ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಬೆಲ್ಲ ತಿರಸ್ಕರಿಸಿದ ಕೇರಳ

ಕಳಪೆ ಬೆಲ್ಲ ಜಪ್ತಿ ಮಾಡಿದ ಆಹಾರ ಸುರಕ್ಷತಾ ಅಧಿಕಾರಿಗಳು
Last Updated 15 ಮಾರ್ಚ್ 2021, 20:23 IST
ಅಕ್ಷರ ಗಾತ್ರ

ಮಂಡ್ಯ: ‘ಪಡಿತರ ಯೋಜನೆಯಡಿ ಕೇರಳದಲ್ಲಿ ವಿತರಣೆಯಾಗುತ್ತಿದ್ದ ‘ಮಂಡ್ಯ ಬೆಲ್ಲ’ವನ್ನು, ಮಾನವ ಬಳಕೆಗೆ ಯೋಗ್ಯವಲ್ಲ ಎಂಬ ಕಾರಣ ನೀಡಿ ಅಲ್ಲಿಯ ಸರ್ಕಾರ ತಿರಸ್ಕರಿಸಿದೆ. ಗುಜರಾತ್‌ ಈಗಾಗಲೇ ಮಂಡ್ಯ ಬೆಲ್ಲ ಖರೀದಿಯನ್ನು ನಿಷೇಧಿಸಿದ್ದು, ಕೇರಳ ಎರಡನೇ ರಾಜ್ಯವಾಗಿದೆ.

‘ಸಕ್ಕರೆ ನಾಡು’ ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆ ಈಗ ಕಳಪೆ ಗುಣಮಟ್ಟದ, ರಾಸಾಯನಿಕಯುಕ್ತ ಬೆಲ್ಲ ಉತ್ಪಾದನೆಗೆ ಕುಖ್ಯಾತಿ ಪಡೆಯುತ್ತಿದೆ. ಕೇರಳದಲ್ಲಿ ಪಡಿತರ ಯೋಜನೆಯಡಿ ವಿತರಣೆಗೆ ‘ಮಂಡ್ಯ ಬೆಲ್ಲ’ ಎಂಬ ಬ್ರ್ಯಾಂಡ್‌ನಡಿ ಎಪಿಎಂಸಿ ವರ್ತಕರು ಬೆಲ್ಲ ಕಳುಹಿಸುತ್ತಿದ್ದರು. ಇಲ್ಲಿಯವರೆಗೆ 20 ಸಾವಿರ ಟನ್‌ ಬೆಲ್ಲ ಮಾರಾಟ ಮಾಡಲಾಗಿದೆ.

‘ಬೆಲ್ಲ ತಯಾರಿಕೆಯಲ್ಲಿ ನಿಷೇಧಿತ ರಾಸಾಯನಿಕ ಹಾಗೂ ಸಕ್ಕರೆ ಬಳಸಲಾಗಿದೆ ಎಂಬ ಅಂಶ ಪತ್ತೆಯಾಗಿರುವುದರಿಂದ ಮಂಡ್ಯ ಬೆಲ್ಲ ಖರೀದಿಯನ್ನು ಕೇರಳ ಸರ್ಕಾರ ಸ್ಥಗಿತಗೊಳಿಸಿದೆ. ಬೆಲ್ಲ ಕೊಂಡೊಯ್ದಿದ್ದ ನೂರಾರು ಲಾರಿಗಳು ವಾಪಸ್‌ ಬಂದಿವೆ’ ಎಂದು ಹೆಸರು ಹೇಳಲಿಚ್ಛಿಸದ ಎಪಿಎಂಸಿ ವರ್ತಕರೊಬ್ಬರು ತಿಳಿಸಿದರು.

ಮೂರು ದಿನಗಳ ಹಿಂದಷ್ಟೇ ಎಪಿಎಂಸಿ ಗೋದಾಮುಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು ಕಳಪೆ ಬೆಲ್ಲ ಜಪ್ತಿ ಮಾಡಿದ್ದಾರೆ. ಕಳಪೆ ಬೆಲ್ಲ ತಯಾರಿಸುತ್ತಿದ್ದ ಆಲೆಮನೆಗಳು ಹಾಗೂ ಮಾರಾಟ ಮಾಡುತ್ತಿದ್ದ ಟ್ರೇಡಿಂಗ್‌ ಕಂಪನಿಗಳ ಬಾಗಿಲು ಮುಚ್ಚಿಸಿದ್ದಾರೆ.

ಬೆಲ್ಲದ ದಂಧೆ: ‘ಮಂಡ್ಯ ಬೆಲ್ಲ’ ಹೆಸರಿನಲ್ಲಿ ವರ್ತಕರು ಹಾಗೂ ಕೆಲ ಆಲೆಮನೆ ಮಾಲೀಕರು ದೊಡ್ಡ ಮಟ್ಟದ ದಂಧೆ ನಡೆಸಿರುವುದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಕಳಪೆ ಬೆಲ್ಲ ತರಿಸಿ, ಅದಕ್ಕೆ ಸಕ್ಕರೆ, ರಾಸಾಯನಿಕ ಸೇರಿಸಿ ಪುನರ್‌ ಉತ್ಪಾದಿಸಿ ‘ಮಂಡ್ಯ ಬೆಲ್ಲ’ ಬ್ರ್ಯಾಂಡ್‌ ಹೆಸರಲ್ಲಿ ಮಾರಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಒಂದು ಟನ್‌ ಕಬ್ಬಿನಿಂದ 90 ಕೆ.ಜಿ ಬೆಲ್ಲ ತಯಾರಿಸಬಹುದು. ಆದರೆ, ಕೇವಲ ಒಂದು ಟನ್‌ ಕಬ್ಬು ಬಳಸಿ, ಕಳಪೆ ಬೆಲ್ಲ ಹಾಗೂ ಸಕ್ಕರೆಯಿಂದ 30 ಕ್ವಿಂಟಲ್‌ ಬೆಲ್ಲವನ್ನು ಪುನರ್‌ ಉತ್ಪಾದನೆ ಮಾಡಲಾಗಿದೆ. ಬೆಲ್ಲ ತಯಾರಿಕೆಗೆ ಕಬ್ಬಿನ ಅವಶ್ಯಕತೆಯೇ ಇಲ್ಲ ಎಂಬಂತಾಗಿದೆ. ಹೊರರಾಜ್ಯಗಳಿಂದ ಬಂದು ಆಲೆಮನೆ ನಡೆಸುತ್ತಿರುವ ಮಾಲೀಕರು ಹಾಗೂ ಕೆಲ ವರ್ತಕರು ಮಂಡ್ಯ ಜಿಲ್ಲೆಯ ಹೆಸರನ್ನು ಹಾಳು ಮಾಡಿದ್ದಾರೆ’ ಎಂದು ಆಲೆಮನೆ ಮಾಲೀಕರ ಸಂಘದ ಅಧ್ಯಕ್ಷ ಸೋಮಶಂಕರೇಗೌಡ ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ರೈತರ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿ ವ್ಯವಸ್ಥೆ ಇದೆ. ಆದರೆ ಹೊರರಾಜ್ಯದಿಂದ ಬಂದ ಕಳಪೆ ಬೆಲ್ಲವನ್ನು ಇಲ್ಲಿ ಮಾರಾಟ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.

‘ಬೆಲ್ಲ ಕಳಪೆಯಾಗಿದ್ದ ಕಾರಣ ಕೇರಳದಲ್ಲಿ ನಮ್ಮ ಬೆಲ್ಲದ ಖರೀದಿ ಸ್ಥಗಿತಗೊಂಡಿದೆ. ಸ್ಥಳೀಯ ರೈತರ ಅನುಕೂಲಕ್ಕಾಗಿ ಹೊರರಾಜ್ಯದ ಕಳಪೆ ಬೆಲ್ಲ ವಹಿವಾಟು ಮಾಡದಂತೆ ವರ್ತಕರಿಗೆ ಸೂಚನೆ ನೀಡಿದ್ದೇನೆ’ ಎಂದು ಎಪಿಎಂಸಿ ಅಧ್ಯಕ್ಷೆ ಪ್ರೇಮಾ ತಿಮ್ಮೇಗೌಡ ತಿಳಿಸಿದರು.

‘ಆತ್ಮನಿರ್ಭರ ಭಾರತ’ ಜಾರಿಗೆ ಹಿನ್ನಡೆ: ಆತ್ಮನಿರ್ಭರ ಭಾರತ ಯೋಜನೆಯ, ‘ಒಂದು ಜಿಲ್ಲೆ ಒಂದು ಉತ್ಪನ್ನ’ದಡಿ ಮಂಡ್ಯ ಬೆಲ್ಲ ಆಯ್ಕೆಯಾಗಿದೆ. ಆದರೆ ಇಲ್ಲಿ ಗುಣಮಟ್ಟದ ಬೆಲ್ಲ ಉತ್ಪಾದನೆಯಾಗದ ಕಾರಣ ಯೋಜನೆ ಜಾರಿಗೆ ಹಿನ್ನಡೆಯಾಗಿದೆ.

ಈ ಬಗ್ಗೆ ಸಭೆ ನಡೆಸಿರುವ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಗುಣಮಟ್ಟದ ಬೆಲ್ಲ ತಯಾರಿಕೆಗೆ ಆದ್ಯತೆ ನೀಡಲು ಸೂಚಿಸಿದ್ದಾರೆ.

‘ಆಲೆಮನೆ ಮಾಲೀಕರ ಸಭೆ ನಡೆಸಿ ಗುಣಮಟ್ಟಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ. ನಂತರ ಆತ್ಮನಿರ್ಭರ ಭಾರತ ಯೋಜನೆಯಡಿ
ಆಲೆಮನೆಗಳಿಗೆ ಪುನಶ್ಚೇತನ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತಿಳಿಸಿದರು.

* ಎಪಿಎಂಸಿ ಗೋದಾಮುಗಳಲ್ಲಿ ಪತ್ತೆಯಾದ ಬೆಲ್ಲದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

- ನಾಗರಾಜು, ಆಹಾರ ಸುರಕ್ಷತಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT