ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ವಾಟರ್ ಗೇಟ್‌ನಂತೆ 'ವೋಟರ್ ಗೇಟ್ ಪ್ರಕರಣ', ಸಿಎಂ ಶಾಮೀಲು: ಸಿದ್ದರಾಮಯ್ಯ

Last Updated 19 ನವೆಂಬರ್ 2022, 14:19 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯ ಅಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿ, ನ್ಯಾಯಾಂಗ ತನಿಖೆಗೆ ಒಪ್ಪಿಸಬಹುದು ಎಂದು ಮನವರಿಕೆ ಮಾಡಿ ಕೊಟ್ಟಿದ್ದೇವೆ. ಆಯೋಗ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕೇಂದ್ರ ಚುನಾವಣಾ ಆಯೋಗದ ಬಳಿ ನ್ಯಾಯಕ್ಕಾಗಿ ಮೊರೆ ಹೋಗುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮತದಾನದ ಹಕ್ಕಿನ ದುರುಪಯೋಗವೂ ಸೇರಿದಂತೆ ಚುನಾವಣಾ ಅವ್ಯವಹಾರಗಳು ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ಈ ಅಕ್ರಮದ ಬಗ್ಗೆ ತನಿಖೆ ನಡೆಸಬೇಕಾಗಿರುವುದು ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅಮೆರಿಕಾದ ವಾಟರ್ ಗೇಟ್ ಪ್ರಕರಣದಂತೆ ಇದು 'ವೋಟರ್ ಗೇಟ್ ಪ್ರಕರಣ' ಆಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಚಿಲುಮೆ ಸಂಸ್ಥೆಯ ಮುಖ್ಯಸ್ಥರಾದ ರವಿಕುಮಾರ್ ಕೃಷ್ಣಪ್ಪನವರ ಬಂಧನವಾಗಿಲ್ಲ, ಚಿಲುಮೆ ಸಂಸ್ಥೆಯ ಕಚೇರಿ ಸಿಬ್ಬಂದಿಗಳನ್ನು ಬಂಧಿಸಿಲ್ಲ. ಬಿಬಿಎಂಪಿ ಕಮಿಷನರ್ ಅವರ ಬಂಧನವಾಗಿಲ್ಲ. ಇದಕ್ಕೆ ಏನು ಕಾರಣ? ಎಂದು ಪ್ರಶ್ನಿಸಿದರು.

ರಾಜ್ಯ ಮುಖ್ಯಚುನಾವಣಾಧಿಕಾರಿ ಅವರು ಪ್ರಾದೇಶಿಕ ಆಯುಕ್ತರ ಮೂಲಕ ತನಿಖೆ ಮಾಡಿಸುತ್ತೇನೆ ಎನ್ನುತ್ತಾರೆ, ಓರ್ವ ಪ್ರಾದೇಶಿಕ ಆಯುಕ್ತರು ಮುಖ್ಯಮಂತ್ರಿ ಮೇಲೆ ತನಿಖೆ ಮಾಡಿ ಶಿಕ್ಷೆ ಕೊಡಲು ಸಾಧ್ಯವೇ? ಇದೊಂದು ಹಾಸ್ಯಾಸ್ಪದ ಹೇಳಿಕೆ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿ ಸಚಿವರೇ ಹಗರಣದಲ್ಲಿ ಭಾಗಿಯಾಗಿರುವುದರಿಂದ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸುವುದು ಸೂಕ್ತ. ಇದನ್ನೇ ನಾವು ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿಯವರು ಇದು ಆಧಾರ ರಹಿತ ಆರೋಪ, ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದವರ ಬಂಧನ ಯಾಕಾಗಿದೆ? ಮತದಾರರ ಪಟ್ಟಿ ಪರಿಷ್ಕರಣೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ರದ್ದು ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ಅಮೆರಿಕಾದ ವಾಟರ್ ಗೇಟ್ ಪ್ರಕರಣದಂತೆ ಇದು 'ವೋಟರ್ ಗೇಟ್ ಪ್ರಕರಣ'. ಈ ಹಗರಣದಲ್ಲಿ ನೇರವಾಗಿ ಸಿಎಂ ಬೊಮ್ಮಾಯಿ ಶಾಮೀಲಾಗಿದ್ದಾರೆ. ಈ ಹಗರಣದಲ್ಲಿ ಬಡಪಾಯಿಗಳ ಮೇಲೆ ಮೊಕದ್ದಮೆ ದಾಖಲು ಮಾಡಿಕೊಂಡು ಬಂಧಿಸಿ, ನೈಜ ಅಪರಾಧಿಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಮತದಾರರ ಮಾಹಿತಿಯ ಕಳ್ಳತನ ಮತ್ತು ಒಂದು ನಿರ್ದಿಷ್ಟ ಸಮುದಾಯದ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕುವ ದುರುದ್ದೇಶದಿಂದಲೇ ರಾಜ್ಯ ಬಿಜೆಪಿ ಸರ್ಕಾರ ಮತದಾರರ ಪಟ್ಟಿ ಪರಿಷ್ಕರಣೆಯ ಕೆಲಸವನ್ನು ವಂಚಕ ಕಂಪೆನಿಗೆ ಕೊಟ್ಟಿದೆ. ಮುಖ್ಯಮಂತ್ರಿಯವರೇ, ಬೆಂಗಳೂರು ನಗರದ ಉಸ್ತುವಾರಿ ಸಚಿವರು. ಅವರೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು. ತಮಗೂ, ಈ ಹಗರಣಕ್ಕೆ ಸಂಬಂಧ ಇಲ್ಲ ಎಂದು ಅವರು ಹೇಗೆ ಹೇಳುತ್ತಾರೆ? ಎಂದು ಹೇಳಿದರು.

ಮುಖ್ಯಮಂತ್ರಿ ಅವರು ಎಲ್ಲಾ ಅರೋಪಗಳಿಗೂ ಹಿಂದಿನ ಸರ್ಕಾರ ಮಾಡಿಲ್ವಾ? ಎಂದು ಕೇಳುತ್ತಾರೆ, ಆಗ ವಿರೋಧ ಪಕ್ಷದಲ್ಲಿದ್ದ ಬೊಮ್ಮಾಯಿಯವರು ಸುಮ್ಮನಿದ್ದದ್ದು ಯಾಕೆ? ಆಗ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದೆ ಇದ್ದರೂ ನಮ್ಮ ಸರ್ಕಾರದ ವಿರುದ್ಧದ ಎಲ್ಲಾ ಆರೋಪಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ. ಈ ಹಗರಣದಲ್ಲಿ ಇನ್ನಷ್ಟು ಸಾಕ್ಷಿಗಳನ್ನು ನಾವು ಸಂಗ್ರಹ ಮಾಡುತ್ತಿದ್ದೇವೆ. ಇಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಯಾರಾದರೂ ಸಾವಿರಾರು ಜನರಿಗೆ ಸಂಬಳ ನೀಡಿ ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಸಾಧ್ಯವೇ ಎಂದು ಸಿಎಂ ಅವರನ್ನು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ನಾಯಕರು ಚುನಾವಣೆಯಲ್ಲಿ ಸೋಲುವ ಭಯದಿಂದ ಈ ರೀತಿ ವಾಮ ಮಾರ್ಗ ಹಿಡಿದ್ದಿದ್ದಾರೆ, ಆದರೂ ಇಂಥಾ ಷಡ್ಯಂತ್ರಗಳನ್ನು ಎದುರಿಸಿ ನಾವು ಚುನಾವಣೆಯಲ್ಲಿ ಗೆಲ್ಲುತ್ತಿದ್ದೇವೆ. ಮುಂದೆಯೂ ಗೆಲ್ಲುತ್ತೇವೆ. ಜನರಿಗೆ ಸತ್ಯ ಗೊತ್ತಾಗಬೇಕು ಮತ್ತು ಚುನಾವಣಾ ಆಯೋಗ ಹಾಗೂ ವ್ಯವಸ್ಥೆಯ ಬಗ್ಗೆ ನಂಬಿಕೆ ಬರಬೇಕು ಎಂಬ ಕಾರಣಕ್ಕಾಗಿ ಮತದಾರರ ಮಾಹಿತಿ ಕಳುವು ಹಗರಣದಲ್ಲಿ ಭಾಗಿಯಾದವರೆಲ್ಲರ ಹೆಸರು ಹೊರಬರಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT