ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲ್ಲೂರು ಮೂಕಾಂಬಿಕಾ ದೇಗುಲ: ಆಡಳಿತ ಮಂಡಳಿ ಸದಸ್ಯರ ಅರ್ಜಿ ತಿರಸ್ಕೃತ

Published 4 ಜನವರಿ 2024, 16:14 IST
Last Updated 4 ಜನವರಿ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ‘ಉಡುಪಿ ಜಿಲ್ಲೆ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಸಂಪೂರ್ಣ ಅಧಿಕಾರವಧಿ ಅನುಭವಿಸಿದ್ದರೂ, ಕೊನೆಯ ಗಳಿಗೆಯಲ್ಲಿ ಸಮಿತಿಯ ಅವಧಿ ವಿಸ್ತರಿಸುವಂತೆ ಮಾಡಿರುವ ಮನವಿಯನ್ನು ಅನುಮತಿಸಲು ಆಗದು‘ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದ್ದು, ಈ ಸಂಬಂಧ ಸಮಿತಿಯ ಆರು ಮಂದಿ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ದೇವಾಲಯದ ಆಡಳಿತ ಮಂಡಳಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸಮಿತಿ ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಸಮಿತಿಯನ್ನು ರಚನೆ ಮಾಡಿದ ಸಂದರ್ಭದಲ್ಲಿ ಅರ್ಜಿದಾರರು ಮೂರು ವರ್ಷಗಳ ಅವಧಿ ಪೂರೈಸಲು ಒಪ್ಪಿಕೊಂಡಿದ್ದಾರೆ. ಜತೆಗೆ, ಅಧಿಕಾರವನ್ನೂ ಅನುಭವಿಸಿದ್ದಾರೆ. ಆದರೆ ಅವಧಿ ಮುಗಿಯುವ ಸಂದರ್ಭದಲ್ಲಿ ಸಮಿತಿಯ ಕಾಲಾವಧಿ ವಿಸ್ತರಿಸುವಂತೆ ಕೋರಿ ಕೋರ್ಟ್‌ ಮೆಟ್ಟಿಲೇರಿರುವುದನ್ನು ಒಪ್ಪಲು ಸಾಧ್ಯವಿಲ್ಲ‘ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆಡಳಿತ ಮಂಡಳಿ ಸಮಿತಿಯನ್ನು 2020ರ ಅಕ್ಟೋಬರ್ 27ರಂದು ಷರತ್ತುಗಳೊಂದಿಗೆ ಮೂರು ವರ್ಷಗಳ ಅವಧಿಗೆ ರಚಿಸಲಾಗಿತ್ತು. ಇದರನ್ವಯ ಅರ್ಜಿದಾರರು ಅಧಿಕಾರವನ್ನು ಸ್ವೀಕರಿಸಿ ಮೂರು ವರ್ಷ ಪೂರ್ಣಗೊಳಿಸಿದ್ದರು.

ಏತನ್ಮಧ್ಯೆ, ‘ಸಮಿತಿ ನಡೆಸಿದ ಮೊದಲ ಸಭೆಯಿಂದ ಸಮಿತಿಯ ಆಡಳಿತ ಕಾಲಾವಧಿ ಪ್ರಾರಂಭವಾಗಲಿದೆ. ಆದ್ದರಿಂದ, ಸಮಿತಿ ಸಭೆ ನಡೆಸಿದ 2021ರ ಏಪ್ರಿಲ್ 26ರ ದಿನವನ್ನು ಪರಿಗಣಿಸಿ ಮೂರು ವರ್ಷಗಳ ಅವಧಿಗೆ ಅಂದರೆ, 2024ರ ಏಪ್ರಿಲ್ 26ರ ವರೆಗೂ ಕಾಲಾವಧಿ ಇರಲಿದೆ. ಹೀಗಾಗಿ, 2020ರ ಅಕ್ಟೋಬರ್ 27ರಂದು ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ರಚನೆ ಮಾಡಿ ಆದೇಶಿಸಿರುವ ಧಾರ್ಮಿಕ ದತ್ತಿ ಇಲಾಖೆ ಆದೇಶ ರದ್ದುಪಡಿಸಬೇಕು ಅಥವಾ ಮಾರ್ಪಾಡು ಮಾಡಬೇಕು‘ ಎಂದು ಕೋರಿ ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಅತುಲ್ ಕುಮಾರ್ ಶೆಟ್ಟಿ, ರತ್ನಾ, ಎಚ್.ಜಯನಂದ, ಕೆ.ರಾಮಚಂದ್ರ ಅಡಿಗ, ಗೋಪಾಲಕೃಷ್ಣ ಅರ್ಜಿ ಸಲ್ಲಿಸಿದ್ದರು.

ಈ ವಿಷಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಸಮಿತಿ ಸದಸ್ಯರಾದ ಸಂಧ್ಯಾ ರಮೇಶ್, ‘ಸಮಿತಿ ಅವಧಿ ಪೂರ್ಣಗೊಂಡಿರುವುದರಿಂದ ಮುಂದುವರೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ, ಅರ್ಜಿ ತಿರಸ್ಕರಿಸಬೇಕು‘ ಎಂದು ಕೋರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT