ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ಅಭ್ಯರ್ಥಿ ಆಯ್ಕೆಗೆ ಮತ್ತೊಮ್ಮೆ ಸಮೀಕ್ಷೆ– ಡಿ.ಕೆ. ಶಿವಕುಮಾರ್

Published : 14 ಫೆಬ್ರುವರಿ 2024, 15:55 IST
Last Updated : 14 ಫೆಬ್ರುವರಿ 2024, 15:55 IST
ಫಾಲೋ ಮಾಡಿ
Comments

ಬೆಂಗಳೂರು: ‘ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸುತ್ತೇವೆ. ನಂತರ ದೆಹಲಿಯಲ್ಲಿ ಸಭೆ ಸೇರಿ ಚರ್ಚೆ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣೆ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ‘ಪಕ್ಷದ ವೀಕ್ಷಕರು, ಜಿಲ್ಲಾ ಉಸ್ತುವಾರಿ ಸಚಿವರು, ಕೆಲವು ಕಾರ್ಯಕರ್ತರು ಸಲ್ಲಿಸಿದ್ದ ವರದಿ ಮತ್ತು ನಮ್ಮ ಸಮೀಕ್ಷೆಯ ವರದಿಗಳನ್ನು ಪರಾಮರ್ಶೆ ಮಾಡಿದ್ದೇವೆ. ಮತ್ತೊಂದು ಸುತ್ತಿನ ಸಮೀಕ್ಷೆಗೆ ಸೂಚಿಸಿದ್ದೇವೆ. ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ದೆಹಲಿಯಲ್ಲಿ ಮುಂದಿನ ಸುತ್ತಿನ ಸಭೆ ನಡೆಯಲಿದೆ. ಬಜೆಟ್ ಅಧಿವೇಶನ ಇದ್ದುದರಿಂದ ಈ ಬಾರಿ ಬೆಂಗಳೂರಿನಲ್ಲೇ ಸಭೆ ನಡೆಸಿದ್ದೇವೆ’ ಎಂದರು.

‘ಇದೇ ತಿಂಗಳ ಒಳಗಾಗಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಆಗಲಿದೆಯೇ’ ಎಂಬ ಪ್ರಶ್ನೆಗೆ, ‘ಆದಷ್ಟು ಬೇಗ ಅಂತಿಮಗೊಳಿಸಬೇಕು. ಶೇ 50ರಷ್ಟು ಅಭ್ಯರ್ಥಿಗಳಿಗಾದರೂ ಕೆಲಸ ಆರಂಭಿಸಲು ಸೂಚನೆ ನೀಡಬೇಕಿದೆ’ ಎಂದರು.

ಎಷ್ಟು ಕ್ಷೇತ್ರಗಳಲ್ಲಿ ಒಬ್ಬ ಆಕಾಂಕ್ಷಿ ಇದ್ದಾರೆ ಎಂಬ ಪ್ರಶ್ನೆಗೆ, ‘ಆ ವಿಚಾರವಾಗಿ ಇನ್ನೂ ಚರ್ಚೆ ಮಾಡಿಲ್ಲ. ನಾವು ಕೇವಲ ನಮಗೆ ಬಂದಿರುವ ವರದಿಗಳು, ಅಭಿಪ್ರಾಯದ ಬಗ್ಗೆ ಚರ್ಚೆ ಮಾಡಿದ್ದೇವೆ’ ಎಂದರು.

ಎಐಸಿಸಿಗೆ ಕಳುಹಿಸಿರುವ ಪಟ್ಟಿ ಬಗ್ಗೆ ಗೊಂದಲವಿದೆಯೇ ಎಂದು ಕೇಳಿದಾಗ, ‘ಇದೆಲ್ಲವೂ ಸುಳ್ಳು, ನಾವು ಎಐಸಿಸಿಗೆ ಯಾವುದೇ ಪಟ್ಟಿ ನೀಡಿಲ್ಲ. ಮುಖ್ಯಮಂತ್ರಿಗೆ ವಿವಿಧ ವರದಿಗಳು, ಅಭಿಪ್ರಾಯಗಳ ಕುರಿತ ಅಧಿಕೃತ ಪಟ್ಟಿಯನ್ನು ಇವತ್ತಷ್ಟೇ ನೀಡಿದ್ದೇನೆ. ನಾವು ನಮ್ಮ ಪಟ್ಟಿಯನ್ನು ಗೌಪ್ಯವಾಗಿಡಬೇಕು. ಆ ಕೆಲಸ ಮಾಡುತ್ತೇವೆ’ ಎಂದರು.

ಸಚಿವರ ಸ್ಪರ್ಧೆ ಬಗ್ಗೆ ಕೇಳಿದಾಗ, ‘ರಾಜಕೀಯದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಎಲ್ಲರಿಗೂ ಅವಕಾಶ ಇರುತ್ತದೆ. ಪಕ್ಷ ಗೆಲ್ಲುವುದು ಮುಖ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT