ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಸಭೆ | ಶರಾವತಿ ಸಂತ್ರಸ್ತರನ್ನು ಒಕ್ಕಲೆಬ್ಬಿಸುವುದಿಲ್ಲ: ಮಾಧುಸ್ವಾಮಿ ಭರವಸೆ

ಮುಖ್ಯಮಂತ್ರಿ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ: ಮಾಧುಸ್ವಾಮಿ
Published : 29 ಡಿಸೆಂಬರ್ 2022, 6:50 IST
ಫಾಲೋ ಮಾಡಿ
Comments

ಬೆಳಗಾವಿ: ಶರಾವತಿ ಸಂತ್ರಸ್ತರು ಮತ್ತು ಅನುಸೂಚಿತ ಬುಡಕಟ್ಟುಗಳ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ, ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ ಮನವೊಲಿಸಿ ಜಮೀನನ್ನು ಅವರ ಹೆಸರಿಗೆ ಮಾಡಿಕೊಡಲಾಗುವುದು ಎಂದು ಕಾನೂನು ಸಚಿವಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಬುಧವಾರ ನಿಯಮ 69 ರಡಿ ಹರತಾಳುಹಾಲಪ್ಪ ಮತ್ತು ದಿನಕರ ಶೆಟ್ಟಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ‘ಶರಾವತಿ ಸಂತ್ರಸ್ತರ ವಿಚಾರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಒಯ್ದು ಇತ್ಯರ್ಥಪಡಿಸುತ್ತೇವೆ. ಈ ವಿಚಾರವನ್ನು ನಮಗೆ ಬಿಡಿ’ ಎಂದು ಹೇಳಿದರು.

ಈ ಪ್ರಕರಣಗಳಲ್ಲಿ ಒತ್ತುವರಿದಾರರಿಗೆ ಸರ್ಕಾರ ನೋಟಿಸ್‌ ಜಾರಿ ಮಾಡಿರುವುದರ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸಲಾಗುತ್ತಿದೆ. ಈ ನೋಟಿಸ್‌ ಒಕ್ಕಲೆಬ್ಬಿಸಲು ಅಲ್ಲ. ಅಲ್ಲಿ ವಾಸವಿರುವುದಕ್ಕೆ ದಾಖಲೆಗಳ ಪರಾಮರ್ಶೆಗೆ ಮಾತ್ರ. ಈ ರೀತಿ ಸಂಗ್ರಹಿಸಿದ ದಾಖಲೆಗಳು ವಿಭಾಗೀಯ ಅಧಿಕಾರಿಗೆ ಹೋಗುತ್ತದೆ. ಈ ನೋಟಿಸಿನ ಬಗ್ಗೆ ಭಯ ಬೇಕಿಲ್ಲ. ಅಪ ಪ್ರಚಾರಗಳಿಗೆ ಕಿವಿಗೊಡಬೇಕಾಗಿಲ್ಲ ಎಂದರು.

1980ರ ಅರಣ್ಯ ಕಾಯ್ದೆ ಜಾರಿಗೆ ಬಂದ ಮೇಲೆ ರಾಜ್ಯ ಸರ್ಕಾರ ಕೇಂದ್ರದ ಮತ್ತು ಸುಪ್ರೀಂಕೋರ್ಟ್‌ ಒಪ್ಪಿಗೆ ಪಡೆಯದೇ ಜಮೀನು ಡಿ–ನೋಟಿಫೈ ಮಾಡಿದ್ದನ್ನು ಹೈಕೋರ್ಟ್‌ ಒಪ್ಪಿಕೊಂಡಿಲ್ಲ. ಇದು ನ್ಯಾಯಾಂಗ ಉಲ್ಲಂಘನೆ ಆಗುವುದರಿಂದ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಮಾಧುಸ್ವಾಮಿ ವಿವರಿಸಿದರು.

ಆದರೆ, ಈ ಜನರ ಬಗ್ಗೆ ಸರ್ಕಾರಕ್ಕೆ ಕಳಕಳಿ ಇದೆ. ಇವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸಲಿದೆ. ಕೇಂದ್ರಕ್ಕೆ ಮನವರಿಕೆ ಮಾಡಿ ಭೂಮಿ ಅವರ ಹೆಸರಿಗೆ ಮಾಡಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಈ ಚರ್ಚೆಯಲ್ಲಿ ಬಿಜೆಪಿಯ ಕುಮಾರ್‌ಬಂಗಾರಪ್ಪ, ದಿನಕರ ಶೆಟ್ಟಿ, ಮಾಡಾಳು ವಿರೂಪಾಕ್ಷಪ್ಪ ಮಾತನಾಡಿದರು.

ಒಕ್ಕಲೆಬ್ಬಿಸಿದರೆ ರಕ್ತಕ್ರಾಂತಿ: ಹಾಲಪ್ಪ ಕಿಡಿ
ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಿಸಲುಸರ್ಕಾರ ಸುಮಾರು 8 ಸಾವಿರ ಕುಟುಂಬಗಳನ್ನು ರಾತ್ರೋರಾತ್ರಿ ಎಬ್ಬಿಸಿ, ಬೇರೆ ಬೇರೆ ಕಡೆಗಳಲ್ಲಿ ತಂದು ಬಿಟ್ಟಿತು. ಈಗಲೂ ಇವರ ಹೆಸರಿಗೆ ಭೂಮಿ ಆಗಿಲ್ಲ. ನಿರಾಶ್ರಿತರ ಹೆಸರಿಗೆ ಭೂಮಿ ಮಾಡಿಕೊಡುವುದರ ಜತೆಗೆ ಇವರ ಸ್ಥಿತಿಗತಿಯ ಅಧ್ಯಯನವೂ ಆಗಬೇಕು ಎಂದು ಬಿಜೆಪಿಯ ಹರತಾಳು ಹಾಲಪ್ಪ ಒತ್ತಾಯಿಸಿದರು.

ಅಲ್ಲದೆ, ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ನಿಯಮ ಸರಳೀಕರಿಸಿ ಮೂರು ತಲೆಮಾರು ಎಂದು ಇರುವುದನ್ನು ಕೈಬಿಟ್ಟು ಒಂದು ತಲೆಮಾರು ಎಂದು ಮಾಡಬೇಕು. ಈ ಕುರಿತು ಸದನವು ಒಮ್ಮತದ ನಿರ್ಣಯ ತೆಗೆದುಕೊಳ್ಳಬೇಕು. ಇವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರೆ ರಕ್ತ ಕ್ರಾಂತಿ ಆಗುತ್ತದೆ ಎಂದು ಅವರು ಎಚ್ಚರಿಸಿದರು.

‘ಜಮೀನು ಮಂಜೂರು ಮರುಸ್ಥಾಪಿಸಿ’
ಶರಾವತಿ ಸಂಸತ್ರಸ್ತರ ಪ್ರಕರಣದಲ್ಲಿ ಈ ಸರ್ಕಾರ ಹಿಂಪಡೆದಿರುವ ಮತ್ತು ನಮ್ಮ ಸರ್ಕಾರ ಹೊರಡಿಸಿದ್ದ ಎಲ್ಲ 55 ಪ್ರಕರಣಗಳನ್ನು ಮರುಸ್ಥಾಪಿಸಬೇಕು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಬೆಳಕು ಕೊಟ್ಟು ಬೆಂಕಿಗೆ ಬಿದ್ದ ಶರಾವತಿ ನಿರಾಶ್ರಿತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿರಬೇಕು ಎಂದರು.

ಅಗತ್ಯ ಇರುವ ಕಡೆಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಗಳನ್ನು ಮಂಜೂರು ಮಾಡಬೇಕು. ಮಂಜೂರು ಮಾಡಿರುವ ಭೂಮಿಗಳನ್ನು ರೈತರ ವಶದಲ್ಲಿಯೇ ತಕ್ಷಣ ಉಳಿಸುವಂತಾಗಬೇಕು ಎಂದು ಹೇಳಿದರು.

ಶರಾವತಿಯ ನಿರಾಶ್ರಿತರೂ ಸೇರಿ ಚಕ್ರಾ, ವಾರಾಹಿ, ಸಾವೆ ಹಕ್ಲು, ಭದ್ರಾ, ತುಂಗಾ ಅಣೆಕಟ್ಟುಗಳ ಸಂತ್ರಸ್ತರ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಬೇಕು. ಅಲ್ಲದೆ, ಎಲ್ಲ ಬಗರ್‌ ಹುಕಂ ಅರ್ಜಿಗಳಾದ 50, 53 ಮತ್ತು 57 ಅನ್ನು ಜನಪರವಾಗಿ ಇತ್ಯರ್ಥ ಮಾಡಿ ರೈತರಿಗೆ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT