ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲಿ ಇರಲಿ: ಎಚ್‌.ಡಿ. ದೇವೇಗೌಡ

Published 24 ಮಾರ್ಚ್ 2024, 8:58 IST
Last Updated 24 ಮಾರ್ಚ್ 2024, 8:58 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಯನ್ನು ಬೆಂಬಲಿಸುವ ನಿರ್ಧಾರವನ್ನು ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಮೂರೂ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮೇಕೆದಾಟು ಯೋಜನೆಯನ್ನು ವಿರೋಧಿಸುವ ಅಂಶವನ್ನು ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿರುವುದನ್ನು ಜೆಡಿಎಸ್‌ ಖಂಡಿಸುತ್ತದೆ. ರಾಜ್ಯದಲ್ಲಿರುವ ಎಲ್ಲ ಪಕ್ಷಗಳೂ ಅದನ್ನು ಖಂಡಿಸಬೇಕು’ ಎಂದರು.

‘ಮೇಕೆದಾಟು ಜಲಾಶಯ ನಿರ್ಮಾಣದ ವಿಚಾರದಲ್ಲಿ ತಮಿಳುನಾಡು ಸರ್ಕಾರದ ಬೆದರಿಕೆಗಳಿಗೆ ಭಯಪಡಬೇಕಾದ ಅಗತ್ಯವಿಲ್ಲ. ಅಣೆಕಟ್ಟೆ ನಿರ್ಮಾಣಕ್ಕಾಗಿ ನಾನೊಬ್ಬನೇ ಅಲ್ಲ, ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ. ಡಿಎಂಕೆಯ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್‌ ಕೂಡ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಲಿ’ ಎಂದು ಒತ್ತಾಯಿಸಿದರು.

'ಮೇಕೆದಾಟು ಜಲಾಶಯ ನಿರ್ಮಾಣವನ್ನು ತಮಿಳುನಾಡು ಸರ್ಕಾರ ವಿರೋಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುವಾಗ ತಮಿಳುನಾಡು ಪರ ವಕೀಲ ಶೇಖರ್‌ ನಫಾರ್ಡ್‌ ಹೇಳಿದ್ದರು. ಈಗ ರಾಜ್ಯದ ಜನರು ಒಗ್ಗಟ್ಟಿನಿಂದ ಪ್ರಯತ್ನ ಮಾಡಬೇಕಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಯನ್ನು ಬಜೆಟ್‌ನಲ್ಲೇ ಘೋಷಿಸಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಅಂತಹ ಪ್ರಯತ್ನ ಈಗಲೂ ಮುಂದುವರಿಯಬೇಕು’ ಎಂದು ದೇವೇಗೌಡ ಹೇಳಿದರು.

ರಾಜಕೀಯ ಬೇಡ:

‘ಕಾವೇರಿ ನೀರಿನ ವಿಷಯದಲ್ಲಿ ರಾಜಕೀಯ ಬೆರೆಸುವುದು ಬೇಡ. ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆಯ ಒಂಬತ್ತು ಜಿಲ್ಲೆಗಳ 22 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನರು ಮನೆಗಳ ಬಾಗಿಲಿಗೆ ಬೀಗ ಹಾಕಿ ವಲಸೆ ಹೋಗುತ್ತಿದ್ದಾರೆ’ ಎಂದರು.

‘ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುವಂತೆ ಮತ್ತು ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಗೆ ಅಗತ್ಯವಿರುವ ಅನುಮತಿಗಳನ್ನು ತ್ವರಿತವಾಗಿ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಪತ್ರದ ಪ್ರತಿ ಪ್ರದರ್ಶಿಸಿದರು.

‘ಮೇಕೆದಾಟು ಯೋಜನೆಯಿಂದ 5 ಸಾವಿರ ಎಕರೆ ಅರಣ್ಯ ಮುಳುಗಡೆ ಆಗುತ್ತದೆ ಎಂಬುದು ನಿಜವಲ್ಲ. ಆ ಕಾರಣವನ್ನು ಮುಂದಿಟ್ಟುಕೊಂಡು ಯೋಜನೆಯನ್ನು ವಿರೋಧಿಸುವ ಕೆಲಸವನ್ನು ಪರಿಸರವಾದಿಗಳು ಮಾಡಬಾರದು’ ಎಂದು ಮನವಿ ಮಾಡಿದರು.

‘ಮೈತ್ರಿಯಿಂದ ಸಮಸ್ಯೆ ಇಲ್ಲ’


‘ಬಿಜೆಪಿ ಜತೆ ಮೈತ್ರಿಯಿಂದ ನಮಗೆ ಸಮಸ್ಯೆ ಆಗಿಲ್ಲ. ನಮಗೆ ಮೂರು ಕ್ಷೇತ್ರ ಕೊಟ್ಟಿದ್ದಾರೆ. ನನ್ನನ್ನು, ಕುಮಾರಸ್ವಾಮಿ ಹಾಗೂ ಜಿ.ಟಿ. ದೇವೇಗೌಡರನ್ನು ತಾರಾ ಪ್ರಚಾರಕರನ್ನಾಗಿ ಪಟ್ಟಿಗೆ ಸೇರಿಸಿದ್ದಾರೆ’ ಎಂದು ಎಚ್‌.ಡಿ. ದೇವೇಗೌಡ ಹೇಳಿದರು.

‘ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಭಾನುವಾರವಷ್ಟೆ ಮನೆಗೆ ಬಂದಿದ್ದಾರೆ. ಡಾ.ಸಿ.ಎನ್. ಮಂಜುನಾಥ್ ಪರ ನಾವೆಲ್ಲರೂ ಪ್ರಚಾರ ಮಾಡುತ್ತೇವೆ. ಮಂಡ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT