ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ಕಿತ್ತೂರು ಉತ್ಸವ– ವಿಜಯ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಚಾಲನೆ ನೀಡಿದರು.
ಬೆಳಗಾವಿ ಜಿಲ್ಲಾ ಆಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಬೆಂಗಳೂರಿನಿಂದ ಆರಂಭಗೊಂಡು ರಾಜ್ಯದಾದ್ಯಂತ ಈ ಜ್ಯೋತಿ ಸಂಚರಿಸಲಿದೆ. ಅ. 23, 24, 25ರಂದು ಬೆಳಗಾವಿಯ ಕಿತ್ತೂರಿನಲ್ಲಿ ವಿಜಯೋತ್ಸವ ನಡೆಯಲಿದೆ.
ಮುಖ್ಯಮಂತ್ರಿ ಮಾತನಾಡಿ, ‘ಕಿತ್ತೂರು ಚೆನ್ನಮ್ಮ ಉತ್ಸವ ಅ. 23, 24 ಮತ್ತು 25ರಂದು ನಡೆಯಲಿದೆ. ಆಂಗ್ಲರ ವಿರುದ್ಧ ವಿಜಯ ಸಾಧಿಸಿ ಇಂದಿಗೆ 200 ವರ್ಷಗಳು ಕಳೆದಿವೆ. ವಿಜಯ ಯಾತ್ರೆ ಇಂದಿನಿಂದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಿತ್ತೂರು ತಲುಪಲಿದೆ. ಕಿತ್ತೂರು ಉತ್ಸವಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ’ ಎಂದರು.
‘ಕಿತ್ತೂರು ರಾಣಿ ಚೆನ್ನಮ್ಮ ನಮಗೆ ಸ್ವಾಭಿಮಾನದ ಸಂಕೇತ. ಕಿತ್ತೂರು ರಾಣಿ ಚೆನ್ನಮ್ಮ ತೆರಿಗೆ ಕೊಡಲ್ಲ ಎಂದು ನೇರವಾಗಿ ಬ್ರಿಟಿಷರಿಗೆ ಹೇಳಿದ್ದರು. ಸಂಗೊಳ್ಳಿ ರಾಯಣ್ಣ ಕೂಡಾ ಅವರ ಸೇನೆಯಲ್ಲಿ ಇದ್ದರು. ಮೊದಲ ಯುದ್ಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಗೆ ಜಯ ಸಿಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶ ಪ್ರೇಮ, ಸ್ವಾಭಿಮಾನ ಎಲ್ಲವನ್ನೂ ನಾವು ಕಲಿಯಬೇಕಿದೆ’ ಎಂದರು.
‘ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕೂಡಾ ಇಂದೇ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಧ್ಯೇಯ, ಆದರ್ಶಗಳನ್ನೂ ಬದುಕಿನಲ್ಲಿ ಅಳವಡಿಸಿಕೊಳ್ಳೋಣ’ ಎಂದೂ ಸಿದ್ದರಾಮಯ್ಯ ಮನವಿ ಮಾಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಎಚ್.ಕೆ ಪಾಟೀಲ, ಶಾಸಕರಾದ ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್ ಇದ್ದರು.
ಬೆಂಗಳೂರಿನ ಶಿವಾನಂದ ವೃತ್ತದ ಬಳಿಯ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೂ ‘ಗಾಂಧಿ ನಡಿಗೆ’. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳಕರ, ಎಚ್.ಕೆ. ಪಾಟೀಲ, ಮಾಜಿ ಸಂಸದ ವೀರಪ್ಪ ಮೊಯಿಲಿ ಮುಂತಾದವರು ಭಾಗವಹಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.