ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ಸೋಲು | ಸಿಎಂ ಕ್ಷಮೆ ಕೇಳಿದರು –ಲಕ್ಷ್ಮೀ ಹೆಬ್ಬಾಳಕರ

Published 10 ಜೂನ್ 2024, 16:37 IST
Last Updated 10 ಜೂನ್ 2024, 16:37 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಕೇಳಿದ್ದಾರೆ. ಅದವರ ದೊಡ್ಡ ಗುಣ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಬೆಳಗಾವಿ ನಾಯಕರ ಜೊತೆ ಭೇಟಿಯಾದಾಗ ಮುಖ್ಯಮಂತ್ರಿ 'ಸ್ಸಾರಿ’ ಎಂದು ಪ್ರತಿಕ್ರಿಯಿಸಿದರು’ ಎಂದರು.

‘ಬೆಳಗಾವಿಯ ಚುನಾವಣಾ ಫಲಿತಾಂಶ ಗಮನಿಸಿದರೆ ಬಿಜೆಪಿ ಮತ್ತು ಎಂಇಎಸ್ ಒಂದಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಕಳೆದ 25 ವರ್ಷಗಳಿಂದಲೂ ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಎಂಇಎಸ್ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಆದರೆ, ಈ ಬಾರಿ ಆ ರೀತಿ ಆಗಿಲ್ಲ. ಸೋಲಿಗೆ ಅನೇಕ ಕಾರಣಗಳಿವೆ’ ಎಂದರು.

‘ವಿಧಾನಸಭೆ ಚುನಾವಣೆಯ ವಾತಾವರಣ ಬೇರೆ, ಲೋಕಸಭಾ ಚುನಾವಣೆ ವಾತಾವರಣವೇ ಬೇರೆ. ಚುನಾವಣಾ ಲೆಕ್ಕಾಚಾರದ ಬಗ್ಗೆ ಹೇಳುವುದಾದರೆ, ಒಂದೊಂದು ಕ್ಷೇತ್ರಕ್ಕೆ ಒಂದೊಂದು ದೃಷ್ಟಿಕೋನ ಇರುತ್ತದೆ. ಆದರೆ, ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಮೊದಲಿನಿಂದಲೂ ಉತ್ತಮ ವಾತಾವರಣ ಇತ್ತು. ಜನಬೆಂಬಲ ಕೂಡ ವ್ಯಕ್ತವಾಗಿತ್ತು. ಈ ನಡುವೆಯೂ ಫಲಿತಾಂಶ ನಮಗೆ ಕೈ ಕೊಟ್ಟಿತು’ ಎಂದರು.

ಸಮಸ್ಯೆ ಬಗೆಹರಿಸಿಕೊಳ್ಳಲಿ: ಸಚಿವ ಸತೀಶ ಜಾರಕಿಹೊಳಿ ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ ನಡುವಿನ ವಾಕ್ಸಮರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಯಾರೊಬ್ಬರ ಪರ ಇಲ್ಲ, ಇಬ್ಬರ ಪರವಾಗಿಯೂ ಇದ್ದೇನೆ. ಇಬ್ಬರೂ ದೊಡ್ಡ ನಾಯಕರು, ಒಟ್ಟಿಗೆ ಕುಳಿತು ಮಾತಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ’ ಎಂದು ಇಬ್ಬರಿಗೂ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT