ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದ ಬಿಜೆಪಿ ವರಿಷ್ಠರ ಬಳಿ ಈಶ್ವರಪ್ಪ ‘ಹಿರಿತನ’ದ ಲಾಬಿ!

Published 10 ಜನವರಿ 2024, 20:11 IST
Last Updated 10 ಜನವರಿ 2024, 20:11 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಪಕ್ಷದ ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಬುಧವಾರ ಭೇಟಿ ಮಾಡಿ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಸಮಾಲೋಚಿಸಿದರು. 

ಪಕ್ಷದ ರಾಜ್ಯ ಘಟಕದಲ್ಲಿನ ಕೆಲವೊಂದು ಸಮಸ್ಯೆಗಳ ಕುರಿತು ವರಿಷ್ಠರ ಬಳಿ ಅವರು ಪ್ರಸ್ತಾಪಿಸಿದರು. ‘ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ಹಿರಿಯ ನಾಯಕರ ಶ್ರಮ ದೊಡ್ಡದು. ಆದರೆ, ಇತ್ತೀಚಿನ ಕೆಲವೊಂದು ಬೆಳವಣಿಗೆಗಳಿಂದ ನಾಲ್ಕೈದು ನಾಯಕರು ಅಸಮಾಧಾನಗೊಂಡಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ಒಡಕು ಧ್ವನಿಗೆ ಆಸ್ಪದ ನೀಡಬಾರದು. ಹಿರಿಯ ನಾಯಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಹಾಗೂ ಅವರಿಗೆ ಜವಾಬ್ದಾರಿಗಳನ್ನು ನೀಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ರಾಜ್ಯ ಘಟಕ ಮಾಡಬೇಕು’ ಎಂದು ಈಶ್ವರಪ್ಪ ಅವರು ವರಿಷ್ಠರ ಗಮನಕ್ಕೆ ತಂದರು ಎಂದು ಮೂಲಗಳು ಹೇಳಿವೆ.

‘ಕೆಲವು ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ನಾಯಕರ ಜತೆಗೆ ಚರ್ಚಿಸಿ ಅಸಮಾಧಾನ ಶಮನ ಮಾಡಲಾಗುವುದು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ನಾಯಕರು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟವು ಎಲ್ಲ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು’ ಎಂದು ಅಮಿತ್‌ ಶಾ ಸೂಚಿಸಿದರು ಎಂದು ಮೂಲಗಳು ಹೇಳಿವೆ.

‘ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪುತ್ರ ಕೆ.ಇ. ಕಾಂತೇಶ್‌ ಆಕಾಂಕ್ಷಿಯಾಗಿದ್ದಾನೆ. ಪುತ್ರನ ಸ್ಪರ್ಧೆಗೆ ಅನುವು ಮಾಡಿಕೊಡಬೇಕು’ ಎಂದು ಈಶ್ವರಪ್ಪ ಮನವಿ ಮಾಡಿದರು ಎಂದೂ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT