ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಕೃಷ್ಣ ಬೈರೇಗೌಡ

Published 9 ಮಾರ್ಚ್ 2024, 12:26 IST
Last Updated 9 ಮಾರ್ಚ್ 2024, 12:26 IST
ಅಕ್ಷರ ಗಾತ್ರ

ಮಂಗಳೂರು: 'ಲೋಕಸಭೆ ಚುನಾವಣೆಯಲ್ಲಿ ಈ ಸಲ ನಾನು ಸ್ಪರ್ಧಿಸುವುದಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, 'ಮನಸ್ಸಿಲ್ಲದಿದ್ದರೂ, 2009ರಲ್ಲಿ ಪಕ್ಷದ ಸೂಚನೆ ಮೇರೆಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೆ. 2019ರಲ್ಲಿ ಪಕ್ಷದ ಸೂಚನೆಗೆ ಗೌರವ ಕೊಟ್ಟು ಕೊನೇಯ ಕ್ಷಣದಲ್ಲಿ ಸ್ಪರ್ಧಿಸಿದ್ದೆ. ಎರಡೂ ಸಲವೂ ಸೋತಿದ್ದೇನೆ. ಪದೇ ಪದೇ ಈ ರೀತಿ ಒತ್ತಡ ನೀಡುವುದು ಸರಿಯಲ್ಲ. ಈಗಾಗಲೇ ಪಕ್ಷದ ವರಿಷ್ಠರಿಗೂ‌ ಇದೇ ಅಭಿಪ್ರಾಯ ತಿಳಿಸಿದ್ದು, ಅವರು ಇದನ್ನು ಗೌರವಿಸಿದ್ದಾರೆ ಎಂದು ಭಾವಿಸಿದ್ದೇನೆ’ ಎಂದರು.

‘ಕೆಲವು ಕ್ಷೇತ್ರಗಳಲ್ಲಿ ಸಚಿವರನ್ನು ಕಣಕ್ಕಿಳಿಸಿದರೆ ಪಕ್ಷಕ್ಕೆ ಪ್ರಯೋಜನವಾಗುತ್ತದೆ ಎಂಬ ಅಭಿಪ್ರಾಯವನ್ನು ಕಾರ್ಯಕರ್ತರು ಹಾಗೂ ಕೆಲವು ಮುಖಂಡರು ವ್ಯಕ್ತಪಡಿಸಿದ್ದಾರೆ. ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಸಂಪುಟದಲ್ಲಿರುವ ಸಚಿವರುಗಳು ಸ್ಪರ್ಧೆ ಮಾಡಬೇಕು ಬೇಡವೋ ಎನ್ನುವುದನ್ನು ಸಿಎಂ ನಿರ್ಧರಿಸುತ್ತಾರೆ’ ಎಂದು ತಿಳಿಸಿದರು.

ವಿಧಾನಸೌಧದಲ್ಲಿ‌ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ ಪ್ರಕರಣ ಹಾಗೂ ಬೆಂಗಳೂರಿನ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯ ಕುರಿತು ಪ್ರತಿಕ್ರಿಯಿಸಿದ ಅವರು, ‘ ತನಿಖೆಯಲ್ಲಿ ಕಂಡು ಬರುವ ವಾಸ್ತವಾಂಶಗಳ ಆಧಾರದಲ್ಲಿ ಸರ್ಕಾರ ಕ್ರಮವಹಿಸುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಬಿಜೆಪಿಯವರು ಎಲ್ಲಾ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. ಭಾವನಾತ್ಮಕ ವಿಚಾರ ಮುಂದಿಟ್ಟು ಸಮಾಜವನ್ನು ಒಡೆಯುತ್ತಾರೆ. ಅವರ ಹೇಳಿಕೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಈ ಘಟನೆಗಳು ಬಿಜೆಪಿಗೆ ಚುನಾವಣಾ ವಿಷಯವಾಗಬಹುದು. ಆದರೆ ನಮಗೆ ದೇಶದಲ್ಲಿ ಅಗತ್ಯವಸ್ತುಗಳ ದರ ಏರಿಕೆ , ನಿರುದ್ಯೋಗ ಸಮಸ್ಯೆಗಳೇ ಚುನಾವಣೆಯ ವಿಚಾರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT