ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುನೈಟೆಡ್ ವಿ ಸ್ಟಾಂಡ್’ ಎಂಬ ಕಿಟ್ಟಿ ಪಾರ್ಟಿಯ ಹೆಸರೇ ‘ಮಹಾಘಟಬಂಧನ್’: ಬಿಜೆಪಿ ವ್ಯಂಗ್ಯ

Published 18 ಜುಲೈ 2023, 7:39 IST
Last Updated 18 ಜುಲೈ 2023, 7:39 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಹಿತ ಬಯಸದ, ಸದಾ ವೈಯಕ್ತಿಕ ಹಿತಾಸಕ್ತಿಗಳ ಮೇಲಾಟದಲ್ಲಿ ತೊಡಗುವ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಅವಕಾಶವಾದಿಗಳು ಇಂದು ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ ವಿರೋಧ ಪಕ್ಷಗಳ ಸಭೆ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಜಗಮೆಚ್ಚಿದ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದ್ವೇಷ ಕಾರುವುದಷ್ಟೇ ಇವರ ಪ್ರಮುಖ ಅಜೆಂಡಾ’ ಎಂದು ವ್ಯಂಗ್ಯವಾಡಿದೆ.

‘ಬೆಂಗಳೂರಿಗೆ ಬಂದಿರುವ ದೇಶದ ಅವಕಾಶವಾದಿ ರಾಜಕೀಯ ಪಕ್ಷಗಳ ಸಭೆಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದ್ದು, ಯುಪಿಎ ಹೆಸರಿನಲ್ಲಿ ಮುಂದುವರೆಯಲು ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಹೊಸ ಹೆಸರಿನ ತಲಾಶ್ ನಡೆಸಿವೆ. ಯುಪಿಎಯನ್ನು ವಿರೋಧಿಸಲು ಈ ಕಾರಣಗಳು ಇರಬಹುದೇ? ಯಾವ ಪಕ್ಷಗಳಿಗೂ ಗಾಂಧಿ ಕುಟುಂಬದ ಜೀತದಾಳುಗಳಾಗಲು ಇಷ್ಟವಿಲ್ಲ, ರಾಹುಲ್ ಗಾಂಧಿಯವರ ಅಪ್ರಬುದ್ಧ ನಾಯಕತ್ವವನ್ನು ಒಪ್ಪಿಕೊಳ್ಳಲು ಯಾರಿಗೂ ಮನಸ್ಸಿಲ್ಲ, ಭಾಗವಹಿಸುತ್ತಿರುವ ಎಲ್ಲಾ ಪಕ್ಷದ ನಾಯಕರುಗಳಿಗೆ ಪ್ರಧಾನಿ ತಾನಾಗಬೇಕೆಂಬ ಮಹಾದಾಸೆ, ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಯಾರ ಬಳಿಯೂ ಇಲ್ಲ. ತಮ್ಮ ರಾಜ್ಯಗಳಲ್ಲಿ ಮಗ್ಗುಲ ಮುಳ್ಳಾಗಿರುವ ಕಾಂಗ್ರೆಸ್ ಪಕ್ಷವನ್ನು ಶತಾಯಗತಾಯ ಮುಳುಗಿಸುವ ಗುರಿ’ ಎಂದು ಬಿಜೆಪಿ ಕಿಡಿಕಾರಿದೆ.

‘ಸದಾ ಅಧಿಕಾರಕ್ಕಾಗಿ ಕಚ್ಚಾಡುವ ಇವರುಗಳು (ವಿಪಕ್ಷಗಳು) ರಾಜಕಾರಣದಲ್ಲಿ ಇದುವರೆಗೂ ಬದ್ಧತೆ ಎಂಬುದನ್ನು ಒಮ್ಮೆಯೂ ಪ್ರದರ್ಶಿಸಿಲ್ಲ. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತಗಳು ಇವರ ಮುಖ್ಯ ಸಿದ್ದಾಂತವಾಗಿದ್ದು, ಅದನ್ನು ಸಾಧಿಸಲು ಈಗ ಒಂದಾಗುವ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ಕುಟುಕಿದೆ.

ಈ ಸಭೆಯ ಆಯೋಜಕರು ಯಾರು?, ಈ ಸಭೆಯ ಅಧ್ಯಕ್ಷರು ಯಾರು?, ಈ ಸಭೆಯ ಸಂಯೋಜನೆ ಯಾವ ಪಕ್ಷದ್ದು?, ಇದ್ಯಾವುದರ ಬಗ್ಗೆ ಸ್ವಲ್ಪವೂ ಸ್ಪಷ್ಟತೆ ಇಲ್ಲ. ‘ಯುನೈಟೆಡ್ ವಿ ಸ್ಟಾಂಡ್’ ಎಂಬ ಈ ಕಿಟ್ಟಿ ಪಾರ್ಟಿಯ ಹೆಸರೇ ಇವರ ಮಧ್ಯೆ ಒಗ್ಗಟ್ಟು ದೂರದ ಬೆಟ್ಟ ಎಂಬುದನ್ನು ನಿರೂಪಿಸುತ್ತದೆ ಎಂದು ಬಿಜೆಪಿ ಗುಡುಗಿದೆ.

‘ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಪರಸ್ಪರ ಕಚ್ಚಾಡುತ್ತಿರುವ ಮಮತಾ ಬ್ಯಾನರ್ಜಿಯ ಟಿಎಂಸಿ ಹಾಗೂ ಕಮ್ಯುನಿಸ್ಟರು ಇಂದು ಒಂದೇ ಟೇಬಲ್‌ನಲ್ಲಿ ಕುಳಿತು ಒಗ್ಗಟ್ಟು ಪ್ರದರ್ಶಿಸುತ್ತಾರಂತೆ, ಕೇರಳದಲ್ಲಿ ಅಧಿಕಾರಕ್ಕಾಗಿ ಹೊಡೆದಾಡುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಕಾಮ್ರೇಡ್‌ಗಳಂತೆ, ಪಂಜಾಬ್‌ನಲ್ಲಿ ಬಾಯಿಗೆ ಬಂದಂತೆ ಪರಸ್ಪರ ಬೈದಾಡಿಕೊಳ್ಳುವ ಆಮ್ ಆದ್ಮಿ ಪಕ್ಷದವರು ಹಾಗೂ ಕಾಂಗ್ರೆಸ್‌ನವರು, ಇಲ್ಲಿ ಮಾತ್ರ ಬಾಂಧವರಂತೆ’ ಎಂದು ಬಿಜೆಪಿ ಕುಹುಕವಾಡಿದೆ.

‘ಕನ್ನಡಿಗರ ಕುಡಿಯುವ ನೀರಿಗೆ, ಕಾವೇರಿ ಹಾಗೂ ಮೇಕೆದಾಟು ಯೋಜನೆಗಳಿಗೆ ಸದಾ ಇನ್ನಿಲ್ಲದಂತೆ ತೊಂದರೆ ಕೊಡುವ ತಮಿಳುನಾಡಿನ ಸಿಎಂ ಸ್ಟಾಲಿನ್‌ಗೆ, ಕರ್ನಾಟಕದ ಕಾಂಗ್ರೆಸ್ ಪಕ್ಷ ಚಿನ್ನತಂಬಿಯಂತೆ, ಕನ್ನಡಿಗರಿಗೆ ಮಹಾದಾಯಿ ನದಿಯ ಒಂದು ತೊಟ್ಟು ನೀರು ಬಿಡುವಿದೆಲ್ಲವೆಂದು ಗೋವಾದಲ್ಲಿ ಘೋಷಿಸಿದ್ದ ಸೋನಿಯಾ ಗಾಂಧಿಗೆ ಇಲ್ಲಿ ದೊಡ್ಡ ಕುರ್ಚಿಯಂತೆ’ ಎಂದು ಬಿಜೆಪಿ ಕಿಚಾಯಿಸಿದೆ.

ಸೋನಿಯಾ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬಾರದೆಂದು, ಕಾಂಗ್ರೆಸ್ ಪಕ್ಷವನ್ನೇ ತುಂಡರಿಸಿ ಹೊರ ಬಂದ ಎನ್‌ಸಿಪಿ ಸಹ ಇಲ್ಲಿ ಅತಿಥಿಯಂತೆ, ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಬಿಹಾರವನ್ನು ‘ಬಿಮಾರು’ಗೊಳಿಸಿದ್ದ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್, ಇಲ್ಲಿ ಭಾಯಿ-ಭಾಯಿಗಳಂತೆ, ಭಾರತವನ್ನು ತುಂಡರಿಸುವಂತಹ ಹೇಳಿಕೆಗಳನ್ನು ನೀಡುವ, ಪಾಕಿಸ್ಥಾನ ಪ್ರೇಮಿ ಫಾರೂಕ್ ಅಬ್ದುಲ್ಲಾಗೂ ಸಹ ಇಲ್ಲಿಗೆ ಆಹ್ವಾನವಿದೆಯಂತೆ! ಎಂದು ಬಿಜೆಪಿ ಲೇವಡಿ ಮಾಡಿದೆ.

‘ಹಿಂದೂ ಧರ್ಮವನ್ನು ಸದಾ ಅವಹೇಳನ ಮಾಡುವ, ಹಿಂದೂಗಳನ್ನು ಅತ್ಯಂತ ಕೆಟ್ಟದಾಗಿ ನಿಂದಿಸುವ, ದ್ವೇಷಿಸುವ ತಮಿಳುನಾಡಿನ ತಿರುಮಾವಳವನ್, ಮುಸ್ಲಿಂ ಲೀಗ್‌ಗೆ ಇಲ್ಲಿ ಪಾಲಿದೆಯಂತೆ, ಇಂತಹವರಿಂದ ಸಧೃಡ ಭಾರತ ಹಾಗೂ ಸಶಕ್ತ ಭಾರತವನ್ನು ನಿರ್ಮಿಸಲು ಸಾಧ್ಯವೇ..? ತಿಂಡಿ ತಿನ್ನುವ ವೇಳೆ ಇರುವ ಇವರುಗಳ ಸ್ನೇಹ, ಊಟದ ವೇಳೆಗೆ ಮಾಯವಾದರೂ ಅಚ್ಚರಿ ಇಲ್ಲ’ ಎಂದು ಬಿಜೆಪಿ ಕಿಡಿಕಾರಿದೆ.

ಇವನ್ನೂ ಓದಿ...

ಚುನಾವಣೆ ಸನಿಹದಲ್ಲಿ ‘ಕೈ’ ಕಮಲ ಮಿತ್ರರ ಹುಡುಕಾಟ

Explainer | ಮತ್ತೆ ಮತ್ತೆ ಮೈತ್ರಿ ರಾಜಕಾರಣ

ರಾಜ್ಯದಲ್ಲಿ ‘ಐಎಎಸ್ ಜೀತ ಪದ್ಧತಿ’: ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT