ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀರೂರು ಮಠದ ಲಕ್ಷ್ಮೀವರ ತೀರ್ಥರ ಬದುಕಿನ ಹಾದಿ...

Last Updated 19 ಜುಲೈ 2018, 12:32 IST
ಅಕ್ಷರ ಗಾತ್ರ

ಉಡುಪಿ:ಅನಾರೋಗ್ಯದ ನಿಮಿತ್ತ ವಿಧಿವಶರಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಅವರ ನಿಧನದ ಬಗ್ಗೆ ಹಲವರು ಅನುಮಾನವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಅವರ ದೇಹದಲ್ಲಿ ವಿಷದ ಅಂಶ ಹೇಗೆ ಬಂತು? ಎಂಬ ಪ್ರಶ್ನೆಯನ್ನಿಟ್ಟಿದ್ದಾರೆ.

ಇನ್ನು, ಸ್ವಾಮೀಜಿ ಅವರ ಆರೋಗ್ಯ ಗಟ್ಟಿಮುಟ್ಟಾಗಿತ್ತು ಎಂದು ಹಲವು ಭಕ್ತರು ಹೇಳಿದ್ದಾರೆ. ಶ್ರೀಗಳು ಸಂಗೀತ, ಕ್ರೀಡೆ ಮುಂತಾದ ವಿಷಯಗಳ ಬಗ್ಗೆ ಅಪಾರ ಆಸಕ್ತಿಯನ್ನೂ ಹೊಂದಿದ್ದರು. ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಈಚೆಗೆ ಪಟ್ಟದ ದೇವರ ವಿಷಯವಾಗಿ ಸುದ್ದಿಯಲ್ಲಿದ್ದ ಶ್ರೀಗಳು ಇಂದು ಇಲ್ಲವಾಗಿದ್ದಾರೆ.

ಶ್ರೀಗಳು ನಡೆದುಬಂದ ದಾರಿಯ ಒಂದು ನೋಟ...

* ಶೀರೂರು ಮಠದ ಲಕ್ಷೀವರ ತೀರ್ಥ ಸ್ವಾಮೀಜಿಗೆ 55 ವರ್ಷ ವಯಸ್ಸಾಗಿತ್ತು.

* ಜನನ 1964. ವಿಠಲ ಆಚಾರ್ಯ ಪೂರ್ವಾಶ್ರಮದ ತಂದೆ, ಕುಸುಮ ಆಚಾರ್ಯ ತಾಯಿ.

* ಹರೀಶ್ ಆಚಾರ್ಯ ಮೂಲ ನಾಮ.

* ಹೆಬ್ರಿಯ ಮಡಮಕ್ಕಿ ಸ್ವಾಮೀಜಿಯ ಮೂಲಮನೆ.

* 1971 ರಲ್ಲಿ 8ನೇ ವಯಸ್ಸಿಗೆ ಸನ್ಯಾಸ ಸ್ವೀಕರಿಸಿದ್ದ ಶೀರೂರು ಲಕ್ಷ್ಮಿ ತೀರ್ಥರು.

* ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠಕ್ಕೆ ಸ್ವಾಮೀಜಿ.

* ಮಠದ 30ನೇ ಯತಿಯಾಗಿ ಶೀರೂರು ಮಠಾಧೀಶರಾಗಿ ನೇಮಕ.

* ಮೂರು ಪರ್ಯಾಯ ಪೂರೈಸಿರುವ ಶ್ರೀಗಳು.

* ಸಂಗೀತ ಪ್ರೇಮಿ, ಡ್ರಮ್ಸ್ ವಾದನ ಹವ್ಯಾಸ.

* ಈಜುಪಟು ಕರಾಟೆ ಪಟು ಆಗಿದ್ದರು.

* ಖ್ಯಾತ ಡ್ರಮ್ಸ್ ವಾದಕ ಶಿವಮಣಿಯೊಂದಿಗೆ ಡ್ರಮ್ಸ್ ಜುಗಲ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

* ಶ್ರೀಗಳು 1979ರಿಂದ 80 ಹಾಗೂ 1994-95 ಹಾಗೂ 2010–2011 ಈ ವರ್ಷಗಳಲ್ಲಿ ಪರ್ಯಾಯ ಪಟ್ಟ ಸ್ವೀಕರಿಸಿದ್ದರು.

2017ರ ಸೆಪ್ಟೆಂಬರ್‌ 30 :
* ಹುಲಿವೇಷ ಕುಣಿತದ ಸ್ಪರ್ಧೆ ‘ಪಿಲಿನಲಿಕೆ–2017’ರಲ್ಲಿ ವಿಜೇತರಿಗೆ ಶ್ರೀಗಳಿಂದ ಬಹುಮಾನ ಚಿನ್ನದ ಪದಕ ವಿತರಣೆ.

2018 ರ ಫೆಬ್ರುವರಿ 7 :
* ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ರಾತ್ರಿ ಶಿರೂರಿನಿಂದ ಹಿರಿಯಡಕದತ್ತ ತೆರಳುತ್ತಿದ್ದಾಗ ಇನ್ನೊಂದು ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ವಾಮೀಜಿ ಪಾರಾಗಿದ್ದರು.

* ಅಪಘಾತ ಮಾಡಿದವರು ಸಹ ದನ ಕಳ್ಳರು ಇರಬಹುದು ಎಂದು ಸ್ವಾಮೀಜಿ ಅನುಮಾನ ವ್ಯಕ್ತಪಡಿಸಿದ್ದರು.

ಮಾರ್ಚ್‌ 10 :
* ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಕ್ಷೇತ್ರದಿಂದ ಸ್ಪರ್ಧೆ–ಸ್ಥಳೀಯ ಬಿಜೆಪಿ ವಿರುದ್ಧ ಹೋರಾಟ ಎಂದು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿಕೆ.

ಮಾರ್ಚ್‌ 13 :
* ’ನನಗೂ ಮಕ್ಕಳಿದ್ದಾರೆ, ಅಷ್ಟ ಮಠದ ಎಲ್ಲ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ’ ಎಂದು ಸ್ವಾಮೀಜಿ ಹೇಳಿರುವ ದೃಶ್ಯಗಳನ್ನು ‘ಬಿ ಟಿವಿ‘ ವಾಹಿನಿ ಪ್ರಸಾರ ಮಾಡಿತ್ತು.

* ಪ್ರಸಾರವಾಗಿರುವ ವಿಡಿಯೊ ನಕಲಿ, ಇದರಲ್ಲಿ ಸತ್ಯಾಂಶವಿಲ್ಲ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದ ಸ್ವಾಮೀಜಿ, ಈಗ ಹೆಚ್ಚೇನೂ ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದರು.

* ‘ವಿಡಿಯೊ ನೂರಕ್ಕೆ ನೂರು ನಕಲಿ, ನನ್ನ ಧ್ವನಿಯಲ್ಲಿ ಬೇರೆಯವರು ಮಾತನಾಡಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ ಮೇಲೆ ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.’ ಎಂದು ಶ್ರೀಗಳಿಂದ ರಾತ್ರಿ ಮಾಧ್ಯಮದವರಿಗೆ ಹೇಳಿಕೆ.

ಮಾರ್ಚ್‌ 13 :
* ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ.

ಮಾರ್ಚ್‌ 14 :
ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದಕ್ಕೆ ಮಾಧ್ವ ಬ್ರಾಹ್ಮಣ ಸಮುದಾಯದಿಂದ ಆಕ್ಷೇಪ.

ಮಾರ್ಚ್‌ 17 :
* ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ನಡೆಯ ವಿರುದ್ಧ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಠಾಧೀಶರು ಸಭೆ. ಶ್ರೀಗಳ ವಿರುದ್ಧ ಕ್ರಮಕ್ಕೆ ಒತ್ತಾಯ.

* ಕೃಷ್ಣಾಪುರ ಮಠದ ವಿದ್ಯಾಸಾಗರ, ಅದಮಾರು ಮಠದ ವಿಶ್ವಪ್ರಿಯ, ಕಿರಿಯ ಈಶಪ್ರಿಯ, ಕಾಣಿಯೂರು ಮಠದ ವಿದ್ಯಾವಲ್ಲಭ, ಸೋದೆ ಮಠದ ವಿಶ್ವವಲ್ಲಭ ಹಾಗೂ ಪೇಜಾವರ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಸಭೆಯಲ್ಲಿ ಭಾಗವಹಿಸಿದ್ದರು. ಅಷ್ಟ ಮಠಗಳ ಘನತೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುತ್ತಿರುವ ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಎಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದ್ದರು ಎಂದು ತಿಳಿದು ಬಂದಿತ್ತು.

