ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯ್ಕೆಯಾದ ಪುಸ್ತಕಗಳ ಖರೀದಿಗಿಲ್ಲ ಹಣ:₹24 ಕೋಟಿ ಪ್ರಸ್ತಾವನೆಗೆ ₹7 ಕೋಟಿ ಬಿಡುಗಡೆ!

Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ 2020ನೇ ಸಾಲಿನ ಪುಸ್ತಕ ಖರೀದಿಗೆ ಅಗತ್ಯ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಪುಸ್ತಕಗಳ ಸಾವಿರಾರು ಪ್ರತಿಗಳಿಗೆ ಗೋದಾಮಿನಲ್ಲಿಯೇ ದೂಳು ಹಿಡಿಯುತ್ತಿದೆ. 

ಇಲಾಖೆಯು ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ ಪುಸ್ತಕಗಳ ಪ್ರತಿ ಶೀರ್ಷಿಕೆಯ 300 ಪ್ರತಿಗಳನ್ನು ಖರೀದಿಸುತ್ತದೆ. ಈ ಯೋಜನೆಯಡಿ ಸಾಹಿತಿ ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯ ಈ ಹಿಂದಿನ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಎರಡು ವರ್ಷಗಳ ಹಿಂದೆಯೇ 2020ನೇ ಸಾಲಿನ ಪುಸ್ತಕಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೆ, ಸರ್ಕಾರದ ಅನುಮೋದನೆ ದೊರೆತಿರಲಿಲ್ಲ. ಕಳೆದ ಬಜೆಟ್‌ನಲ್ಲಿ ₹ 10 ಕೋಟಿ ಅನುದಾನ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್‌ ರಚಿಸಿತ್ತು. ಸಾಹಿತಿ ಕರೀಗೌಡ ಬೀಚನಹಳ್ಳಿ ಅವರ ಅಧ್ಯಕ್ಷತೆಯ ನೂತನ ಸಮಿತಿಯು ಇಲಾಖೆಯ ಸೂಚನೆ ಮೇರೆಗೆ ಅಂತಿಮಗೊಂಡಿದ್ದ ಪುಸ್ತಕಗಳ ಪಟ್ಟಿಯನ್ನು ಮರುಪರಿಶೀಲನೆ ನಡೆಸಿತ್ತು. ಈ ಪಟ್ಟಿಗೆ 2023ರ ನವೆಂಬರ್‌ನಲ್ಲಿ ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ಅಗತ್ಯ ಅನುದಾನ ನೀಡದಿದ್ದರಿಂದ ಖರೀದಿ ನಡೆದಿಲ್ಲ. 

2020ನೇ ಸಾಲಿನ ಪುಸ್ತಕ ಖರೀದಿಗೆ 4,791 ಶೀರ್ಷಿಕೆಗಳು ಆಯ್ಕೆಯಾಗಿದ್ದವು. ಇಷ್ಟು ಪುಸ್ತಕಗಳ ತಲಾ 300 ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಖರೀದಿಸಿ, ರಾಜ್ಯದ ಗ್ರಂಥಾಲಯಗಳಿಗೆ ಪೂರೈಕೆ ಮಾಡಬೇಕಾಗಿತ್ತು. ಆಯ್ಕೆಯಾದ ಪುಸ್ತಕಗಳ 300 ಪ್ರತಿಗಳನ್ನು ಪ್ರಕಾಶನ ಸಂಸ್ಥೆಗಳು ಹಾಗೂ ಲೇಖಕರು ಇಲಾಖೆಯ ಸೂಚನೆ ಮೇರೆಗೆ ಇಲಾಖೆಯ ಗೋದಾಮಿಗೆ ಕಳೆದ ವರ್ಷಾಂತ್ಯಕ್ಕೇ ಸರಬರಾಜು ಮಾಡಿದ್ದರು. ಈ ಪುಸ್ತಕಗಳ ಖರೀದಿಗೆ ಇಲಾಖೆ ₹ 24 ಕೋಟಿ ಪ್ರಸ್ತಾವನೆ ಕಳಿಸಿದ್ದು, ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ₹ 10 ಕೋಟಿಯಲ್ಲಿ ₹ 7.18 ಕೋಟಿ ಬಿಡುಗಡೆಯಾಗಿದೆ. ಇದರಿಂದ ಬಹುತೇಕ ಪುಸ್ತಕಗಳು ಖರೀದಿಯಾಗದೆ ಉಳಿದಿವೆ.

ಪುಸ್ತಕೋದ್ಯಮಕ್ಕೆ ಹಿನ್ನಡೆ: ಕರೀಗೌಡ ಬೀಚನಹಳ್ಳಿ ಅವರ ಅಧ್ಯಕ್ಷತೆಯ ಪುಸ್ತಕ ಆಯ್ಕೆ ಸಮಿತಿಯು ಈಗ 2021ರ ಪುಸ್ತಕ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. 2020ರ ಪುಸ್ತಕಗಳ ಖರೀದಿಯೇ ಪೂರ್ಣಗೊಳ್ಳದಿದ್ದರಿಂದ 2021ರ ಖರೀದಿಯೂ ವಿಳಂಬ ಆಗಲಿದೆ. 2022 ಹಾಗೂ 2023ರ ಆಯ್ಕೆ ಹಾಗೂ ಖರೀದಿ ಮುಂದಿನ ದಿನಗಳಲ್ಲಿ ನಡೆಯಬೇಕಾಗಿದೆ. ಇದರಿಂದಾಗಿ ರಾಜ್ಯದ ಗ್ರಂಥಾಲಯಗಳಲ್ಲಿ ನಾಲ್ಕು ವರ್ಷಗಳ ಪುಸ್ತಕ ಸಿಗದಂತಾಗಿದೆ. 

ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲವು ಲೇಖಕರು ಕೂಡ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ‌ಇದಕ್ಕಾಗಿ ಪ್ರತಿವರ್ಷ ₹ 15 ಕೋಟಿ ವೆಚ್ಚ ಮಾಡಲಾಗುತ್ತಿತ್ತು. ‌ಆದರೆ, ನಿರ್ದಿಷ್ಟ ಬಜೆಟ್ ಘೋಷಿಸದಿರುವುದು, ಪುಸ್ತಕಗಳ ಖರೀದಿಗೆ ಅಗತ್ಯವಿರುವ ಅನುದಾನಕ್ಕೆ ಅನುಮೋದನೆ ದೊರೆಯದಿರುವುದು ಸೇರಿ ವಿವಿಧ ಕಾರಣದಿಂದ ಪುಸ್ತಕೋದ್ಯಮ ಹಿನ್ನಡೆ ಅನುಭವಿಸಿದೆ. 

₹ 705 ಕೋಟಿ ಗ್ರಂಥಾಲಯ ಕರ ಬಾಕಿ

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿವಿಧ ಕಾಯಂ ಸಿಬ್ಬಂದಿ ವೇತನ ಹೊರತುಪಡಿಸಿ, ಗ್ರಂಥಾಲಯ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳು ಗ್ರಂಥಾಲಯ ಕರದಿಂದಲೇ ನಡೆಯಲಿವೆ. ದಿನಪತ್ರಿಕೆಗಳ ಬಿಲ್, ಬಾಡಿಗೆ, ವಿದ್ಯುತ್ ಬಿಲ್, ದೂರವಾಣಿ ಬಿಲ್, ನೀರು ಸರಬರಾಜು, ಲೇಖಕರು–ಪ್ರಕಾಶ ಕರಿಗೆ ಪಾವತಿಯಾಗಬೇಕಾದ ಬಿಲ್, ಪೀಠೋಪಕರಣ ಖರೀದಿ ಬಿಲ್ ಇತ್ಯಾದಿ ಯನ್ನೂ ಗ್ರಂಥಾಲಯ ಕರದಿಂದಲೇ ಪಾವತಿಸಬೇಕು. ಆದರೆ, ಕಳೆದ 5 ವರ್ಷ ಗಳಲ್ಲಿ ಬಿಬಿಎಂಪಿಯ ₹ 638 ಕೋಟಿ ಸೇರಿ ಒಟ್ಟು ₹ 705 ಕೋಟಿ ಗ್ರಂಥಾಲಯ ಕರವನ್ನು ಸ್ಥಳೀಯ ಸಂಸ್ಥೆಗಳು ಇಲಾಖೆಗೆ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ‌

ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿಯನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಆಯ್ಕೆಯಾದ ಪುಸ್ತಕಗಳ ಖರೀದಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ, ಪುಸ್ತಕೋದ್ಯಮಕ್ಕೆ ನೆರವಾಗಬೇಕು.
-ಪ್ರಕಾಶ್ ಕಂಬತ್ತಳ್ಳಿ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ
ಈಗಾಗಲೇ ಪುಸ್ತಕ ಖರೀದಿ ಸಾಕಷ್ಟು ವಿಳಂಬವಾಗಿದೆ. ಇನ್ನಷ್ಟು ವಿಳಂಬ ಮಾಡಿದಲ್ಲಿ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿ, ಬೀದಿಗೆ ಬೀಳುತ್ತಾರೆ.
-ಸೃಷ್ಟಿ ನಾಗೇಶ್, ಕರ್ನಾಟಕ‌ ಪ್ರಕಾಶಕರ‌ ಸಂಘದ‌ ಸಂಘಟನಾ ಕಾರ್ಯದರ್ಶಿ
2020ರ ಪುಸ್ತಕ ಖರೀದಿಗೆ ಅಗತ್ಯ ಇರುವ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದ ಬಳಿಕ ಆಯ್ಕೆಯಾದ ಎಲ್ಲ ಪುಸ್ತಕಗಳನ್ನು ಖರೀದಿಸಲಾಗುತ್ತದೆ.
-ಸತೀಶ್ ಕುಮಾರ್ ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT