ಬೆಂಗಳೂರು: ಮುಂಬೈನಲ್ಲಿ ರಾಜ್ಯದ ಸಚಿವರು, ಶಾಸಕರ ಜತೆಗೆ ಅಲ್ಲಿನ ಸರ್ಕಾರ ವರ್ತಿಸಿರುವುದು ಹಾಗೂ ವಿಧಾನಸೌಧದಲ್ಲಿ ನಡೆದ ಘಟನೆಗಳನ್ನು ಗಮನಿಸಿದರೆ ಬಿಜೆಪಿ ಪ್ರಜಾಪ್ರಭುತ್ವದ ಎಲ್ಲೆಗಳನ್ನು ಮೀರಿ ವರ್ತಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮುಂಬೈನಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಭೇಟಿಮಾಡಲು ತೆರಳಿದ್ದ ಸಚಿವರಾದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ ಅವರನ್ನು ಮಹಾರಾಷ್ಟ್ರ ಸರ್ಕಾರ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದನ್ನು ಖಂಡಿಸಿದ್ದಾರೆ.
ಸಚಿವರು, ಶಾಸಕರನ್ನು ಬೀದಿಯಲ್ಲಿ ನಿಲ್ಲಿಸಿ ಕಸ್ಟಡಿಗೆ ತೆಗೆದುಕೊಂಡು ಅಪರಾಧಿಗಳಂತೆ ನಡೆಸಿಕೊಂಡಿರುವುದು ಶಿಷ್ಟಾಚಾರದ ಉಲ್ಲಂಘನೆ. ಇದು ಪಾಳೆಗಾರಿಕೆಯಮನೋಭಾವ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಬಿಜೆಪಿ ಶಾಸಕರ ದುಂಡಾವರ್ತನೆಯ ನಡವಳಿಕೆಯು ಜಿಗುಪ್ಸೆ ಹುಟ್ಟಿಸುತ್ತದೆ. ಶಾಸಕರ ಜತೆ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರು ವರ್ತಿಸಿದ ರೀತಿ ವಿಧಾನಸೌಧಕ್ಕಷ್ಟೇ ಅಲ್ಲ, ರಾಜ್ಯ ರಾಜಕಾರಣದ ಶ್ರೇಷ್ಠ ಪರಂಪರೆಗೂ ಮಸಿ ಬಳಿದಿದೆ ಎಂದು ಅವರು ಆರೋಪಿಸಿದ್ದಾರೆ.