* ಶೀರೂರು ಶ್ರೀಗಳು ಪೀಠ ತ್ಯಾಗಮಾಡಬೇಕು, ತಕ್ಷಣ ಉತ್ತರಾಧಿಕಾರಿಯನ್ನು ನೇಮಿಸಬೇಕು ಎಂಬ ವಿಚಾರದಲ್ಲಿ ಒತ್ತಡ ತಂತ್ರ ಹೇರುವುದರ ಜತೆಗೆ, ಮಠಕ್ಕೆ ಸಂಬಂಧಪಟ್ಟ ಹಲವಾರು ಪೂಜಾ ಕ್ರಮಗಳು, ವಿಧಿ ವಿಧಾನಗಳಿಂದ ಶ್ರೀಗಳನ್ನು ದೂರ ಇಡುವ ಪ್ರಯತ್ನ ನಡೆಸಬಹುದು ಎಂದು ಚರ್ಚಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿದ್ದವು.

ಮಾರ್ಚ್‌ 27 :
* ಹಿರಿಯಡಕ ಸಮೀಪದ ಶಿರೂರಿನಲ್ಲಿರುವ ಶ್ರೀ ರಾಮ ದೇವರು ಹಾಗೂ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆದ ರಥೋತ್ಸವ ಸಂಪನ್ನ ಕಾರ್ಯಕ್ರಮದಲ್ಲಿ ಸ್ವಾಮೀಜಿ ಉಪಸ್ಥಿತಿಯಲ್ಲಿ ದೇವರಿಗೆ ವಿಶೇಷ ಪೂಜೆ ವಿವಿಧ ಧಾರ್ಮಿಕ ವಿಧಾನ.

ಏಪ್ರಿಲ್‌ 8 :
* ಬಿಜೆಪಿ ಟಿಕೆಟ್ ನೀಡದೆ ಇದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಶ್ರೀಗಳಿಂದ ಹೇಳಿಕೆ.

* ‘ಬಿಜೆಪಿ ಯಾವುದೇ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಹಾಗಾಗಿ ನಾನು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಬಿಜೆಪಿಯಿಂದ ಟಿಕೆಟ್ ಸಿಗದೆ ಇದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ. ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ’ ಎಂದಿದ್ದರು.

* ಶ್ರೀಗಳು ಪಕ್ಷೇತರರಾಗಿ ನಿಂತರೆ ಅವರಿಗೆ ಬೆಂಬಲ ಸೂಚಿಸಿ ಜೆಡಿಯು ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷ ರಾಜೀವ್ ಕೋಟ್ಯಾನ್ ಹೇಳಿಕೆ.

* ಉಡುಪಿ ಅಷ್ಟಮಠಾಧೀಶರು ಬೆಂಬಲ ಕೊಡುವ ವಿಚಾರದ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಬೆಂಬಲ ಕೊಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ– ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿಕೆ

ಏಪ್ರಿಲ್‌ 21 :
* ಶ್ರೀಗಳಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ

ಏಪ್ರಿಲ್‌ 27 :
* ಸ್ವಾಮೀಜಿ ಅವರು ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದರು.

* ‘ಬಿಜೆಪಿಯ ವರಿಷ್ಠರು ನಾಮ ಪತ್ರ ಹಿಂದಕ್ಕೆ ಪಡೆಯುವಂತೆ ಮನವೊಲಿಸಿದರು. ಅಲ್ಲದೆ ನನ್ನ ಆಶಯದಂತೆ ಜಿಲ್ಲಾ ಬಿಜೆಪಿಯನ್ನು ಬಲಗೊಳಿಸುವ ಭರವಸೆಯನ್ನು ಸಹ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಬೆಂಬಲಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ಉಡುಪಿಗೆ ಮೋದಿ ಅವರೇ ಬರುವಾಗ ಅವರ ಧ್ಯೇಯಕ್ಕೆ ನಮ್ಮಿಂದ ತೊಡಕಾಗಬಾರದು’ ಎಂದು ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದರು.

ಜೂನ್‌ 8 :
* ಶ್ರೀಗಳ ಜನ್ಮ ನಕ್ಷತ್ರ ಪ್ರಯುಕ್ತ ಶೀರೂರು ಮೂಲಮಠದಲ್ಲಿ ಸಂಗೀತ ತರಬೇತಿ ಅಕಾಡೆಮಿ ಸೇರಿದಂತೆ ವಿವಿಧ ಕಟ್ಟಡ ಕಾಮಗಾರಿಗಳಿಗೆ ಶ್ರೀಗಳಿಂದ ಚಾಲನೆ.

* ಶೀಘ್ರದಲ್ಲಿ ಶೀರೂರು ಪರಿಸರದಲ್ಲಿ ಉತ್ತಮವಾದ ಶಿಕ್ಷಣ ಸಂಸ್ಥೆ ತಲೆ ಎತ್ತಲಿದೆ ಎಂದು ಸ್ವಾಮೀಜಿ ಹೇಳಿದ್ದರು.

* ಶಿವಮಣಿ ಅವರ ಸಂಗೀತ ತರಬೇತಿ ಅಕಾಡೆಮಿ ಹಾಗೂ ಗೋ ಶಾಲೆ ನಿರ್ಮಾಣವಾಗಲಿದೆ ಎಂದು ಶ್ರೀಗಳು ಹೇಳಿದ್ದರು.

ಜುಲೈ 3 :
* ಪಟ್ಟದ ದೇವರಿಗೆ ಪಟ್ಟುಹಿಡಿದ ಶೀರೂರು ಶ್ರೀಗಳು.

* ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳಿಗೆ ಪಟ್ಟದ ದೇವರನ್ನು ಹಸ್ತಾಂತರಿಸುವ ಸಂಬಂಧ ಮೂರ್ನಾಲ್ಕು ದಿನಗಳಲ್ಲಿ ಅಷ್ಟಮಠದ ಸ್ವಾಮೀಜಿಗಳು ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿಯಿಂದ ಹೇಳಿಕೆ.

ಏನಿದು ವಿವಾದ?
ಅಷ್ಟಮಠಗಳ ಯತಿಗಳು ಪ್ರತ್ಯೇಕವಾಗಿ ಪಟ್ಟದ ದೇವರನ್ನು ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದರಂತೆ, ಶೀರೂರು ಮಠಕ್ಕೆ ‘ಶ್ರೀಅನ್ನವಿಠ್ಠಲ’ ಪಟ್ಟದ ದೇವರು. ಲಕ್ಷ್ಮೀವರ ತೀರ್ಥರಿಗೆ ಈಚೆಗೆ ಅನಾರೋಗ್ಯ ಕಾಡಿದ್ದರಿಂದ ಪಟ್ಟದ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗದ ಕಾರಣ ಕೃಷ್ಣಮಠಕ್ಕೆ ಒಪ್ಪಿಸಿದ್ದರು. ಚೇತರಿಸಿಕೊಂಡ ಬಳಿಕ ಮರಳಿ ಪಟ್ಟದ ದೇವರನ್ನು ಪಡೆಯಲು ಹೋದಾಗ, ಮಠದ ಸಂಪ್ರದಾಯಗಳಿಗೆ ಬದ್ಧವಾಗಿ ಶಿಷ್ಯಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಹಿಂದಿರುಸಲು ಸಾಧ್ಯವಿಲ್ಲ ಎಂದು ಕೆಲವು ಮಠಾಧೀಶರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.

ಜುಲೈ 15 :
* ಕೃಷ್ಣಮಠದಲ್ಲಿ ಪೂಜೆಗೆ ಇಟ್ಟಿರುವ ಪಟ್ಟದ ದೇವರನ್ನು ಕೊಡಲು ನಿರಾಕರಿಸುತ್ತಿರುವ ಮಠಾಧೀಶರ ವಿರುದ್ಧ ಶೀರೂರು ಶ್ರೀಗಳು ಉಡುಪಿ ನ್ಯಾಯಾಲಯಕ್ಕೆ ಕೆವಿಯಟ್‌ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.

* ಅಷ್ಟಮಠದ ಯತಿಗಳು ಪಟ್ಟದ ದೇವರನ್ನು ಹಸ್ತಾಂತರಿಸುವ ವಿಷಯದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದಲ್ಲಿ ಏಕಪಕ್ಷೀಯ ಆದೇಶ ನೀಡಬಾರದು ಎಂಬ ಮುಂಜಾಗ್ರತೆಯಿಂದಾಗಿ ಶೀರೂರು ಶ್ರೀಗಳು ಕೆವಿಯಟ್‌ ಸಲ್ಲಿಸಿದ್ದರು.

* ಶೀರೂರು ಮಠದ ಲಕ್ಷ್ಮೀವರ ಸ್ವಾಮೀಜಿ ವಿಚಾರ ಹಾಗೂ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳ ವಿಚಾರ ಭಿನ್ನ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದರು.

ಜುಲೈ 16 :
* ‘ಶ್ರೀಕೃಷ್ಣ ನನ್ನ ಸ್ವತ್ತಲ್ಲ, ರಾಮ ದೇವರೂ ಸಹ ನನ್ನ ಸ್ವತ್ತಲ್ಲ. ಆದರೆ, ವಿಠಲ ದೇವರು ಮಾತ್ರ ನನ್ನ ಸ್ವತ್ತು. ಪಟ್ಟದ ದೇವರನ್ನು ಪಡೆಯಲು ಅವಶ್ಯಕತೆ ಬಿದ್ದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲೂ ಸಿದ್ಧ’ ಎಂದು ಸ್ವಾಮೀಜಿ ತಿಳಿಸಿದ್ದರು.

* ಅಷ್ಟ ಮಠದಲ್ಲಿ ಏಳು ಸ್ವಾಮೀಜಿಗಳು ಒಂದಾಗಿ ಸಭೆ ನಡೆಸಿದ್ದಾರೆ. ಅವರಲ್ಲಿ ಒಬ್ಬರನ್ನು ನಾಯಕರನ್ನಾಗಿ ಮಾಡಿಕೊಂಡಿದ್ದಾರೆ. ಅವರು ಯಾರೆಂಬುವುದು ಎಲ್ಲರಿಗೂ ಗೊತ್ತಿದೆ ಎಂದು ಪೇಜಾವರ ಶ್ರೀಗಳ ವಿರುದ್ಧ ಸ್ವಾಮೀಜಿ ಪರೋಕ್ಷ ವಾಗ್ದಾಳಿ ನಡೆಸಿದ್ದರು.

* ‘ಶ್ರೀಕೃಷ್ಣ ಮಠದ ಒಳಗೆ ಪರ್ಯಾಯ ಮಠದ ವಿದ್ಯಾಧೀಶ ಸ್ವಾಮೀಜಿ ಅವರು ಗನ್‌ಮ್ಯಾನ್‌ ನೇಮಕ ಮಾಡಿಕೊಂಡಿದ್ದಾರೆ. ಆದರೆ, ನಿಜವಾಗಿ ಗನ್‌ಮ್ಯಾನ್‌ ಅಗತ್ಯವಿರುವುದು ನನಗೆ’ ಎಂದು ಸ್ವಾಮೀಜಿ ಹೇಳಿದ್ದರು.

ಜುಲೈ 16 :

* ಮಠದಲ್ಲಿ ಆಯೋಜಿಸಿದ್ದ ವನಮಹೋತ್ಸವದಲ್ಲಿ ಶ್ರೀಗಳು ಭಾಗವಹಿಸಿದ್ದರು.

* ಬಳಿಕ, ಶ್ರೀಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಮಠದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.

ಜುಲೈ 18 :
* ಸ್ವಾಮೀಜಿ ಅವರಿಗೆ ಹೊಟ್ಟೆ ನೋವು ಹೆಚ್ಚಾಗಿ, ಆರೋಗ್ಯದಲ್ಲಿ ಏರುಪೇರಾಗಿ, ಅವರನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

* ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಣಿಪಾಲದ ವೈದ್ಯರುಹೇಳಿಕೆ ನೀಡಿದ್ದರು.

* ಸದ್ಯ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದವು.

ಗುರುವಾರ ಜುಲೈ 19 :

* ಬೆಳಿಗ್ಗೆ 8.30ಕ್ಕೆ ಶ್ರೀಗಳ ನಿಧನ.ಸ್ವಾಮೀಜಿಗೆ 55 ವರ್ಷ ವಯಸ್ಸಾಗಿತ್ತು.

* 'ಶೀರೂರು ಮಠದ ಲಕ್ಷ್ಮೀವರ ತೀರ್ಥರ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ' ಎಂದು ಶ್ರೀಗಳಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಅವಿನಾಶ್‌ ಶೆಟ್ಟಿ ಅವರಿಂದ ಮಾಧ್ಯಮಗಳಿಗೆ ಹೇಳಿಕೆ.

* ‘ಶ್ರೀಗಳನ್ನು ಉಳಿಸಿಕೊಳ್ಳಲು ನಾವುಸತತ ಪ್ರಯತ್ನ ಪಟ್ಟೆವು. ಆದರೆ ಪ್ರಯೋಜನವಾಗಲಿಲ್ಲ. ಬೆಳಿಗ್ಗೆ 8.30ಕ್ಕೆ ಅವರು ನಿಧನರಾದರು’ –ವೈದ್ಯರ ಹೇಳಿಕೆ.

* ‘ಶ್ರೀಗಳಿಗೆ ವಿಷಪ್ರಾಶನವಾಗಿರುವ ಶಂಕೆ ಇದೆ. ಈ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟಿದ್ದೇವೆ' – ವೈದ್ಯರಿಂದ ಮಾಹಿತಿ ಬಿಡುಗಡೆ.

* 'ಲಕ್ಷ್ಮೀವರ ತೀರ್ಥರದು ನೈಸರ್ಗಿಕ ಸಾವಲ್ಲ. ಈ ಕುರಿತು ಸಮಗ್ರ ತನಿಖೆ ಆಗಬೇಕು' -ಸ್ವಾಮೀಜಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೇಜಾವರ ಮಠದಲ್ಲಿ ಈ ಹಿಂದೆ ಪೀಠತ್ಯಾಗ ಮಾಡಿದ್ದ ಕಿರಿಯ ಯತಿ ವಿಶ್ವ ವಿಜಯ ತೀರ್ಥರಿಂದ ಒತ್ತಾಯ.

* ಶ್ರೀಗಳ ಅಂತ್ಯಸಂಸ್ಕಾರ, ಉತ್ತರಾಧಿಕಾರಿ ನೇಮಕ ಮಾಡುವ ವಿಚಾರವಾಗಿ ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಸೇರಿದಂತೆ ಇತರ ಸ್ವಾಮೀಜಿಗಳು ರಹಸ್ಯ ಸಭೆ ನಡೆಸಿದ್ದಾರೆ.

* 'ಶೀರೂರು ಮಠದ ಪಟ್ಟದ ದೇವರಾದ ವಿಠ್ಠಲ ಮತ್ತು ಇನ್ನಿತರ ಮೂರ್ತಿಗಳನ್ನು ವಾಪಸ್ ಪಡೆಯಲೆಂದು ಸ್ವಾಮೀಜಿ ಕ್ರಿಮಿನಲ್ ದಾಖಲಿಸಲು ಉದ್ದೇಶಿಸಿದ್ದರು. ಅದರಂತೆ ನಾನು ಫಿರ್ಯಾದಿಯನ್ನೂ ತಯಾರಿಸಿದ್ದೆ. ಅಷ್ಟರಲ್ಲಿ ಸಾವಿನ ಸುದ್ದಿ ಆಘಾತಕಾರಿಯಾಗಿ ಬಂದಿದೆ. ಲಕ್ಷ್ಮೀವರ ತೀರ್ಥರು ಜೂನ್ 8ರಂದು ನಮ್ಮ ಕಚೇರಿಗೆ ಬಂದಿದ್ದರು. ಮಠಾಧೀಪತಿಗಳ ಜೊತೆಗೆ ಅವರಿಗೆ ಇರುವ ಭಿನ್ನಾಭಿಪ್ರಾಯದ ಬಗ್ಗೆ ವಿಸ್ತೃತವಾಗಿ ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಸಿದರು. ಸ್ವಾಮೀಜಿ ಬಯಸಿದಂತೆ ಕೃಷ್ಣಮಠದ ಆರು ಮಠಾಧಿಪತಿಗಳ ವಿರುದ್ಧ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಲಾಯಿತು' -ಲಕ್ಷ್ಮೀವರ ತೀರ್ಥರ ಪರ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದ್ದ ವಕೀಲ ರವಿಕಿರಣ್ ಮುರ್ಡೇಶ್ವರ ಅವರಿಂದ ಹೇಳಿಕೆ.

* ಮಣಿಪಾಲ ಪೊಲೀಸರ ನೇತೃತ್ವದಲ್ಲಿ ಆಸ್ಪತ್ರೆಯ ಶವಾಗಾರದಲ್ಲಿ ಶ್ರೀಗಳ ಪಾರ್ಥೀವ ಶರೀರ ಪರೀಕ್ಷೆ.

ಇನ್ನಷ್ಟು ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT