ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 7ರಂದು ರಾಜ್ಯ ಬಜೆಟ್‌: ಸಿಎಂ ಸಿದ್ದರಾಮಯ್ಯ

Published 5 ಜೂನ್ 2023, 9:14 IST
Last Updated 5 ಜೂನ್ 2023, 9:14 IST
ಅಕ್ಷರ ಗಾತ್ರ

ದಾವಣಗೆರೆ: ಜುಲೈ 3ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಜುಲೈ 7ರಂದು ಬಜೆಟ್ ಮಂಡಿಸಲಾಗುವುದು ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಬಜೆಟ್ ತಯಾರಿಕಾ ಪೂರ್ವಭಾವಿ ಸಭೆಯನ್ನೇ ಇನ್ನೂ ನಡೆಸಿಲ್ಲ. ಜುಲೈ 3ರಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು. ಆ ಬಳಿಕ ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ ನಡೆದ ನಂತರ 7ರಂದು ಬಜೆಟ್ ಮಂಡಿಸಲಾಗುವುದು. ಬಜೆಟ್ ಗಾತ್ರದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

ವಿದ್ಯುತ್ ದರ ಹೆಚ್ಚಳ ನಾವು ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿ ಪ್ರಸ್ತಾವ ಸಲ್ಲಿಸಿತ್ತು . ಈಗ ನಾವು ಅದನ್ನು ಜಾರಿಗೊಳಿಸಿದ್ದೇವೆ ಅಷ್ಟೇ ಎಂದು ವಿದ್ಯುತ್ ದರ ಹೆಚ್ಚಳ ಮಾಡಿದ ವಿಚಾರದ ಬಗ್ಗೆ ಸಮರ್ಥಿಸಿಕೊಂಡರು.

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಿದ್ದರಾಮಯ್ಯ, 1964 ರಲ್ಲಿಯೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಆ ಪ್ರಕಾರ 12 ವರ್ಷ ತುಂಬಿದ ರಾಸುಗಳು ಮತ್ತು ವ್ಯವಸಾಯಕ್ಕೆ ಅನುಕೂಲಕ್ಕೆ ಬಾರದ ರಾಸು ಮುಕ್ತಗೊಳಿಸಲಾಗಿತ್ತು. ಬಿಜೆಪಿ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೆ ತಂದಿತ್ತು. ಈಗ ಕ್ಯಾಬಿನೆಟ್ ನಲ್ಲಿ ನಾವು ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಕೃಷಿ ಚಟುವಟಿಕೆಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕಗಳನ್ನು ಪೂರೈಸುವಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಪಂ ಸಿಇಒಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಪ್ರವಾಹ ಬರದಿರಲಿ ಹಾರೈಸುತ್ತೇವೆ. ಆದರೆ, ಹಾಗೊಂದು ವೇಳೆ ಪ್ರವಾಹ ಬಂದರೆ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಆಯಾ ಜಿಲ್ಲೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಈ ವೇಳೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಐಜಿಪಿ ಟಿ.ತ್ಯಾಗರಾಜ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ,ಜಿಲ್ಲಾ ರಕ್ಷಣಾಧಿಕಾರಿ ಕೆ.ಅರುಣ್,ಜಿ.ಪಂ ಸಿಇಒ ಸುರೇಶ್ ಇಟ್ನಾಳ್,ಜಿಲ್ಲೆಯ‌ ಶಾಸಕರುಗಳಾದ ಕೆ.ಎಸ್ ಬಸವಂತಪ್ಪ,ಶಿವಗಂಗಾ ಬಸವರಾಜ್,ಬಿ.ದೇವೇಂದ್ರಪ್ಪ, ಡಿ.ಜಿ ಶಾಂತನಗೌಡ,ಸೈಯದ್ ಸೈಫುಲ್ಲಾ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT