ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ ಕೆಇಎ ಹೊಸ ಸೂತ್ರ

ಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ಕ್ರಮ– ಸರ್ಕಾರಕ್ಕೆ ಕೆಇಎ ವರದಿ
Published 13 ನವೆಂಬರ್ 2023, 19:55 IST
Last Updated 13 ನವೆಂಬರ್ 2023, 19:55 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಇಲಾಖೆ, ನಿಗಮ–ಮಂಡಳಿಗಳಲ್ಲಿನ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು, ಕೊಠಡಿಯಲ್ಲಿ ಎಷ್ಟು ಅಭ್ಯರ್ಥಿಗಳು ಇರುತ್ತಾರೋ ಅಷ್ಟು ಆವೃತ್ತಿಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವುದು ಸೂಕ್ತ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವರದಿ ಸಲ್ಲಿಸಿದೆ.

ಬ್ಲೂಟೂತ್ ಸಾಧನ ಬಳಸಿ ಕೆಇಎ ನೇಮಕಾತಿ ಪರೀಕ್ಷೆ ಬರೆದ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಆರಂಭಿಸಿದ್ದಾರೆ. ಆ ಬೆನ್ನಲ್ಲೆ, ಇಂತಹ ಅಕ್ರಮಗಳನ್ನು ತಡೆದು ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆಗಳನ್ನು ನಡೆಸಲು ಸರ್ಕಾರದ ಹಂತದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ವರದಿ ಸಲ್ಲಿಸಿದ್ದಾರೆ.

ವಿವಿಧ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಕೆಇಎ ಅ. 28ರಂದು ನಡೆಸಿದ್ದ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಸಾಧನ ಬಳಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಪ್ರಶ್ನೆ ಪತ್ರಿಕೆಗಳ ಆವೃತ್ತಿಗಳ ಸಂಖ್ಯೆ ಕಡಿಮೆ ಇರುವುದರಿಂದ ಬ್ಲೂಟೂತ್ ಮೂಲಕ ಆವೃತ್ತಿ ‘ಎ’ ಅಥವಾ ‘ಬಿ’ ಎಂದು ಅಭ್ಯರ್ಥಿಗೆ ಉತ್ತರಗಳನ್ನು ಹೇಳಿಕೊಡಲು ಪ್ರಯತ್ನ ನಡೆದಿತ್ತು. ಆ ರೀತಿ ಉತ್ತರ ಹೇಳುವುದನ್ನು ತಡೆಯಲು ಪ್ರಶ್ನೆಪತ್ರಿಕೆಗಳ ಆವೃತ್ತಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ವರದಿಯಲ್ಲಿ ಅವರು ವಿವರಿಸಿದ್ದಾರೆ.

ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು 04 (ಎಬಿಸಿಡಿ), 08 (ಎಬಿಸಿಡಿಇಎಫ್‌ಜಿಎಚ್‌), 16ರ ಆವೃತ್ತಿಗಳಲ್ಲಿ ಸಿದ್ದಪಡಿಸಲಾಗುತ್ತಿದೆ. ಇದರ ಬದಲು, ಎಷ್ಟು ಅಭ್ಯರ್ಥಿಗಳು ಇರುತ್ತಾರೋ ಅಷ್ಟು ಆವೃತ್ತಿಗಳಲ್ಲಿ ಸಿದ್ಧಪಡಿಸಬೇಕು. ಅಂದರೆ, ಒಂದು ಕೊಠಡಿಯಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಬೇರೆ ಬೇರೆ ಆವೃತ್ತಿಯ ಪ್ರಶ್ನೆಪತ್ರಿಕೆ ಒದಗಿಸಬೇಕು. ಇದರಿಂದಾಗಿ ಆವೃತ್ತಿ ‘ಎ’ ಅಥವಾ ‘ಬಿ’ ಎಂದು ಉತ್ತರಗಳನ್ನು ಹೇಳಲು ಕಷ್ಟಸಾಧ್ಯ. ಅಲ್ಲದೆ, ಆವೃತ್ತಿ ಬೇರೆ ಬೇರೆ ಇರುವುದರಿಂದ ಪ್ರಶ್ನೆಗಳನ್ನು ಪೂರ್ಣವಾಗಿ ಓದಿಯೇ ಉತ್ತರಗಳನ್ನು ಹೇಳಬೇಕಾಗಿರುತ್ತದೆ. ಪ್ರಶ್ನೆಗಳನ್ನು ಹುಡುಕಿ ಉತ್ತರ ಹೇಳುವುದು ಕಷ್ಟ. ಈ ವ್ಯವಸ್ಥೆ ಅಳವಡಿಸಿಕೊಂಡರೆ ಬ್ಲೂಟೂತ್ ಮತ್ತಿತರ ಅತ್ಯಾಧುನಿಕ ಸಾಧನಗಳನ್ನು ಬಳಸಿ ಪರೀಕ್ಷಾ ಅಕ್ರಮಕ್ಕೆ ಯತ್ನಿಸುವುದನ್ನು ತಡೆಯಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳಿಗೆ ಎರಡು ಹಂತಗಳಲ್ಲಿ ಬಹು ಆಯ್ಕೆ ಪರೀಕ್ಷೆಗಳನ್ನು ನಡೆಸಬೇಕು. ಮೊದಲ ಹಂತದಲ್ಲಿ ಆಯ್ಕೆಯಾದವರಿಗೆ ಮಾತ್ರ ಎರಡನೇ ಹಂತದಲ್ಲಿ ಪರೀಕ್ಷೆ ನಡೆಸಿ, ತೇರ್ಗಡೆ ಆದವರನ್ನು ಆಯ್ಕೆಗೆ ಪರಿಗಣಿಸಬೇಕು. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವವರ ಮೇಲೆ, ಪರೀಕ್ಷೆ ನಡೆಯುವ ಒಂದು ತಿಂಗಳ ಮೊದಲೇ ಪೊಲೀಸ್‌ ಇಲಾಖೆಯಿಂದ ರಚಿಸಲಾಗುವ ವಿಶೇಷ ಕಾರ್ಯಪಡೆ ನಿಗಾ ವಹಿಸಬೇಕು. ಅವಶ್ಯ ಇದ್ದರೆ ಮುಂಜಾಗ್ರತಾ ಕ್ರಮವಾಗಿ ಗಡಿಪಾರು ಮಾಡಬಹುದು. ಪರೀಕ್ಷಾ ಕೇಂದ್ರಗಳ ಸುತ್ತ ಕಟ್ಟೆಚ್ಚರ ವಹಿಸುವ ಜೊತೆಗೆ, ಗುಪ್ತಚರ ಮಾಹಿತಿ ಪಡೆಯಬೇಕು. ಅಲ್ಲದೆ, ಪರೀಕ್ಷಾ ಕೇಂದ್ರಗಳ ಹಾಗೂ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸುವ ಜವಾಬ್ದಾರಿಯನ್ನು ಕೂಡಾ ಈ ಕಾರ್ಯಪಡೆಗೆ ವಹಿಸುವುದು ಸೂಕ್ತವಾಗಿದೆ ಎಂದೂ ವರದಿಯಲ್ಲಿದೆ.

ಅಭ್ಯರ್ಥಿಗಳ ಸಂಖ್ಯೆ ಹೆಚ್ಚು, ಹುದ್ದೆಗಳ ಸಂಖ್ಯೆ ಕಡಿಮೆ:

ನಿಗಮ– ಮಂಡಳಿಗಳಲ್ಲಿನ ಖಾಲಿ ಹುದ್ದೆಗಳ ನೇರ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳಿಗೆ ಸಾಮಾನ್ಯವಾಗಿ ಎರಡು ಲಕ್ಷದಿಂದ ಐದು ಲಕ್ಷದವರೆಗೆ ಅಭ್ಯರ್ಥಿಗಳು ಭಾಗವಹಿಸುತ್ತಾರೆ. ಇತರ ಎಲ್ಲ ನೇಮಕಾತಿಗಳಿಗೆ ಹೋಲಿಸಿದರೆ ಎಸ್‌ಡಿಎ, ಎಫ್‌ಡಿಎ ನೇಮಕಾತಿಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುತ್ತಾರೆ. ಪದವಿ ತರಗತಿಯಲ್ಲಿ ಪಡೆದ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಮತ್ತು ಈ ಪರೀಕ್ಷೆಗಳನ್ನು ಬರೆಯಲು ಯಾವುದೇ ಪದವಿ ಅರ್ಹತೆ ಆಗಿರುವುದರಿಂದ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಾರೆ. ಅಲ್ಲದೆ, ಈ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಕೂಡಾ ಕನ್ನಡ, ಇಂಗ್ಲಿಷ್‌, ಕಂಪ್ಯೂಟರ್‌ ಸೈನ್ಸ್‌ ಮತ್ತು ಸಾಮಾನ್ಯ ಜ್ಞಾನ ಆಧಾರಿತ ಪ್ರಶ್ನೆಗಳು ಒಳಗೊಂಡಿರುವುದರಿಂದ ಯಾವುದೇ ವ್ಯಕ್ತಿ ಅಲ್ಪ ಪರಿಣತಿ ಇದ್ದರೂ ಗೂಗಲ್‌ ಮುಂತಾದ ತಂತ್ರಾಂಶಗಳನ್ನು ಬಳಸಿ ಉತ್ತರ ಸಿದ್ಧಪಡಿಸಬಹುದಾಗಿದೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚು, ಹುದ್ದೆಗಳ ಸಂಖ್ಯೆ ಕಡಿಮೆ ಹಾಗೂ ಮುಂದುವರಿದ ತಂತ್ರಜ್ಞಾನದ ಸಹಾಯದಿಂದ ಪರೀಕ್ಷೆಗಳಲ್ಲಿ ಅಕ್ರಮ ವಿಧಾನಗಳನ್ನು ಅನುಸರಿಸಿ ಅಂಕಗಳನ್ನು ಗಳಿಸುವ ಪ್ರಯತ್ನ ಇತ್ತೀಚೆಗೆ ಹೆಚ್ಚಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ಅವರು ವಿವರಿಸಿದ್ದಾರೆ.

‘ನಿರ್ದಿಷ್ಟ ವಿದ್ಯಾರ್ಹತೆಯ ಅನೇಕ ಹುದ್ದೆಗಳ ನೇಮಕಾತಿಗೆ ಕೆಇಎ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಾಮಾನ್ಯ ವಿದ್ಯಾರ್ಹತೆ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದು, ಪರೀಕ್ಷಾ ಅಕ್ರಮಗಳ ಸಾಧ್ಯತೆಯೂ ಹೆಚ್ಚಿರುತ್ತದೆ’ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT