ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ‘ಬಾಲ ರಾಮ’ನ ಪ್ರಭಾವಳಿಯಲ್ಲಿ ದಾಖಲೆಯ ಕನಸು

Published 6 ಏಪ್ರಿಲ್ 2024, 0:07 IST
Last Updated 6 ಏಪ್ರಿಲ್ 2024, 0:07 IST
ಅಕ್ಷರ ಗಾತ್ರ

ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೂ ಬಿಜೆಪಿಯ ಬೆಳವಣಿಗೆಗೂ ಅವಿನಾಭಾವ ನಂಟು. 1984ರಲ್ಲಿ ಕೇವಲ ಎರಡು ಸಂಸದರನ್ನು ಹೊಂದಿದ್ದ ಬಿಜೆಪಿ, 2019ರ ಲೋಕಸಭಾ ಚುನಾವಣೆಯ ವೇಳೆಗೆ ಬರೋಬ್ಬರಿ 303 ಸ್ಥಾನ ಗಳಿಸುವವರೆಗೂ ಅಯೋಧ್ಯೆಯ ರಾಮ ಜನ್ಮಭೂಮಿ ಹೋರಾಟದ ಪ್ರಭಾವವನ್ನು ಕಾಣಬಹುದು. ಈ ಬಾರಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿ, ‘ಬಾಲ ರಾಮ’ನ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಳಿಕ ಎದುರಾಗಿರುವ ಲೋಕಸಭಾ ಚುನಾವಣೆಯಲ್ಲಿ, ರಾಮನ ಪ್ರಭಾವಳಿಯಲ್ಲಿ ಮತ್ತಷ್ಟು ಬಲ ಹೆಚ್ಚಿಸಿಕೊಂಡು ತನ್ನ ಸಾರ್ವಕಾಲಿಕ ಸಾಧನೆಯ ದಾಖಲೆಯನ್ನು ಬರೆಯುವ ಕನಸಿನಲ್ಲಿ ಕಮಲ ಪಾಳಯ ಇದೆ.

ಜನವರಿ 22ರಂದು ನಡೆದ ‘ಬಾಲ ರಾಮ’ನ ವಿಗ್ರಹದ ಪ್ರತಿಷ್ಠಾಪನೆ ಕಾರ್ಯಕ್ರಮದ ನೇತೃತ್ವವನ್ನು ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿಯವರೇ ವಹಿಸಿದ್ದರು. ಮಂದಿರ ಉದ್ಘಾಟನೆಯ ಜತೆಯಲ್ಲೇ ಮನೆ ಮನೆಗೂ ‘ಮಂತ್ರಾಕ್ಷತೆ’ ವಿತರಣೆ, ದೇವಾಲಯಗಳ ಸ್ವಚ್ಛತಾ ಅಭಿಯಾನ, ಮನೆ ಮನೆಗಳಲ್ಲೂ ದೀಪ ಬೆಳಗಿಸುವುದು, ಮನೆಗಳು, ಕಟ್ಟಡಗಳ ಮೇಲೆ ಭಗವಾಧ್ವಜ, ಹನುಮ ಧ್ವಜ ಮತ್ತು ಶ್ರೀರಾಮನ ಚಿತ್ರವುಳ್ಳ ಧ್ವಜಗಳನ್ನು ಹಾರಿಸುವ ಅಭಿಯಾನದ ಮೂಲಕ ‘ಬಾಲ ರಾಮ’ನ ಪ್ರತಿಷ್ಠಾಪನೆಯನ್ನು ಲೋಕಸಭಾ ಚುನಾವಣೆಯಲ್ಲಿ ಮತ ಕೊಯ್ಲಿಗೆ ಪೂರಕವಾಗಿ ಬಳಸಿಕೊಳ್ಳುವ ವ್ಯವಸ್ಥಿತವಾದ ತಂತ್ರಗಾರಿಕೆಯನ್ನು ಬಿಜೆಪಿ ಮತ್ತು ಸಂಘ ಪರಿವಾರ ಮಾಡಿದ್ದವು.

ಮನೆಗಳು, ಕಟ್ಟಡಗಳು, ಗ್ರಾಮ ಮತ್ತು ನಗರಗಳ ಪ್ರಮುಖ ವೃತ್ತಗಳಲ್ಲಿನ ಗಗನ ಚುಂಬಿ ಧ್ವಜ ಸ್ತಂಭಗಳಲ್ಲಿ ಈಗಲೂ ಹಾರಾಡುತ್ತಿರುವ ಕೇಸರಿ ಬಣ್ಣದ ತರಹೇವಾರಿ ಬಾವುಟಗಳು ರಾಮ ಮಂದಿರ ಉದ್ಘಾಟನೆಯ ನೆನಪಿನ ಪ್ರಭಾವವು ಲೋಕಸಭಾ ಚುನಾವಣೆಯ ಮೇಲೆ ಬೀರಬಹುದಾದ ಪ್ರಭಾವವನ್ನು ಸೂಚಿಸುವಂತಿದೆ. 15ನೇ ಲೋಕಸಭೆಯ ಕೊನೆಯ ಅಧಿವೇಶನದ ಅಂತಿಮ ದಿನವಾದ ಫೆಬ್ರುವರಿ 10ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಹಲವರು ರಾಮ ಮಂದಿರ ಉದ್ಘಾಟನೆ ಮತ್ತು ಅದರ ಹಿಂದಿನ ಘಟನಾವಳಿಗಳನ್ನು ಮೆಲುಕು ಹಾಕುವ ಮೂಲಕ ಈ ವಿಚಾರವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸುಳಿವು ನೀಡಿದ್ದರು. ಈಗ ರಾಮ ಮಂದಿರವನ್ನು ಮುಂದಿಟ್ಟುಕೊಂಡು ಧರ್ಮದ ಆಧಾರದಲ್ಲಿ ಮತಗಳ ಧ್ರುವೀಕರಣದ ಯೋಜನೆ ಕಮಲ ಪಾಳಯದಲ್ಲಿ ಸಿದ್ಧವಾಗುತ್ತಿದೆ. 

ಶತಮಾನಗಳ ಇತಿಹಾಸವಿರುವ ಅಯೋಧ್ಯೆ ರಾಮ ಜನ್ಮಭೂಮಿ ವಿವಾದವು 1986ರಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವು, ಬಾಬರಿ ಮಸೀದಿಯ ಬಾಗಿಲು ತೆರೆಸಿ ಹಿಂದೂಗಳಿಗೆ ಶ್ರೀರಾಮನ ಪೂಜೆಗೆ ಅವಕಾಶ ಕಲ್ಪಿಸಿದ ಬಳಿಕ ಮತ್ತೊಂದು ಮಗ್ಗುಲಿಗೆ ಹೊರಳಿತ್ತು. ಈ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ ಬಿಜೆಪಿ, ರಾಮ ಜನ್ಮಭೂಮಿ ಹೋರಾಟವನ್ನು ವಿಸ್ತರಿಸುವ ಕೆಲಸ ಮಾಡಿತ್ತು. ಅದರ ಫಲವಾಗಿ 1989ರ ಚುನಾವಣೆಯಲ್ಲಿ 85 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

1990ರಲ್ಲಿ ಲಾಲ್‌ ಕೃಷ್ಣ ಅಡ್ವಾಣಿ ಅವರು ಸೋಮನಾಥದಿಂದ ಅಯೋಧ್ಯೆವರೆಗೆ ನಡೆಸಿದ್ದ ‘ರಥ ಯಾತ್ರೆ’ಯು ಬಿಜೆಪಿಯ ಬಲವನ್ನು ಮತ್ತಷ್ಟು ಹೆಚ್ಚಿಸಿತ್ತು. 1991ರ ಚುನಾವಣೆಯಲ್ಲಿ ಲೋಕಸಭೆಯಲ್ಲಿ ಕಮಲ ಪಾಳಯದ ಬಲ 120ಕ್ಕೆ ಜಿಗಿದಿತ್ತು. ನಂತರ ಏರುಗತಿಯಲ್ಲೇ ಇದ್ದ ಬಿಜೆಪಿಯ ಸಾಧನೆ, 1998ರ ಚುನಾವಣೆಯಲ್ಲಿ 182 ಸ್ಥಾನ ಗಳಿಸುವವರೆಗೂ ಸಾಗಿತ್ತು. ಆ ಬಳಿಕದ ಎರಡು ಚುನಾವಣೆಗಳಲ್ಲಿ ಬಿಜೆಪಿಯ ಗಳಿಕೆ ತುಸು ಇಳಿಮುಖವಾಗಿತ್ತು. 2009ರ ಚುನಾವಣೆಯಲ್ಲಿ ಬಿಜೆಪಿ 116 ಸ್ಥಾನಗಳಿಗೆ ಕುಸಿದಿತ್ತು. 2014ರ ಚುನಾವಣೆಯಲ್ಲಿ 282 ಸ್ಥಾನ ಗೆದ್ದು ಅಧಿಕಾರ ಹಿಡಿದಿದ್ದ ಬಿಜೆಪಿ, 2019ರ ಚುನಾವಣೆಯಲ್ಲಿ 303 ಸ್ಥಾನಗಳೊಂದಿಗೆ ಮತ್ತಷ್ಟು ಎತ್ತರಕ್ಕೆ ಏರಿ ತ್ತು.

ಅಯೋಧ್ಯೆ ವಿವಾದದ ಕುರಿತು 2019ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ, ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಪಾಲ್ಗೊಳ್ಳುವಿಕೆಗೆ ನೀಡಿದ್ದ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿದೆ. ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯಿಂದ ಉದ್ಘಾಟನೆಯವರೆಗೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಖುದ್ದಾಗಿ ಮುಂದಾಳತ್ವ ವಹಿಸಿದ್ದ ಮೋದಿ ಅವರನ್ನು ‘ಹಿಂದೂ ಹೃದಯ ಸಾಮ್ರಾಟ’ ಎಂದು ಬಿಂಬಿಸುವ ಕೆಲಸವನ್ನು ಬಿಜೆಪಿ ಜೋರಾಗಿಯೇ ಮಾಡುತ್ತಿದೆ. ಈ ತಂತ್ರಗಾರಿಕೆ ಬಿಜೆಪಿ, ಕೇಂದ್ರದಲ್ಲಿ ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಹಿಡಿಯಲು ನೆರವಾಗಲಿದೆ ಎಂಬ ವಿಶ್ವಾಸ ಕಮಲ ಪಾಳಯದ್ದು.

ಕಾಂಗ್ರೆಸ್‌ ಪಕ್ಷವು ರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿತ್ತು. ಡಿಎಂಕೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳೂ ಅದೇ ನಿಲುವನ್ನು ತಳೆದಿದ್ದವು. ‘ಬಾಲ ರಾಮ’ ವಿಗ್ರಹದ ಪ್ರತಿಷ್ಠಾಪನಾ ಕಾರ್ಯಕ್ರಮದಿಂದ ದೂರ ಉಳಿದಿದ್ದನ್ನು ಹಿಂದೂ ವಿರೋಧಿ ನಿಲುವು ಎಂದು ಬಿಂಬಿಸಿ ಮತಗಳ ಧ್ರುವೀಕರಣವನ್ನು ಮತ್ತಷ್ಟು ಹೆಚ್ಚಿಸುವ ಕಾರ್ಯತಂತ್ರವೂ ಬಿಜೆಪಿಯ ಬತ್ತಳಿಕೆಯಲ್ಲಿದೆ.

ಚುನಾವಣಾ ಬಾಂಡ್‌ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯ ಆಪಾದನೆ, ಬೆಲೆ ಏರಿಕೆಯ ಬಿಸಿಯಂತಹ ಸವಾಲುಗಳನ್ನು ಮೀರಿ ‘ಹಿಂದುತ್ವ’ದ ಕಾರ್ಯಸೂಚಿಯಲ್ಲೇ ಮತ್ತೆ ಅಧಿಕಾರಕ್ಕೇರಲು ‘ಬಾಲ ರಾಮ’ನ ಪ್ರಭಾವಳಿ ನೆರವಾಗಬಹುದು ಎಂಬ ನಂಬಿಕೆಯಲ್ಲಿ ಬಿಜೆಪಿ ಇದೆ.

‘ಬಾಲ ರಾಮನ ಪ್ರತಿಷ್ಠಾಪನೆಯು ಈ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ತಂದುಕೊಡಬಹುದು’ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇತ್ತೀಚೆಗೆ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದರು. ‘ಬಾಲ ರಾಮ’ನ ಪ್ರಭಾವಳಿ ಚುನಾವಣಾ ರಾಜಕೀಯದೊಳಕ್ಕೆ ಸದ್ದು ಮಾಡಲಿದೆ ಎಂಬುದು ಸ್ವಾಮೀಜಿಯವರ ಹೇಳಿಕೆಯೊಳಗೆ ಅಡಗಿದ್ದಂತಿದೆ. ‘ಮಂದಿರ ರಾಜಕೀಯ’ ಈ ಬಾರಿಯೂ ಬಿಜೆಪಿಯ ಕೈ ಹಿಡಿಯಬಹುದೆ? ಇಲ್ಲವೆ ಎಂಬ ಕುತೂಹಲ ಗರಿಗೆದರಿದೆ.

.
.

ಪ್ರತ್ಯಸ್ತ್ರಗಳ ಕೊರತೆಯ ಸವಾಲು

ಕಾಂಗ್ರೆಸ್‌ ಮತ್ತು  ಪ್ರಮುಖ ಪ್ರಾದೇಶಿಕ ಪಕ್ಷಗಳು ರಾಮ ಮಂದಿರದ ಉದ್ಘಾಟನೆಯಿಂದ ದೂರ ಉಳಿದಿರುವ ವಿಷಯವನ್ನು ಚುನಾವಣಾ ಅಂಗಳದಲ್ಲಿ ಕೆದಕಿ ಲಾಭ ಪಡೆಯುವ ಬಿಜೆಪಿ ಪ್ರಯತ್ನಕ್ಕೆ ವಿರೋಧ ಪಕ್ಷಗಳ ಮೈತ್ರಿಕೂಟ ಈವರೆಗೂ ಬಲವಾದ ಪ್ರತ್ಯಸ್ತ್ರಗಳನ್ನು ಬಳಸಿಲ್ಲ.

ಹಿಂದಿ ಭಾಷಿಕರು ಹೆಚ್ಚಾಗಿರುವ ಉತ್ತರ ಭಾರತದಲ್ಲಿ ‘ಬಾಲ ರಾಮ’ನ ಹೆಸರಿನಲ್ಲಿ ಬಿಜೆಪಿ ಹೆಚ್ಚು ಲಾಭ ಪಡೆಯುವ ಸಾಧ್ಯತೆಗಳಿವೆ. ಅದರ ಜತೆಯಲ್ಲೇ ದಕ್ಷಿಣದ ರಾಜ್ಯಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವುದಕ್ಕೂ ‘ಬಾಲ ರಾಮ’ನ ಪ್ರಭಾವಳಿಯನ್ನು ಬಳಸಿಕೊಳ್ಳುವ ಕಾರ್ಯಸೂಚಿ ಬಿಜೆಪಿಯದ್ದು.

ಪ್ರಾದೇಶಿಕ ಅಸ್ಮಿತೆ ಮತ್ತು ದ್ರಾವಿಡ ರಾಜಕಾರಣವನ್ನು ಮುಂದಿಟ್ಟುಕೊಂಡು ಬಿಜೆಪಿಯ ಧರ್ಮ ಕೇಂದ್ರಿತ ರಾಜಕಾರಣವನ್ನು ಹಿಮ್ಮೆಟ್ಟಿಸಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ಈ ಜಿದ್ದಾಜಿದ್ದಿಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಚುನಾವಣಾ ಫಲಿತಾಂಶವೇ ಹೇಳಬೇಕಿದೆ. ಗೊಂದಲಗಳೂ ಇವೆ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಮತ್ತು ಮಂದಿರ ಉದ್ಘಾಟನೆಯ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರ ಮಧ್ಯೆ ಗೊಂದಲಗಳೂ ಇವೆ. ಎಐಸಿಸಿ ಮಟ್ಟದ ನಾಯಕರು ಈ ವಿಷಯದಿಂದ ಅಂತರ ಕಾಯ್ದುಕೊಂಡಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕರ್ನಾಟಕ ಕಾಂಗ್ರೆಸ್‌ನ ಹಲವು ನಾಯಕರು ರಾಮ ಮಂದಿರ ನಿರ್ಮಾಣದಲ್ಲಿ ಕಾಂಗ್ರೆಸ್‌ನ ಕೊಡುಗೆಯೂ ಇದೆ ಎಂದು ಪ್ರತಿಪಾದಿಸುತ್ತಿದ್ದಾರೆ.

‘ನಾನೂ ರಾಮನ ಭಕ್ತ’ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದನಿಗೂಡಿಸಿದ್ದಾರೆ. ಅಯೋಧ್ಯೆಯಲ್ಲಿ ‘ಬಾಲ ರಾಮ’ ವಿಗ್ರಹ ಪ್ರತಿಷ್ಠಾಪನೆ ದಿನ ರಾಜ್ಯ ಸರ್ಕಾರದ ವತಿಯಿಂದ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೂ ನಡೆದಿದೆ. ಕಾಂಗ್ರೆಸ್‌ ಪಕ್ಷದ ಶಾಸಕರು ನಾಯಕರು ಕೂಡ ಸಂಭ್ರಮಾಚರಣೆಗಳನ್ನು ನಡೆಸಿದ್ದಾರೆ.

ಮತ ಸೆಳೆಯಲು ಅಯೋಧ್ಯೆ ಪ್ರವಾಸ

ಅಯೋಧ್ಯೆಯಲ್ಲಿ ಜನವರಿ 22ರಂದು ‘ಬಾಲ ರಾಮ’ನ ವಿಗ್ರಹ ಪ್ರತಿಷ್ಠಾಪನೆ ಆದ ಬಳಿಕ ಅಲ್ಲಿಗೆ ಭೇಟಿನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ‘ಅಯೋಧ್ಯೆ ಪ್ರವಾಸಕ್ಕೆ ತೆರಳುವವರಿಗೆ ನೆರವಾಗಿ’ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇದನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುವಂತೆ ಪರೋಕ್ಷವಾಗಿ ಸೂಚನೆ ನೀಡಿದ್ದರು. ಆಯೋಧ್ಯೆ ಶ್ರೀ ರಾಮ ಜನ್ಮಭೂಮ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಕಾರ ನಿತ್ಯವೂ ಅಯೋಧ್ಯೆಗೆ 1 ಲಕ್ಷದಿಂದ 1.5 ಲಕ್ಷ ಜನರು ಭೇಟಿ ನೀಡುತ್ತಿದ್ದಾರೆ. ರಾಮ ಭಕ್ತರಿಗೆ ನೆರವಾಗಿ ಅವರ ಮತ ಸೆಳೆಯುವ ಕಸರತ್ತುಗಳೂ ವಿವಿಧೆಡೆ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT