗೀತೆಗಳನ್ನು ಹಾಡಿ ಆಗಸದಲ್ಲೂ ಕನ್ನಡದ ಕಲರವ ಹರಡಿದರು.

ಬೆಂಗಳೂರಿನಿಂದ ಗ್ವಾಲಿಯರ್‌ಗೆ ತೆರಳಿದ ಸ್ಪೈಸ್ ಜೆಟ್ ವಿಮಾನವೊಂದಲ್ಲಿ ರಾಜ್‌ಕುಮಾರ್ ಹಾಡಿರುವ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡನ್ನು ಮೈಕ್‌ನಲ್ಲಿ ಹಾಡಲಾಯಿತು. ಇದಕ್ಕೆ ಪ್ರಯಾಣಿಕರೂ ಧ್ವನಿಗೂಡಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು, ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲೂ ಕನ್ನಡದ ಹಾಡುಗಳು ಮೊಳಗಿ ದವು.

ಬೆಳಗಾವಿಯ ಸುವರ್ಣಸೌಧದ ಮೆಟ್ಟಿಲುಗಳ ಮೇಲೂ ಸಾವಿರಾರು ವಿದ್ಯಾರ್ಥಿಗಳು ಕನ್ನಡದ ಡಿಂಡಿಮ ಬಾರಿಸಿದರು.

ವಿಜಯಪುರದ ಗೋಲಗುಮ್ಮಟ,ಹಂಪಿಯ ವಿರೂಪಾಕ್ಷ ದೇಗುಲದ ಆವರಣ, ಮೈಸೂರಿನ ಅರಮನೆ, ಮಡಿಕೇರಿಯ ರಾಜಾಸೀಟು, ಬಾದಾಮಿಯ ಮೇಣ ಬಸದಿ, ಶೃಂಗೇರಿಯ ಶಾರದಾ ದೇಗುಲ ಮಾತ್ರವಲ್ಲದೇ, ರಾಜ್ಯದ ಎಲ್ಲಾ ಕಾರಾಗೃಹಗಳ ಆವರಣದಲ್ಲೂ ಕನ್ನಡ ಕಂಠಗಳು ಒಂದಾಗಿ ಮೊಳಗಿದವು.

ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನುಹಾಡಲಾಯಿತು.

‘1.35 ಕೋಟಿಗೂ ಹೆಚ್ಚು ಕನ್ನಡದ ಮನಸ್ಸುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ. 50 ದೇಶಗಳಲ್ಲಿ, 27 ರಾಜ್ಯಗಳಲ್ಲಿ, 30 ಸಾವಿರಕ್ಕೂ ಹೆಚ್ಚು ಸಂಘ–ಸಂಸ್ಥೆಗಳು 10 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ’ ಎಂದು ವಿ. ಸುನಿಲ್‌ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT