ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಕೆಎಟಿ ತಡೆ

Published 26 ಏಪ್ರಿಲ್ 2024, 15:57 IST
Last Updated 26 ಏಪ್ರಿಲ್ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಕಲಬುರಗಿ ಪೀಠ ತಡೆ ನೀಡಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020 ಅನ್ವಯ 2024–25ನೇ ಸಾಲಿನ ಶಿಕ್ಷಕರ ಕೋರಿಕೆ ಹಾಗೂ ಕಡ್ಡಾಯ ವರ್ಗಾವಣೆಗೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಘೋಷಣೆಗೂ ಮೊದಲೇ  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿತ್ತು. ವರ್ಗಾವಣೆಗೆ ಅರ್ಹರಾದ ಶಿಕ್ಷಕರ ಅಂತಿಮ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು, ಅರ್ಜಿ ಸಲ್ಲಿಕೆಗೆ ಮೇ 15ರವರೆಗೂ ಅವಕಾಶ ನೀಡಲಾಗಿತ್ತು. 

ಶಿಕ್ಷಕರ ವರ್ಗಾವಣೆಯನ್ನು ನಾಲ್ಕು ವಲಯಗಳು ಎಂದು ವಿಂಗಡಿಸಿ ವರ್ಗಾವಣೆ ಮಾಡಲಾಗುತ್ತಿದೆ. ಒಂದೇ ಸ್ಥಳದಲ್ಲಿ, ಒಂದೇ ಹುದ್ದೆಯಲ್ಲಿ (ವೃಂದ) ಕೆಲಸ ಮಾಡಿದ ಶಿಕ್ಷಕರ ಸೇವಾ ವಿವರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಡೆದು, ಸೇವಾ ಪುಸ್ತಕದ ವಿವರಗಳೊಂದಿಗೆ ಪರಿಶೀಲಿಸಿದ ನಂತರ ಜಿಲ್ಲಾ ಉಪ ನಿರ್ದೇಶಕರಿಗೆ (ಡಿಡಿಪಿಐ) ಸಲ್ಲಿಸಲು ಸೂಚಿಸಲಾಗಿತ್ತು.

‘ಒಂದೇ ಸ್ಥಳ, ಒಂದೇ ಹುದ್ದೆಯ ಸೇವೆ ಪರಿಗಣಿಸಿದರೆ ಸೇವಾ ಕೃಪಾಂಕದಲ್ಲಿ (ವೆಯಿಟೇಜ್) ವ್ಯತ್ಯಾಸವಾಗಿ ಬಡ್ತಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ. ಹಾಗಾಗಿ, ಎಲ್ಲ ವಲಯಗಳ ಸೇವೆ ಪರಿಗಣಿಸಬೇಕು. ವೃಂದದ ಮಿತಿ ತಗೆದುಹಾಕಬೇಕು’ ಎಂದು ಶಿಕ್ಷಕರಾದ ಶಿವಕುಮಾರ್‌ ಮತ್ತಿತರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೆಎಟಿ ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT