ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಲೇಖಕರ ಪಠ್ಯ ಮರು ಸೇರ್ಪಡೆಗೆ ಸರ್ಕಾರ ಆದೇಶ

‘ಎದೆಗೆ ಬಿದ್ದ ಅಕ್ಷರ’ ಬೋಧನೆಗೆ ಅವಕಾಶ
Last Updated 29 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಪಠ್ಯ ಪುಸ್ತಕ ವಿವಾದದ ಬಳಿಕ ಮೂಲ ಲೇಖಕರು ಒಪ್ಪಿಗೆ ಸೂಚಿಸದಿರುವ ಕಾರಣಕ್ಕೆ 6, 9 ಹಾಗೂ 10ನೇ ತರಗತಿಯ ಪಾಠ ಹಾಗೂ ಪದ್ಯದ ಬೋಧನೆ ಕೈಬಿಟ್ಟಿದ್ದ ಸರ್ಕಾರವು ಈಗ ಅದೇ ಪಠ್ಯಗಳನ್ನು ಪರಿಗಣಿಸುವಂತೆ ಸೂಚಿಸಿ, ಶುಕ್ರವಾರ ಮರು ಆದೇಶ ಹೊರಡಿಸಿದೆ.

ಸಾಹಿತಿ ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’, ಡಾ.ಜಿ.ರಾಮಕೃಷ್ಣರ ‘ಭಗತ್‌ ಸಿಂಗ್‌’, ರೂಪಾ ಹಾಸನ ಅವರ ‘ಅಮ್ಮನಾಗುವುದೆಂದರೆ’, ಈರಪ್ಪ ಎಂ. ಕಂಬಳಿ ಅವರ ‘ಹೀಗೊಂದು ಟಾಪ್‌ ಪ್ರಯಾಣ’, ಸತೀಶ ಕುಲಕರ್ಣಿ ಅವರ ‘ಕಟ್ಟತೇವ ನಾವು’, ಸುಕನ್ಯಾ ಮಾರುತಿ ಅವರ ‘ಏಣಿ’ ಹಾಗೂ ದೊಡ್ಡಹುಲ್ಲೂರು ರುಕ್ಕೋಜಿರಾವ್‌ ಅವರ ‘ಡಾ.ರಾಜ್‌ಕುಮಾರ್‌’ ಎಂಬ ಪಾಠ ಹಾಗೂ ಪದ್ಯಗಳನ್ನು ವಿವಿಧ ತರಗತಿಗಳ ಪಠ್ಯದಲ್ಲಿ ಅಳವಡಿಸಲಾಗಿತ್ತು.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಬೆನ್ನಲ್ಲೇ ಈ ಲೇಖಕರು, ಪ್ರಸಕ್ತ ಶೈಕ್ಷಣಿಕ ಸಾಲಿಗೆ ಬೋಧನೆಗೆ ಪರಿಗಣಿಸದಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರು. ಸೆ.23ರಂದು ಪಠ್ಯ ಕೈಬಿಡುವಂತೆ ಸರ್ಕಾರಿ ಶಾಲೆ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಸರ್ಕಾರವು ಸೂಚಿಸಿ ಆದೇಶಿಸಿತ್ತು.

‘ಕೈಬಿಟ್ಟಿರುವ ಏಳು ಬರಹಗಾರರ ಪಠ್ಯವನ್ನು ಮುಂದುವರಿಸುವಂತೆ ಸಾರ್ವಜನಿಕರು, ಪೋಷಕರು ಹಾಗೂ ಗಣ್ಯರು ಕೋರಿದ್ದಾರೆ. ವಿದ್ಯಾರ್ಥಿಗಳು ಆಗಲೇ ಈ ಪಠ್ಯಗಳನ್ನು ವ್ಯಾಸಂಗ ಮಾಡಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಈ ವಿಷಯಗಳ ಬೋಧನೆ ಕೈಬಿಡುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಈ ಪಠ್ಯ ಮುಂದುವರಿಸಲು ಕೋರಿದ್ದರು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

2022–23ನೇ ಶೈಕ್ಷಣಿಕ ಸಾಲಿಗೆ ಮಾತ್ರ ಈ ಏಳು ಪಾಠಗಳನ್ನು ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸುವಂತೆ ಅ.28ರ ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT