ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | 21 ಕ್ಷೇತ್ರಗಳಿಗೆ ‘ಕೈ’ ಅಭ್ಯರ್ಥಿ: ಸ್ಕ್ರೀನಿಂಗ್ ಸಮಿತಿ ಚರ್ಚೆ

Published 11 ಮಾರ್ಚ್ 2024, 16:27 IST
Last Updated 11 ಮಾರ್ಚ್ 2024, 16:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 21 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ (ಸಿಇಸಿ) ಶಿಫಾರಸು ಮಾಡುವ ಕುರಿತಂತೆ ಚರ್ಚಿಸಲು ಎಐಸಿಸಿ ಸ್ಕ್ರೀನಿಂಗ್ ಸಮಿತಿ ಸಭೆ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆಯಿತು.

ಒಟ್ಟು 28 ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಸಿಇಸಿ ಈಗಾಗಲೇ ಪ್ರಕಟಿಸಿದೆ.

‘ಸಂಭವನೀಯ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಎಐಸಿಸಿ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸಿದ್ಧಪಡಿಸಿರುವ  ಪ್ರತ್ಯೇಕ ಪಟ್ಟಿಗಳ ಕುರಿತು ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ. ಅಭ್ಯರ್ಥಿ ಹೆಸರು ಅಂತಿಮಗೊಳಿಸಲು ಬಾಕಿ ಇರುವ ಎಲ್ಲ 21 ಕ್ಷೇತ್ರಗಳಿಗೂ ಒಂದೊಂದು ಹೆಸರು ಶಿಫಾರಸು ಮಾಡಲು ಸಮಿತಿ ನಿರ್ಧರಿಸಿದೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಉಡುಪಿ‌–ಚಿಕ್ಕಮಗಳೂರು, ಚಿಕ್ಕೋಡಿ, ಮೈಸೂರು, ಚಿತ್ರದುರ್ಗ, ರಾಯಚೂರು ಮತ್ತು ಬಳ್ಳಾರಿ ಕ್ಷೇತ್ರಗಳ ಅಭ್ಯರ್ಥಿ ಹೆಸರಿನ ಬಗ್ಗೆ ಗಂಭೀರ ಚರ್ಚೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.  

ಸಮಿತಿಯ ಅಧ್ಯಕ್ಷ ಹರೀಶ್ ಚೌಧರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಮಿತಿ ಸದಸ್ಯರಾದ ಜಿಗ್ನೇಶ್ ಮೇವಾನಿ, ವಿಶ್ವಜಿತ್ ಕದಂ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆಯಲ್ಲಿ ಭಾಗವಹಿಸಿದರು.

ಸುರ್ಜೇವಾಲಾ ಭೇಟಿ ಮಾಡಿದ ಸುಧೀರ್ ಮುರೊಳ್ಳಿ: ಸಭೆಗೂ ಮೊದಲು ಸುರ್ಜೇವಾಲಾ ಅವರನ್ನು ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಸುಧೀರ್ ಮುರೊಳ್ಳಿ ಅವರು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಜೊತೆ ತೆರಳಿ ಭೇಟಿ ಮಾಡಿದರು. ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕೂಡ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಹಿಂದುಳಿದ ವರ್ಗಗಳ ಆ‌ಯೋಗದ ನಿಕಟಪೂರ್ವ ಅಧ್ಯಕ್ಷ, ಸದ್ಯ ಬಿಜೆಪಿಯಲ್ಲಿರುವ ಕೆ. ಜಯಪ್ರಕಾಶ್‌ ಹೆಗ್ಡೆ ಅವ‌ರನ್ನು ಸೆಳೆದುಕೊಂಡು ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ ನೀಡಲು ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಿದ್ದಾರೆ. ಆದರೆ, ತಮಗೇ ಟಿಕೆಟ್‌ ನೀಡಬೇಕು ಎಂದು ಮುರೊಳ್ಳಿ ಬೇಡಿಕೆ ಇಟ್ಟಿದ್ದಾರೆ.

ರಾಜ್ಯದ 7 ಕ್ಷೇತ್ರಗಳ ಸಹಿತ ಒಟ್ಟು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಸಿಇಸಿ ಮಾರ್ಚ್‌ 8ರಂದು ಪ್ರಕಟಿಸಿದೆ. ಎರಡನೇ ಪಟ್ಟಿ ಬಿಡುಗಡೆಗೆ ದೆಹಲಿಯಲ್ಲಿ ಸೋಮವಾರ ಸಂಜೆ ಸಿಇಸಿ ಸಭೆ ನಡೆದಿದೆ. ಈ ಸಭೆಯಲ್ಲಿ ಸಮಿತಿಯ ಸದಸ್ಯರೂ ಆಗಿರುವ ಇಂಧನ ಸಚಿವ ಕೆ.ಜೆ. ಜಾರ್ಜ್‌ ಭಾಗವಹಿಸಿದ್ದಾರೆ. ಆದರೆ, ಈ ಸಭೆಯಲ್ಲಿ ರಾಜ್ಯದ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆ ಇಲ್ಲ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT