ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ | ಬಂದ ತಕ್ಷಣವೇ ಪ್ರಜ್ವಲ್‌ ರೇವಣ್ಣ ವಶಕ್ಕೆ; ಸಾಧ್ಯತೆ

ವಿಮಾನ ನಿಲ್ದಾಣದಲ್ಲಿ ಕಾದು ಕುಳಿತ ತನಿಖಾ ತಂಡ
Published 29 ಮೇ 2024, 23:30 IST
Last Updated 29 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಗುರುವಾರ ಮಧ್ಯರಾತ್ರಿ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಾಧ್ಯತೆಯಿದೆ.

ಪ್ರಜ್ವಲ್‌ ನಿಲ್ದಾಣಕ್ಕೆ ಬಂದ ತಕ್ಷಣವೇ ವಶಕ್ಕೆ ಪಡೆದು ಬಂಧಿಸಲು ಎಸ್‌ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಬೀಡುಬಿಟ್ಟಿದ್ದಾರೆ.

ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನದಲ್ಲಿ ಪ್ರಜ್ವಲ್‌ ರೇವಣ್ಣ ಹೆಸರಿನಲ್ಲೇ ಟಿಕೆಟ್‌ ಕಾದಿರಿಸಲಾಗಿದೆ. ಆ ವಿಮಾನವು ಗುರುವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರಲಿದೆ. ಅದೇ ವಿಮಾನದಲ್ಲಿ ಪ್ರಜ್ವಲ್‌ ಬರಲಿದ್ದಾರೆ ಎಂದು ತನಿಖಾಧಿಕಾರಿಗಳು ವಿಮಾನದ ನಿಲ್ದಾಣದ ಬಳಿ ಕಾದು ಕುಳಿತಿದ್ದಾರೆ.

‘ಎಸ್‌ಐಟಿ (ವಿಶೇಷ ತನಿಖಾ ತಂಡ) ಅಧಿಕಾರಿಗಳ ಎದುರು ಮೇ 31ರಂದು ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ವಿದೇಶದಿಂದ ವಿಡಿಯೊ ಸಂದೇಶ ಕಳುಹಿಸಿದ್ದರು. ಹೀಗಾಗಿ ಎಸ್‌ಐಟಿ ನಿಗಾ ವಹಿಸಿದೆ.

‘ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್‌ ಕಳುಹಿಸಿರುವ ವಿಡಿಯೊ ಪರಿಶೀಲಿಸಲಾಗಿದೆ. ಒಂದು ತಂಡ ವಿಮಾನ ನಿಲ್ದಾಣದಲ್ಲಿದೆ. ನ್ಯಾಯಾಲಯದಿಂದ ಬಂಧನ ವಾರಂಟ್‌ ಜಾರಿ ಆಗಿದ್ದು ಪ್ರಜ್ವಲ್‌ ಬಂದ ತಕ್ಷಣವೇ ವಶಕ್ಕೆ ಪಡೆದು ಬಂಧಿಸಲಾಗುವುದು. ಬ್ಲೂ ಕಾರ್ನರ್‌ ನೋಟಿಸ್‌ ಜಾರಿ ಮಾಡಿದ್ದರಿಂದ ವಿಮಾನ ನಿಲ್ದಾಣದ ಇಮಿಗ್ರೇಷನ್‌ ಅಧಿಕಾರಿಗಳು, ಪ್ರಜ್ವಲ್‌ ಅವರನ್ನು ವಶಕ್ಕೆ ಪಡೆದು ನಮಗೆ ಹಸ್ತಾಂತರಿಸಲಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಧ್ವನಿ ಹಾಗೂ ದೇಹ ಹೋಲಿಕೆ ಪರೀಕ್ಷೆ:

‘ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಕೋರ್ಟ್‌ ಅನುಮತಿ ಪಡೆದು ಕಸ್ಟಡಿಗೆ ಪಡೆಯಲಾಗುವುದು. ಬಳಿಕ ಅಶ್ಲೀಲ ವಿಡಿಯೊದಲ್ಲಿ ಕೇಳಿಬರುವ ಧ್ವನಿ ಹಾಗೂ ಪ್ರಜ್ವಲ್‌ ಅವರ ಧ್ವನಿಗೂ ಹೋಲಿಸಿ ಪರೀಕ್ಷೆ ನಡೆಸಲಾಗುವುದು. ಅಶ್ಲೀಲ ವಿಡಿಯೊಗಳಲ್ಲಿ ಪುರುಷನ ಧ್ವನಿ ಕೇಳಿಸುತ್ತದೆ. ಕೆಲವು ವಿಡಿಯೊಗಳಲ್ಲಿ ಸಂತ್ರಸ್ತೆಯರ ಜೊತೆಗೆ ಸಂಭಾಷಣೆ ನಡೆಸಿರುವುದು ದಾಖಲಾಗಿದೆ. ವಿಡಿಯೊಗಳಲ್ಲಿ ಪುರುಷನ ಮುಖ ಚಹರೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಧ್ವನಿ ಪರೀಕ್ಷೆ ಈ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ’ ಎಂದು ಮೂಲಗಳು ಹೇಳುತ್ತವೆ.

ಬುಡಾಪೆಸ್ಟ್‌ನಿಂದ ವಿಡಿಯೊ ಬಿಡುಗಡೆ

ಮೇ 31ರಂದು ಬೆಳಿಗ್ಗೆ 10ಕ್ಕೆ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್‌ ರೇವಣ್ಣ ಅವರು ರವಾನೆ ಮಾಡಿದ್ದ ವಿಡಿಯೊ ವಿಳಾಸವನ್ನು ಎಸ್‌ಐಟಿ ಪತ್ತೆ ಹಚ್ಚಿದೆ. ಹಂಗೇರಿಯ ಬುಡಾಪೆಸ್ಟ್‌ನಿಂದ ಈ ವಿಡಿಯೊ ಬಿಡುಗಡೆ ಆಗಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಅಜ್ಞಾತ ಸ್ಥಳದಿಂದ ವಿಡಿಯೊ ರೆಕಾರ್ಡ್‌ ಮಾಡಿ ಬಿಡುಗಡೆ ಮಾಡಲಾಗಿತ್ತು. ತಾವಿರುವ ಸ್ಥಳದ ಮಾಹಿತಿಯನ್ನು ವಿಡಿಯೊದಲ್ಲಿ ಹೇಳಿರಲಿಲ್ಲ. ವಿಡಿಯೊ ಬಿಡುಗಡೆಯಾದ ಮೇಲೆ ಎಸ್ಐಟಿ ತಂಡವು ಐಪಿ ವಿಳಾಸದ ಜಾಡು ಹಿಡಿದು ಪರಿಶೀಲನೆ ನಡೆಸಿದಾಗ ವಿಳಾಸ ಪತ್ತೆಯಾಗಿದೆ.

ಪ್ರಜ್ವಲ್‌ ಅವರೇ ವಿಡಿಯೊ ಕಳುಹಿಸಿದ್ದಾರೆಯೇ ಅಥವಾ ಅವರ ಸ್ನೇಹಿತರು ರವಾನೆ ಮಾಡಿದರೆ ಎಂಬುದು ತಿಳಿದುಬಂದಿಲ್ಲ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT