ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ ಮೊದಲ ವಾರದಲ್ಲೇ ಬರ ಘೋಷಣೆ: ಕೃಷಿ ಸಚಿವ ಚಲುವರಾಯಸ್ವಾಮಿ

Published 25 ಆಗಸ್ಟ್ 2023, 15:25 IST
Last Updated 25 ಆಗಸ್ಟ್ 2023, 15:25 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ಕೊರತೆಯಿಂದ ಆಗಿರುವ ಹಾನಿಯ ಕುರಿತು ಕ್ಷೇತ್ರ ಪರಿಶೀಲಿಸಿ ದೃಢೀಕರಣ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕನಿಷ್ಠ 100 ತಾಲ್ಲೂಕುಗಳು ಬರ ಪೀಡಿತ ಎಂಬುದಾಗಿ ಸೆಪ್ಟೆಂಬರ್‌ ಮೊದಲ ವಾರದಲ್ಲೇ ಘೋಷಿಸಲಾಗುವುದು ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ, ವರದಿ ಸಿದ್ಧಪಡಿಸುತ್ತಿದ್ದಾರೆ. ರಾಜ್ಯದ ಹೆಚ್ಚಿನ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇರುವುದು ಸರ್ಕಾರಕ್ಕೆ ಮನವರಿಕೆಯಾಗಿದೆ. ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಬರಪೀಡಿತ ತಾಲ್ಲೂಕುಗಳ ಘೋಷಣೆಗೆ ನಿರ್ಧರಿಸಲಾಗಿದೆ’ ಎಂದರು.

ಬಾಗಲಕೋಟೆ, ಗದಗ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳ 194 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ನಾಶವಾಗಿವೆ. ಈ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ವಿಮೆ ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. 35,284 ರೈತರಿಗೆ ₹35.90 ಕೋಟಿ ಪರಿಹಾರ ವಿತರಿಸಲು ಸಿದ್ಧತೆ ನಡೆದಿದೆ ಎಂದು ವಿವರಿಸಿದರು.

ಆಗಸ್ಟ್‌ ತಿಂಗಳಿನಲ್ಲಿ ವಾಡಿಕೆಗೆ ಹೋಲಿಸಿದರೆ ಶೇಕಡ 25ರಷ್ಟು ಮಳೆ ಕೊರತೆಯಾಗಿದೆ. ಶೇ 79ರಷ್ಟು ಬಿತ್ತನೆ ಮಾತ್ರ ಆಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಬಿತ್ತನೆಯಾದ ಬೆಳೆಗಳನ್ನೂ ಉಳಿಸಿಕೊಳ್ಳುವುದು ಕಷ್ಟ ಎಂದರು.

ತಿಂಗಳಿಗೊಂದು ಜಿಲ್ಲೆಗೆ: ‘ರೈತರ ಸಮಸ್ಯೆ ಮತ್ತು ಸವಾಲುಗಳನ್ನು ಅರಿತು, ಪರಿಹಾರ ಒದಗಿಸುವುದಕ್ಕಾಗಿ ಪ್ರತಿ ತಿಂಗಳು ಒಂದು ಜಿಲ್ಲೆಗೆ ಭೇಟಿನೀಡಲು ನಿರ್ಧರಿಸಿದ್ದೇನೆ. ಅಲ್ಲಿ ರೈತರು, ರೈತ ಉತ್ಪಾದಕ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳ ಜತೆ ಸಂವಾದ ನಡೆಸುತ್ತೇನೆ. ಇದೇ 29ರಂದು ಚಿತ್ರದುರ್ಗ ಜಿಲ್ಲೆಯಿಂದ ರೈತರ ಜತೆಗಿನ ಸಂವಾದ ಆರಂಭಿಸುತ್ತೇನೆ’ ಎಂದು ಚಲುವರಾಯಸ್ವಾಮಿ ತಿಳಿಸಿದರು.

ರೈತರ ಕೃಷಿ ಸಾಲ ಮನ್ನಾ ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗ ಶೂನ್ಯ ಬಡ್ಡಿದರ ಹಾಗೂ ರಿಯಾಯ್ತಿ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಸಾಲ ಒದಗಿಸಲಾಗುತ್ತಿದೆ. ಸಾಲ ಮನ್ನಾ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಬೇಕಾಗುತ್ತದೆ’  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT