ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಡಿಪಿಆರ್‌ಗೆ ತರಾತುರಿಯಲ್ಲಿ ಅನುಮೋದನೆ: ಸಿದ್ದರಾಮಯ್ಯ

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ನಿಂದ ಮಹದಾಯಿ: ಜಲ– ಜನ ಆಂದೋಲನ ಸಮಾವೇಶ
Last Updated 2 ಜನವರಿ 2023, 21:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹದಾಯಿ ಕುರಿತು ಗೆಜೆಟ್‌ ಹೊರಡಿಸಿ 2 ವರ್ಷ 10 ತಿಂಗಳು ಕಳೆದಿದ್ದರೂ ಸುಮ್ಮನೆ ಕುಳಿತಿದ್ದ ಬಿಜೆಪಿ, ನಾವು ಇವತ್ತು ಇಲ್ಲಿ ಹೋರಾಟ ಆರಂಭಿಸಲಿದ್ದೇವೆ ಎನ್ನುವುದು ಗೊತ್ತಾಗುತ್ತಿದ್ದಂತೆ ತರಾತುರಿಯಿಂದ ಡಿಪಿಆರ್‌ಗೆ (ವಿಸ್ತೃತ ಯೋಜನಾ ವರದಿ) ಅನುಮೋದನೆ ನೀಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಮಹದಾಯಿ: ಜಲ– ಜನ ಆಂದೋಲನ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

‘ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿಯೇ ಮಹದಾಯಿ ಯೋಜನೆ ಅನುಷ್ಠಾನಗೊಳಿಸುತ್ತೇನೆಂದು ರಕ್ತದಲ್ಲಿ ಬರೆದುಕೊಡುವುದಾಗಿ ಬಿ.ಎಸ್‌.ಯಡಿಯೂರಪ್ಪ ಇದೇ ಮೈದಾನದಲ್ಲಿ ಹೇಳಿದ್ದರು. ಆದರೆ, ಇದುವರೆಗೆ ಅದು ಸಾಧ್ಯವಾಗಿಲ್ಲ. ಇದನ್ನು ಈ ಭಾಗದ ಜನರ ಮುಂದಿಡಬೇಕು. ಮಹದಾಯಿ ಯೋಜನೆಯನ್ನು ಕೈಗೆತ್ತಿಕೊಂಡು ಹೋರಾಟ ನಡೆಸಬೇಕು. ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಬೇಕೆಂದು 15 ದಿನಗಳ ಹಿಂದೆಯಷ್ಟೇ ನಾವು ದೆಹಲಿಯಲ್ಲಿ ತೀರ್ಮಾನ ಕೈಗೊಂಡಿದ್ದೆವು. ಈ ವಿಷಯ ಗೊತ್ತಾದ ಮೇಲೆಯೇ ಬಿಜೆಪಿಯವರು ಡಿಪಿಆರ್‌ಗೆ ಅನುಮೋದನೆ ನೀಡಿದ್ದಾರೆ’ ಎಂದು ಹರಿಹಾಯ್ದರು.

‘ಮಹದಾಯಿ ಜಲ ನ್ಯಾಯಮಂಡಳಿಯು 2018ರಲ್ಲಿ ತೀರ್ಪು ನೀಡಿತ್ತು, 2020ರಲ್ಲಿ ಗೆಜೆಟ್‌ ಹೊರಡಿಸಲಾಗಿತ್ತು. ಇಷ್ಟು ದಿನಗಳ
ವರೆಗೆ ಏಕೆ ಸುಮ್ಮನಿದ್ರಿ, ನಿದ್ರೆ ಮಾಡುತ್ತಿದ್ದರಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ? ಈಗ ವಿಜಯೋತ್ಸವ ಆಚರಿಸಲು ನಾಚಿಕೆಯಾಗುವುದಿಲ್ಲವೇ’ ಎಂದು ಟೀಕಿಸಿದರು.

‘ಮಹದಾಯಿ ಅನುಷ್ಠಾನಗೊಳಿಸಲು₹ 93 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿತ್ತು. ಯೋಜನೆ ವಿಳಂಬವಾಗಿದ್ದರಿಂದ ಈಗ ಅದು ₹ 1,677 ಕೋಟಿಗೆ ತಲುಪಿದೆ. ಯೋಜನಾ ವೆಚ್ಚದಲ್ಲಿ ಆಗಿರುವ ಹೆಚ್ಚಳವನ್ನು ಯಾರು
ಕೊಡುತ್ತಾರೆ? ಕೇಂದ್ರ ಸರ್ಕಾರ ಕೊಡುತ್ತದೆಯೇ? ರಾಜ್ಯ ಸರ್ಕಾರ ಎಲ್ಲಿಂದ ಇಷ್ಟೊಂದು ಹಣ ತರುತ್ತದೆ, ಇದು ಯಾರಪ್ಪನ ದುಡ್ಡು’ ಎಂದು ಹರಿಹಾಯ್ದರು.

4 ಎಂಜಿನ್‌ ಸರ್ಕಾರದ ವಿರುದ್ಧ ಹೋರಾಟ: ‘ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಮಾತ್ರ ಬಿಜೆಪಿ ಸರ್ಕಾರವಿಲ್ಲ. ಮಹಾರಾಷ್ಟ್ರ, ಗೋವಾದಲ್ಲೂ ಅವರದ್ದೇ ಸರ್ಕಾರವಿದೆ. ಮಹದಾಯಿ ಅನುಷ್ಠಾನಗೊಳಿಸಲು ನಾವು 4 ಎಂಜಿನ್‌ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು, ಚಿತ್ರನಟರು, ಕನ್ನಡ ಸಂಘಟನೆಗಳವರು,
ಜನರು ಏಕೆ ನಿಮ್ಮ ವಿಜಯೋತ್ಸವದಲ್ಲಿ
ಪಾಲ್ಗೊಳ್ಳಲಿಲ್ಲ. ಬಿಜೆಪಿಯವರು ಹೇಳುವುದೆಲ್ಲ ಸುಳ್ಳು ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ನಮಗೆ ಸುಳ್ಳು ಹೇಳುವ ಸರ್ಕಾರ ಬೇಡ’ ಎಂದರು.

ಪಕ್ಷದ ಹಿರಿಯ ನಾಯಕರಾದ ಎಚ್‌.ಕೆ. ಪಾಟೀಲ, ರಣದೀಪ್‌ಸಿಂಗ್‌ ಸುರ್ಜೆವಾಲಾ, ಬಿ.ಕೆ. ಹರಿಪ್ರಸಾದ್, ಕೆ.ಎಚ್‌. ಮುನಿಯಪ್ಪ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT