ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಲಿದೆ KSRTC ಪಾರ್ಸೆಲ್‌ ಟ್ರಕ್‌ಗಳು: ಆದಾಯ ವೃದ್ಧಿಸಿಕೊಳ್ಳಲು 20 ಟ್ರಕ್‌ ಖರೀದಿ

Published 15 ನವೆಂಬರ್ 2023, 9:03 IST
Last Updated 15 ನವೆಂಬರ್ 2023, 9:03 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಆದಾಯ ಹೆಚ್ಚಿಸಲು ಹೊಸ ಹೆಜ್ಜೆ ಇಟ್ಟಿದೆ. ಪಾರ್ಸೆಲ್‌ಗಳನ್ನು ಒಯ್ಯಲು 20 ಲಾರಿ ಟ್ರಕ್‌ಗಳನ್ನು ಖರೀದಿಸಿದ್ದು, ಡಿ.15ರ ಒಳಗೆ ಕಾರ್ಯಾರಂಭ ಮಾಡಲಿವೆ.

ಆಕರ್ಷಕ ವಿನ್ಯಾಸದ, ಉತ್ತಮ ಗುಣಮಟ್ಟದ ಟ್ರಕ್‌ಗಳನ್ನು ಆರಿಸಲಾಗಿದೆ. ಟಾಟಾ ಕಂಪನಿಯ ಪುಣೆ ಶಾಖೆಯಲ್ಲಿ ಟ್ರಕ್‌ಗಳು ತಯಾರಾಗುತ್ತಿವೆ. 20 ಟ್ರಕ್‌ಗಳು ಇನ್ನು ಒಂದು ತಿಂಗಳ ಒಳಗೆ ಕೆಎಸ್‌ಆರ್‌ಟಿಸಿಗೆ ಬರಲಿವೆ.

ಬಸ್‌ಗಳಲ್ಲಿ ಲಗೇಜ್‌ ಒಯ್ಯುವ ಮೂಲಕ ಆದಾಯ ಗಳಿಸಲು ದಶಕಗಳ ಹಿಂದೆ ಕೆಎಸ್‌ಆರ್‌ಟಿಸಿ ನಿರ್ಧರಿಸಿತ್ತು. ಬಸ್‌ ಡಿಕ್ಕಿಯಲ್ಲಿ ಸಣ್ಣ ಪ್ರಮಾಣದ ಪಾರ್ಸೆಲ್‌ಗಳನ್ನು ಕೊಂಡೊಯ್ಯುವ ಕಾರ್ಯವನ್ನು 109 ನಿಲ್ದಾಣಗಳಲ್ಲಿ ಆರಂಭಿಸಿತ್ತು. ಬಳಿಕ ಎಲ್ಲ ಬಸ್‌ನಿಲ್ದಾಣಗಳಿಗೆ ವಿಸ್ತರಿಸಿತ್ತು. ಇದರಿಂದ ವರ್ಷಕ್ಕೆ ₹ 4 ಕೋಟಿ ಆದಾಯ ಬರತೊಡಗಿತ್ತು.

ಕಾರ್ಗೊ ಸೇವೆ ವಿಸ್ತರಿಸಲು ನಿರ್ಧರಿಸಿ ಖಾಸಗಿ ಏಜೆನ್ಸಿಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡಿತು. ಬರುವ ಆದಾಯದಲ್ಲಿ ಕೆಎಸ್‌ಆರ್‌ಟಿಸಿಗೆ ಶೇ 80, ಖಾಸಗಿ ಏಜೆನ್ಸಿಗೆ ಶೇ 20 ಪಾಲುದಾರಿಕೆ ನಿಗದಿಯಾಯಿತು. ಇದರಿಂದ ಕೆಎಸ್‌ಆರ್‌ಟಿಸಿ ತಿಂಗಳಿಗೆ ₹ 1.10 ಕೋಟಿ (ವಾರ್ಷಿಕ ₹ 13.20 ಕೋಟಿ) ಆದಾಯ ಗಳಿಸುತ್ತಿದೆ.

ಬಸ್‌ಗಳಲ್ಲಿ ಸಾಗಿಸುವ ಪಾರ್ಸೆಲ್‌ಗಳನ್ನು ಬಸ್‌ ನಿಲ್ದಾಣಗಳಿಗೆ ಬಂದು ಸಂಬಂಧಪಟ್ಟವರು ಒಯ್ಯಬೇಕಿತ್ತು. ಟ್ರಕ್‌ ಆರಂಭಗೊಂಡರೆ ನಿಗದಿತ ಸ್ಥಳಕ್ಕೇ ಪಾರ್ಸೆಲ್‌ ತಲುಪಲಿದೆ. ವ್ಯವಸ್ಥಿತ ಮತ್ತು ಸಮರ್ಪಕವಾದ ಪಾರ್ಸೆಲ್‌ ಸೇವೆ ಆರಂಭಿಸುವ ಮೂಲಕ ಈಗಿರುವ ಆದಾಯವನ್ನು ಹತ್ತು ಪಟ್ಟು ಹೆಚ್ಚಿಸಿಕೊಳ್ಳುವ ಗುರಿ ಹೊಂದಲಾಗಿದೆ.

ಬಸ್‌ಗಳಲ್ಲಿಯೂ ಹೆಚ್ಚಿಸುವ ಗುರಿ: ಸದ್ಯ 800 ಬಸ್‌ಗಳಲ್ಲಿ ಪಾರ್ಸೆಲ್‌ ಸಾಗಾಟ ಮಾಡಲಾಗುತ್ತಿದೆ. ಮುಂದೆ ಖರೀದಿಸಲಾಗುವ ಎಲ್ಲ ಬಸ್‌ಗಳಲ್ಲಿ ಪಾರ್ಸೆಲ್‌ ಕೊಂಡೊಯ್ಯುವ ವ್ಯವಸ್ಥೆ ಇರಲಿದೆ. ಇನ್ನು ನಾಲ್ಕು ವರ್ಷಗಳಲ್ಲಿ 4,000 ಬಸ್‌ಗಳಲ್ಲಿ ಈ ಸೇವೆ ವಿಸ್ತರಿಸುವ ಗುರಿಯನ್ನು ಕೆಎಸ್‌ಆರ್‌ಟಿಸಿ ಹೊಂದಿದೆ.

ವಿಮಾನ ನಿಲ್ದಾಣ ಬಂದರು ಸೇರಿದಂತೆ ಗ್ರಾಹಕರು ತಿಳಿಸಿದ ಸ್ಥಳದಿಂದ ತಲುಪಿಸಬೇಕಾದ ಸ್ಥಳಕ್ಕೆ ನಮ್ಮ ಟ್ರಕ್‌ಗಳು ಪಾರ್ಸೆಲ್‌ ಒಯ್ಯಲಿವೆ
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ಮೊದಲ ಪ್ರಯೋಗ: ಎಂ.ಡಿ

‘ಇದೇ ಮೊದಲ ಬಾರಿಗೆ ಟ್ರಕ್‌ಗಳನ್ನು ಖರೀದಿಸಿ ಪಾರ್ಸೆಲ್‌ ಸಾಗಾಟ ಆರಂಭಿಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಈಗಾಗಲೇ ಜನರ ವಿಶ್ವಾಸ ಮತ್ತು ನಂಬಿಕೆಗೆ ಪಾತ್ರವಾಗಿದೆ. ಹಾಗಾಗಿ ಪಾರ್ಸೆಲ್‌ ಸಾಗಾಟಕ್ಕೂ ಜನರು ಉತ್ತಮ ಸ್ಪಂದನೆ ನೀಡಲಿದ್ದಾರೆ ಎಂಬ ನಂಬಿಕೆ ನಮಗಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

‘ಕೃಷಿ ಟೆಕ್ಸ್‌ಟೈಲ್ಸ್‌ ಆಟೊಮೊಬೈಲ್ ಮುಂತಾದ ಕ್ಷೇತ್ರಗಳಿಂದ ಬೇಡಿಕೆ ಇದೆ. ಅವರಿಗೆ 15–20 ಟನ್‌ ಒಯ್ಯುವ ಭಾರಿ ವಾಹನಗಳು ಬೇಕಾಗಿಲ್ಲ. 5–6 ಟನ್‌ ಅಷ್ಟೇ ಸಾಗಾಟ ಇರುತ್ತದೆ. ಅವರ ಬೇಡಿಕೆಗೆ ಸೂಕ್ತವಾದ ಟ್ರಕ್‌ ಖರೀದಿ ಮಾಡುತ್ತಿದ್ದೇವೆ. ರಾಜ್ಯದ ಎಲ್ಲೆಡೆ ನಮ್ಮ ಡಿಪೊ ನಿಲ್ದಾಣಗಳು ಇವೆ. ಯಾವ ಮಾರ್ಗದಲ್ಲಿ ಹೆಚ್ಚು ಪಾರ್ಸೆಲ್‌ಗಳು ಬರುತ್ತವೆ ಎಂಬುದನ್ನು ನೋಡಿಕೊಂಡು ಟ್ರಕ್‌ ಬಳಕೆ ಮಾಡಲಾಗುವುದು. ಸ್ಪಂದನೆ ಹೆಚ್ಚಾದರೆ ಮುಂದೆ ಟ್ರಕ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು’ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT