ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘10 ಜಿಲ್ಲಾಸ್ಪತ್ರೆಗಳಲ್ಲಿ ಮ್ಯಾಮೊಗ್ರಫಿ ಮಷಿನ್‌’

Last Updated 19 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ತನ ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುವ ಮ್ಯಾಮೊಗ್ರಫಿ ಮೆಷಿನ್‌ಗಳನ್ನು 10 ಜಿಲ್ಲಾಸ್ಪತ್ರೆಗಳಲ್ಲಿ ಅಳವಡಿಸಲು ಇಲಾಖೆ ಸಿದ್ಧತೆ ನಡೆಸಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಹೇಳಿದರು.

ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ‘ರೊಬೊಟಿಕ್ಸ್‌ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯಿಂದ ಕರಳು ಮತ್ತು ಗರ್ಭಕೋಶದ ಕ್ಯಾನ್ಸರ್‌ ನಿವಾರಣೆ’ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಮ್ಯಾಮೊಗ್ರಫಿ ವೈದ್ಯಕೀಯ ಉಪಕರಣಕ್ಕೆ ₹ 1 ಕೋಟಿ ಮೀಸಲಿಡಲಾಗಿದೆ. ಇದರ ಜತೆಗೆ ಹಾಸನ, ಮಂಡ್ಯ, ತುಮಕೂರು ಹಾಗೂಕಾರವಾರದಲ್ಲಿ ಕ್ಯಾನ್ಸರ್‌ ಗುಣಪಡಿಸುವ ಆಸ್ಪತ್ರೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ’ ಎಂದರು.

ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಸಿ.ರಾಮಚಂದ್ರ,‘ಹೊಸ ತಂತ್ರಜ್ಞಾನದಿಂದ ರೂಪಗೊಂಡಿರುವ ಚಿಕಿತ್ಸಾ ವಿಧಾನಗಳನ್ನು ವೈದ್ಯರು ಕರಗತ ಮಾಡಿಕೊಳ್ಳಲು ಇಂತಹ ಕಾರ್ಯಾಗಾರಗಳು ನೆರವಾಗುತ್ತವೆ’ ಎಂದರು.

‘ನಮ್ಮ ಆಸ್ಪತ್ರೆಯಲ್ಲಿನ ರೊಬೊಟಿಕ್‌ ಮೆಷಿನ್‌ನಿಂದ ಸದ್ಯ ಪ್ರತಿದಿನ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಇನ್ನುಮುಂದೆ ಎರಡು ಶಸ್ತ್ರಚಿಕಿತ್ಸೆ ಮಾಡಲು ಸೌಕರ್ಯಗಳನ್ನು ಅಳವಡಿಸಿಕೊಂಡಿದ್ದೇವೆ. ಈ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಸರಾಸರಿ ₹ 5 ಲಕ್ಷ ವ್ಯಯಿಸಬೇಕು. ನಮ್ಮ ಸಂಸ್ಥೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ’ ಎಂದು ತಿಳಿಸಿದರು.

ಕಿದ್ವಾಯಿ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ 2016ರಲ್ಲಿ ₹ 16 ಕೋಟಿ ವೆಚ್ಚದಲ್ಲಿ ರೊಬೊಟಿಕ್‌ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿತ್ತು. ಈ ತಂತ್ರಜ್ಞಾನದಿಂದ ಈವರೆಗೂ 500 ರೋಗಿಗಳಿಗೆ ತಗುಲಿದ್ದ ಕ್ಯಾನ್ಸರ್‌ ನಿವಾರಣೆ ಮಾಡಲಾಗಿದೆ. ಆ ನೆನಪಿಗಾಗಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ದೇಶದ ವಿವಿಧ ನಗರಗಳಲ್ಲಿನ ಕ್ಯಾನ್ಸರ್‌ ಚಿಕಿತ್ಸಾ ತಜ್ಞರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಏಪ್ರಿಲ್‌ 19ರಂದು ಕರುಳಿನ ಕ್ಯಾನ್ಸರ್‌ ಕುರಿತು ಉಪನ್ಯಾಸ, ಸಂವಾದ ನಡೆದವು.

ದಕ್ಷಿಣ ಕೊರಿಯಾದ ಕ್ಯಾನ್ಸರ್‌ ತಜ್ಞ ಡಾ.ನಾಮ್‌ ಕ್ಯು ಕಿಮ್‌ ಅವರು ಕರುಳಿನ ಕ್ಯಾನ್ಸರ್‌ ಪೀಡಿತ ರೋಗಿಯೊಬ್ಬರಿಗೆ ರೊಬೊಟಿಕ್‌ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ಮಾಡುವುದನ್ನು ನೇರಪ್ರಸಾರ ಮಾಡಲಾಯಿತು. ಕಾರ್ಯಾಗಾರದಲ್ಲಿದ್ದ ವೈದ್ಯರು ಚಿಕಿತ್ಸೆಯಲ್ಲಿನ ಗೊಂದಲಗಳ ಕುರಿತು ಕಿಮ್‌ ಅವರಿಂದ ಮಾಹಿತಿ ಪಡೆದರು. ಗರ್ಭಕೋಶದ ಕ್ಯಾನ್ಸರ್‌ ಕುರಿತ ಉಪನ್ಯಾಸ, ಶಸ್ತ್ರಚಿಕಿತ್ಸೆಯ ನೇರಪ್ರಸಾರದ ಪ್ರಾತ್ಯಕ್ಷಿಕೆ ಶನಿವಾರ ನಡೆಯಲಿದೆ. ಇಲ್ಲಿ ನೋಂದಾಯಿತ ವೈದ್ಯರಿಗೆ ಮಾತ್ರ ಪ್ರವೇಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT