ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಸ್‌ಆರ್‌ಟಿಸಿ–ಜಯದೇವ ಆಸ್ಪತ್ರೆ ಒಡಂಬಡಿಕೆ

ಐದು ವರ್ಷಗಳ ಕಾಲ ಹತ್ತು ಮಾದರಿಯ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆಗೆ ಒಪ್ಪಂದ
Published : 2 ನವೆಂಬರ್ 2023, 16:10 IST
Last Updated : 2 ನವೆಂಬರ್ 2023, 16:10 IST
ಫಾಲೋ ಮಾಡಿ
Comments

ಬೆಂಗಳೂರು: ಕೆಎಸ್‌ಆರ್‌ಟಿಸಿ ತನ್ನ ಸಿಬ್ಬಂದಿಗೆ ಹತ್ತು ಮಾದರಿಯ ಹೃದಯ ಸಂಬಂಧಿತ ಕಾಯಿಲೆಗಳ ತಪಾಸಣೆಗಾಗಿ ಐದು ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಗುರುವಾರ ಒಡಂಬಡಿಕೆ ಮಾಡಿಕೊಂಡಿದೆ.

ನಿಗಮದಲ್ಲಿ ಒಟ್ಟು 34,000 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಆ ಪೈಕಿ 24,686 ಚಾಲಕ ಮತ್ತು ನಿರ್ವಾಹಕರಾಗಿದ್ದಾರೆ. ಕಾರ್ಯಸ್ವರೂಪ, ಜೀವನಶೈಲಿ ಮತ್ತು ಇತರೆ ಕಾರಣಗಳಿಂದಾಗಿ ನೌಕರರಲ್ಲಿ ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳವರೆಗೆ ನಿಯಮಿತವಾಗಿ ಹೃದಯ ತಪಾಸಣೆ ನಡೆಸಲು ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ‘ಬಿಎಂಟಿಸಿಯಲ್ಲಿಯೂ ಈ ಯೋಜನೆಯಿದ್ದು, ಅಲ್ಲಿ 45 ವರ್ಷ ದಾಟಿದವರು ಈ ಯೋಜನೆಗೆ ಒಳಪಡುತ್ತಾರೆ. ಕೆ‌ಎಸ್‌ಆರ್‌ಟಿಸಿಯೊಂದಿಗಿನ ಒಪ್ಪಂದದ ಪ್ರಕಾರ 40 ವರ್ಷ ದಾಟಿದ ಎಲ್ಲ ಸಿಬ್ಬಂದಿಯೂ ತಪಾಸಣೆ ಮಾಡಿಸಿಕೊಳ್ಳಬಹುದು. ಜಯದೇವ ಆಸ್ಪತ್ರೆಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಪ್ರತ್ಯೇಕವಾಗಿ ತಪಾಸಣೆಗೆ ವ್ಯವಸ್ಥೆ ಮಾಡಲಾಗುವುದು. ಮೈಸೂರಿನಲ್ಲಿರುವ ನಮ್ಮ ಕೇಂದ್ರದಲ್ಲಿಯೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮಾತನಾಡಿ, ‘ಕಾಮಿಕ ಕಲ್ಯಾಣ ಕಾರ್ಯಕ್ರಮಗಳ ಮುಂದುವರಿದ ಭಾಗವಾಗಿ ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ತಪಾಸಣೆಗೆ ಒಳಗಾಗುವ ಪ್ರತಿ ನೌಕರರ ಪರವಾಗಿ ನಿಗಮವು ₹ 1200ಗಳನ್ನು ಜಯದೇವ ಆಸ್ಪತ್ರೆಗೆ ಪಾವತಿಸಲಾಗುತ್ತದೆ. ಅಂದರೆ ವರ್ಷಕ್ಕೆ ₹ 2.55 ಕೋಟಿ ಪಾವತಿ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಅಪಘಾತದಲ್ಲಿ ಮೃತಪಟ್ಟಿರುವ ಇಬ್ಬರು ಸಿಬ್ಬಂದಿಯ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆ ಅಡಿಯಲ್ಲಿ ತಲಾ ₹ 1 ಕೋಟಿ ಪರಿಹಾರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT