ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls 2024 | ಮತ ‘ಕವಚ’ ಆಗಲಿದೆಯೇ ರೈಲ್ವೆ ‘ಅಮೃತ’ ಸ್ಪರ್ಶ?

Published 3 ಏಪ್ರಿಲ್ 2024, 23:48 IST
Last Updated 3 ಏಪ್ರಿಲ್ 2024, 23:48 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯರ ದಿನನಿತ್ಯದ ಬದುಕಿನ ಜೀವನಾಡಿ ‘ರೈಲ್ವೆ’. ರಾಷ್ಟ್ರದಲ್ಲಿ ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ 2.5 ಕೋಟಿಯಷ್ಟು ಇದೆ. ರೈಲು ಸೇವೆ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಜಾಗತಿಕ ಮಾನದಂಡಗಳಿಗೆ ಅನುಸಾರವಾಗಿ ಆಧುನೀಕರಿಸುವ ದೀರ್ಘಾವಧಿ ದೃಷ್ಟಿಕೋನದ ಹಲವು ಯೋಜನೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿದೆ. ಈ ಉಪಕ್ರಮಗಳು ಲೋಕಸಭಾ ಚುನಾವಣೆಯಲ್ಲಿ ಜನರ ಮೇಲೆ ಪ್ರಭಾವಿಸಿ ಮತಗಳಾಗಿ ‘ಪರಿವರ್ತನೆ’ಯಾಗಲಿದೆ ಎಂಬುದು ಬಿಜೆಪಿಯ ಅಪೇಕ್ಷೆ.

ಬಿಜೆಪಿಗೆ ‘ಹಿಂದಿ ನೆಲದ ಪಕ್ಷ’ ಎಂಬ ಹಣೆಪಟ್ಟಿ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಾಳಯವನ್ನು ಸುಲಭದಲ್ಲಿ ಗೆಲುವಿನ ದಡ ಮುಟ್ಟಿಸಿದ್ದೇ ಈ ಸೀಮೆಯ ಜನರು. ಉತ್ತರ ಭಾರತದ ಜನರಿಗೆ ರೈಲು ನೆಚ್ಚಿನ ಸಾರಿಗೆ. ಉತ್ತಮ ಪ್ರಯಾಣ ಸೇವೆ ಒದಗಿಸುವ ಉದ್ದೇಶದ ಜತೆಗೆ ಮತಗಳ ಮೇಲೆ ಕಣ್ಣಿಟ್ಟು ರೈಲ್ವೆ ಅಭಿವೃದ್ಧಿಯ ‘ರೈಲು ಗಾಡಿ’ಯನ್ನು ಮತ್ತಷ್ಟು ಮುಂದಕ್ಕೆ ಒಯ್ಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಕಳೆದೊಂದು ದಶಕದಲ್ಲಿ ರೈಲು ಪ್ರಯಾಣ ದರ ಹೆಚ್ಚಳ ಆಗಿಲ್ಲ. ಈ ಕೆಲಸಗಳು ರಕ್ಷಾ ‘ಕವಚ’ವಾಗಿ ಚುನಾವಣೆಯಲ್ಲಿ ‘ಅಮೃತ’ ಉಣಿಸಬಹುದು ಎಂಬ ನಿರೀಕ್ಷೆ ಕಮಲ ಪಾಳಯದ್ದು. 

ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಚಾಲನೆ ನೀಡಿದ್ದರು. ಸುಮಾರು 15 ದಿನಗಳ ವರೆಗೆ ‘ಲೋಕಾರ್ಪಣೆ ಪರ್ವ’ ಮುಂದುವರಿದಿತ್ತು. ನಿತ್ಯವೂ ಒಂದಿಲ್ಲೊಂದು ರೈಲು ಅಭಿವೃದ್ಧಿ ಯೋಜನೆ ಇದ್ದೇ ಇರುತ್ತಿತ್ತು. ಈ ಯೋಜನೆಗಳು ಜನರ ಮನಸ್ಸಿಗೆ ‘ಬುಲೆಟ್‌’ ರೈಲಿನಂತೆ ನುಗ್ಗಿ ಮತಗಳಾಗಿ ಪರಿವರ್ತನೆಯಾಗಲಿದೆ ಎಂಬ ಲೆಕ್ಕಾಚಾರ ಇದರ ಹಿಂದಿತ್ತು. 

ಬುಲೆಟ್‌ ರೈಲು, ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಂತಹ ಯೋಜನೆಗಳನ್ನು ರಾಷ್ಟ್ರೀಯ ಪ್ರತಿಷ್ಠೆಯ ಭಾವನೆಗಳನ್ನು ಹೆಚ್ಚಿಸಲು ಮೋದಿ ಸರ್ಕಾರ ಬಳಸಿಕೊಂಡಿದೆ. ‘ವಂದೇ ಭಾರತ್‌’, ‘ಕವಚ’, ‘ಅಮೃತ ಭಾರತ ನಿಲ್ದಾಣ ಯೋಜನೆ’ ಪ್ರಧಾನಿ ಅವರ ಅಚ್ಚುಮೆಚ್ಚಿನ ಯೋಜನೆಗಳಾಗಿವೆ. ತಮ್ಮ ಹೆಚ್ಚಿನ ಚುನಾವಣಾ ಭಾಷಣಗಳಲ್ಲಿ ಈ ಯೋಜನೆಗಳ ಕುರಿತು ಪ್ರಸ್ತಾಪಿಸುವ ಪರಿಪಾಟವನ್ನು ಅನುಸರಿಸಿಕೊಂಡು ಬಂದಿದ್ದಾರೆ.

‘ಯುಪಿಎ ಅವಧಿಗೆ ಹೋಲಿಸಿದರೆ ಎನ್‌ಡಿಎ ಅವಧಿಯಲ್ಲಿ ರೈಲ್ವೆ ಮೂಲಸೌಕರ್ಯ ಕಾಮಗಾರಿಗಳು ಹತ್ತು ಪಟ್ಟು ಹೆಚ್ಚಾಗಿವೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಪದೇ ಪದೇ ಹೇಳುತ್ತಾರೆ. ಯುಪಿಎ ಅವಧಿಯಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಪ್ರತಿವರ್ಷ ₹850 ಕೋಟಿ ನೀಡಲಾಗುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಮೊತ್ತ ₹6 ಸಾವಿರ ಕೋಟಿಗೆ ಏರಿದೆ’ ಎಂದು ಅವರು ಹತ್ತಾರು ಬಾರಿ ಹೇಳಿದ್ದಾರೆ. ರೈಲ್ವೆ ವಿದ್ಯುದೀಕರಣ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ತಂತ್ರಜ್ಞಾನ ಮೇಲ್ದರ್ಜೆಗೆ ಏರಿಸಿದ್ದರಿಂದ ಅ‍ಪಘಾತ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೊಂದೆಡೆ, ಪ್ರಯಾಣಿಕರ ಸವಲತ್ತುಗಳನ್ನು ಸದ್ದಿಲ್ಲದೆ ಕಿತ್ತುಕೊಳ್ಳಲಾಗಿದೆ. ರೈಲ್ವೆಯ ಭಯಾನಕ ಆರ್ಥಿಕ ಸ್ಥಿತಿ ಬಗ್ಗೆ ಸಿಎಜಿ ವರದಿಯಲ್ಲಿ ಬೊಟ್ಟು ಮಾಡಿ ತೋರಿಸಲಾಗಿದೆ. ರೈಲ್ವೆಯಲ್ಲಿ ಸುಮಾರು 3 ಲಕ್ಷದಷ್ಟು ಹುದ್ದೆಗಳು ಭರ್ತಿಯಾಗಿಲ್ಲ. 

‘ಶ್ರೀಮಂತರನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋದಿ ಸರ್ಕಾರ ರೈಲ್ವೆ ಯೋಜನೆಗಳನ್ನು ರೂಪಿಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರ ರ್‍ಯಾಲಿಗಳಲ್ಲಿ ಹೇಳುತ್ತಿದ್ದಾರೆ. ಬಡವರ ಕಾಳಜಿಯ ಈ ‘ದಾಳ’ ಒಂದಿಷ್ಟು ಮತಗಳನ್ನು ತಂದುಕೊಡಬಲ್ಲದು ಎಂಬುದು ಅವರ ಹವಣಿಕೆ. ಈ ವಿಷಯದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿದೆ. ಬಿಜೆಪಿ ‘ರೈಲ್ವೆಯ ಅಮೃತ ಕಾಲ’ ಎಂದರೆ, ಕಾಂಗ್ರೆಸ್‌ ‘ವಿನಾಶ ಕಾಲ’ ಎಂದು ಜರೆಯುತ್ತಿದೆ. ಆದರೆ, ಈ ವಿಚಾರವು ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎನ್ನಬಹುದು. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT